Site icon Vistara News

ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಬಾಳ ಸಂಗಾತಿ ಡಾ. ಗುರುಪ್ರೀತ್‌ ಕೌರ್‌: ಯಾರೀ ಚೆಲುವೆ, ಮೊದಲ ಭೇಟಿ ಎಲ್ಲಿ?

ಭಗವಂತ್‌ ಮಾನ್‌ ಮದುವೆ ಸಂಭ್ರಮ

ಚಂಡೀಗಢ: ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಮತ್ತು ಡಾ. ಗುರುಪ್ರೀತ್‌ ಕೌರ್‌ ಹೊಸ ಬಾಳಿನ ಹೊಸಿಲು ತುಳಿದು ಸಂಭ್ರಮಿಸಿದ್ದಾರೆ. ಗುರುವಾರ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಅತ್ಯಂತ ಆತ್ಮೀಯರ ಉಪಸ್ಥಿತಿಯಲ್ಲಿ ವೈವಾಹಿಕ ಜೀವನವನ್ನು ಪ್ರವೇಶಿಸಿದರು. ಹಾಗಿದ್ದರೆ, ಮಾನ್‌ ಅವರ ಬಾಳ ಸಂಗಾತಿಯಾಗಿರುವ ಡಾ. ಗುರುಪ್ರೀತ್‌ ಯಾರು? ಅವರಿಬ್ಬರ ಮೊದಲ ಭೇಟಿ ಎಲ್ಲಾಯ್ತು? ಈ ನವ ಜೋಡಿಯ ಕುತೂಹಲಕಾರಿ ಮಾಹಿತಿ ಇಲ್ಲಿದೆ.

೧. ಗುರುಪ್ರೀತ್‌ ಕೌರ್‌ ಅವರು ಮೂಲತಃ ಹರಿಯಾಣದ ಕುರುಕ್ಷೇತ್ರದ ಪಿಹೋವಾ ಗ್ರಾಮದವರು. ಪ್ರಸಕ್ತ ಪಂಜಾಬ್‌ನ ರಾಜಪುರದಲ್ಲಿ ನೆಲೆಸಿದ್ದಾರೆ. ಕೃಷಿ ಹಿನ್ನೆಲೆಯ ಕುಟುಂಬದ ಮೂರನೇ ಮಗಳು ಈಕೆ. ಇಡೀ ಕುಟುಂಬವೇ ಈ ಹರಿಯಾಣದಿಂದ ರಾಜಪುರಕ್ಕೆ ಶಿಫ್ಟ್‌ ಆಗಿದೆ.

ಮದುವೆ ಮುನ್ನ ನೇರಳೆ ದಿರಸಿನಲ್ಲಿ ಮಿಂಚಿದ ಗುರುಪ್ರೀತ್‌

೨. ಅಂಬಾಲಾ ಜಿಲ್ಲೆಯ ಮುಲ್ಲಾನಾದಲ್ಲಿರುವ ಮಹರ್ಷಿ ಮಾರ್ಕಾಂಡೇಯ ವಿವಿಯ ಮೆಡಿಕಲ್‌ ಕಾಲೇಜಿನಲ್ಲಿ ಅವರು ವೈದ್ಯಕೀಯ ಪದವಿ ಪಡೆದಿದ್ದಾರೆ.

೩. ಗುರುಪ್ರೀತ್‌ ಅವರು ತುಂಬ ಹಿಂದಿನಿಂದಲೇ ಭಗವಂತ್‌ ಮಾನ್‌ ಕುಟುಂಬದ ಜತೆ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಾನ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ದಿನವೂ ಉಪಸ್ಥಿತರಿದ್ದರು.

೪. ಗುರುಪ್ರೀತ್‌ ಸಿಂಗ್‌ ಅವರಿಗೆ ಮಾನ್‌ ಕುಟುಂಬದ ಪರಿಚಯ ಆಗಿರುವುದು ಒಂದೂವರೆ ವರ್ಷದ ಹಿಂದೆ. ಮಾನ್‌ ಅವರ ತಾಯಿಯೇ ಮಗನಿಗೆ ಈ ವಧುವನ್ನು ಹುಡುಕಿದ್ದಾರಂತೆ.

೫. ಡಾ. ಗುರುಪ್ರೀತ್‌ ಅವರಿಗೆ ರಾಜಕೀಯದಲ್ಲಿ ಭಾರಿ ಆಸಕ್ತಿ ಇದ್ಯಂತೆ. ಆದರೆ, ಮದುವೆ ಆಗುವವರೆಗೆ ಅದೆಲ್ಲ ಬೇಡ ಅಂದಿದ್ದರಂತೆ ಅಪ್ಪ-ಅಮ್ಮ. ಈಗ ಮಾನ್‌ ಅವರ ಜತೆಗೆ ಮದುವೆ ಆಗಿರುವುದರಿಂದ ರಾಜಕೀಯದ ಬಾಗಿಲು ತೆರೆಯಬಹುದು.

೬. ಮಾನ್‌ ಅವರ ವಿಚಾರದಲ್ಲಿ ಏನಿಷ್ಟ ಅಂತ ಕೇಳಿದರೆ, ಅವರು ತೆಗೆದುಕೊಳ್ಳುವ ದೃಢ ಮತ್ತು ಧೈರ್ಯವಂತ ನಿರ್ಧಾರಗಳು ಎನ್ನುತ್ತಾರೆ ಗುರುಪ್ರೀತ್.‌ ಸ್ಟಾಂಡ್‌ ಅಪ್‌ ಕಾಮಿಡಿಯನ್‌ ಆಗಿಯೂ ಇಷ್ಟಪಡುತ್ತಾರಂತೆ ಮಾನ್‌ ಅವರನ್ನು.

೭. ಭಗವಂತ್‌ ಮಾನ್‌ಗೆ ಇದು ಎರಡನೇ ಮದುವೆ. ೨೦೧೫ರ ಮಾರ್ಚ್‌ನಲ್ಲಿ ಅವರು ತಮ್ಮ ಮೊದಲ ಪತ್ನಿ ಇಂದ್ರಪ್ರೀತ್‌ ಕೌರ್‌ಗೆ ವಿಚ್ಛೇದನ ನೀಡಿದ್ದರು. ಇಬ್ಬರೂ ಪರಸ್ಪರ ಸಮ್ಮತಿಯಿಂದಲೇ ದೂರವಾಗಿದ್ದರು.

೮. ಭಗವಂತ್‌ ಮಾನ್‌ ಅವರಿಗೆ ಮೊದಲ ಪತ್ನಿಯಲ್ಲಿ ಇಬ್ಬರು ಮಕ್ಕಳಿದ್ದಾರೆ. ೨೧ ವರ್ಷ ಮಗಳು ಸೀರತ್‌ ಕೌರ್‌ ಮಾನ್‌ ಮತ್ತು ೧೭ ವರ್ಷದ ಮಗ ದಿಲ್ಶಾನ್‌ ಸಿಂಗ್‌ ಮಾನ್‌. ಇಬ್ಬರೂ ಅಮೆರಿಕದಲ್ಲಿದ್ದಾರೆ. ಮಾರ್ಚ್‌ನಲ್ಲಿ ನಡೆದ ಪ್ರಮಾಣವಚನ ಸ್ವೀಕಾರಕ್ಕೆ ಅವರೂ ಬಂದಿದ್ದರು.

ಮದುಮಗನಾಗಿ ಮಿಂಚಿದ ಭಗವಂತ್

೯. ಇಂದ್ರಪ್ರೀತ್‌ ಕೌರ್‌ ಅವರು ಅಮೆರಿಕದಲ್ಲಿ ಉದ್ಯೋಗಿಯಾಗಿದ್ದಾರೆ. ಅವರು ಮಾನ್‌ ಅವರನ್ನೂ ಅಲ್ಲಿಗೆ ಬರುವಂತೆ ಒತ್ತಾಯಿಸುತ್ತಿದ್ದರು. ಆದರೆ, ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದ ಮಾನ್‌ ಇದಕ್ಕೆ ಒಪ್ಪಿರಲಿಲ್ಲ. ಜತೆಯಾಗಿ ಬಾಳುವುದು ಕಷ್ಟ ಎಂದು ಅರಿತು ಅವರಿಬ್ಬರು ಬೇರೆ ಬೇರೆಯಾಗಿದ್ದರು.

10. ಸಂಗ್ರೂರ್‌ನ ಸತೌಜ್‌ ಗ್ರಾಮದ ಭಗವಂತ್‌ ಮಾನ್‌ ಅವರಿಗೆ ಏಳು ವರ್ಷ ಇದ್ದಾಗಲೇ ಅವರ ಅಣ್ಣ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು.

೧೧. ಸ್ಟಾಂಡ್‌ ಅಪ್‌ ಕಾಮೆಡಿಯನ್‌ ಆಗಿದ್ದ ಮಾನ್‌ ೧೭ ವರ್ಷದಲ್ಲೇ ಸೆಲೆಬ್ರಿಟಿ ಸ್ಥಾನಮಾನ ಪಡೆದಿದ್ದರು.

೧೨. ೨೦೧೧-೧೨ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು ಮಾನ್‌. ಬಳಿಕ ೨೦೧೪ರಲ್ಲೂ ಸ್ಪರ್ಧಿಸಿದಾಗ ಪತ್ನಿ ಇಂದ್ರಜಿತ್‌ ಕೌರ್‌ ಆಕ್ಷೇಪಿಸಿದ್ದರು. ನಾನು ಸೋತರೆ ಅಮೆರಿಕಕ್ಕೆ ಬಂದಿರ್ತೇನೆ ಅಂದಿದ್ದರು ಮಾನ್‌. ಅದರೆ, ಗೆದ್ದುಬಿಟ್ಟರು! ಕೊನೆಗೆ ಪತ್ನಿಯನ್ನೇ ಬಿಡಬೇಕಾಯಿತು.

Exit mobile version