Site icon Vistara News

Mohan Yadav: ಯಾರಿವರು ಮಧ್ಯ ಪ್ರದೇಶದ ನೂತನ ಸಿಎಂ ಡಾ. ಮೋಹನ್ ಯಾದವ್?

Who is Madhya Pradesh New Chief minister Mohan Yadav?

ಭೋಪಾಲ್: ಎಲ್ಲರ ಅಂದಾಜುಗಳನ್ನು ಹುಸಿ ಮಾಡಿರುವ ಭಾರತೀಯ ಜನತಾ ಪಾರ್ಟಿಯ (BJP Party) ಹೈಕಮಾಂಡ್ ಸಂಪೂರ್ಣವಾಗಿ ಹೊಸ ಮುಖವನ್ನೇ ಮಧ್ಯ ಪ್ರದೇಶಕ್ಕೆ (Madhya Pradesh) ಮುಖ್ಯಮಂತ್ರಿಯನ್ನಾಗಿ (Chief Minister) ಆಯ್ಕೆ ಮಾಡಿದೆ. ದಕ್ಷಿಣ ಉಜ್ಜೈನ್ (Ujjain South) ಕ್ಷೇತ್ರದ ಶಾಸಕ, 58 ವರ್ಷದ ಮೋಹನ್ ಯಾದವ್ (Mohan Yadav) ಅವರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಇದರೊಂದಿಗೆ ಹುದ್ದೆಯ ಭಾರೀ ನಿರೀಕ್ಷೆಯಲ್ಲಿದ್ದ ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರದ ಮಾಜಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ನಿರಾಸೆಯಾಗಿದೆ. ಮಧ್ಯ ಪ್ರದೇಶದ ಆಚೆಗೆ ಅಪರಿಚಿತರಾಗಿರುವ ಮೋಹನ್ ಯಾದವ್ ಯಾರು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಮೋಹನ್ ಯಾದವ್ ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಮಧ್ಯಪ್ರದೇಶದಲ್ಲಿ ಅರ್ಧದಷ್ಟು ಮತದಾರರನ್ನು ಹೊಂದಿರುವ ಒಬಿಸಿ ಸಮುದಾಯವನ್ನು ಒಲಿಸಿಕೊಳ್ಳಲು ಬಿಜೆಪಿ ಯೋಜನೆಯನ್ನು ಹಾಕಿಕೊಂಡಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಈ ನಡೆಯ ಲಾಭ ತಂದುಕೊಡಲಿದೆಯಾ ಕಾದು ನೋಡಬೇಕು.

ಉಜ್ಜೈನ ದಕ್ಷಿಣ ಕ್ಷೇತ್ರದಿಂದ ಮಧ್ಯ ಪ್ರದೇಶಕ್ಕೆ ಆಯ್ಕೆಯಾಗುವ ಮೋಹನ್ ಯಾದವ್ ಅವರು 2013ರಲ್ಲಿ ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ಧುಮುಕಿದರು. ಬಳಿಕ 2018 ಮತ್ತು 2023ರಲ್ಲೂ ಗೆಲುವು ಸಾಧಿಸಿದರು. ಈಗ ಮಧ್ಯ ಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಸಂಪುಟದಲ್ಲಿ ಅವರು ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದಾರೆ.

Mohan Yadav ಕಾನೂನು, ಎಂಬಿಎ ಪದವೀಧರ, ಪಿಎಚ್‌ಡಿ ಹೋಲ್ಡರ್

ಮೋಹನ್ ಯಾದವ್ ಅವರು 1965 ಮಾರ್ಚ್ 25ರಂದು ಉಜ್ಜೈನ್‌ನಲ್ಲಿ ಜನಿಸಿದರು. ಇವರ ತಂದೆ ಪೂನಮ್ ಚಂದ ಯಾದವ್. ಸೀಮಾ ಎಂಬುವವರನ್ನು ವಿವಾಹವಾಗಿದ್ದಾರೆ. ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ. ಶೈಕ್ಷಣಿಕಾಗಿ ಸಾಕಷ್ಟು ಅರ್ಹತೆಯನ್ನು ಹೊಂದಿದ್ದಾರೆ. ಮೋಹನ್ ಯಾದವ್ ಅವರು ಬಿಎಸ್ಸಿ, ಎಲ್‌ಎಲ್‌ಬಿ, ಎಂಎ, ಎಂಬಿಎ ಮತ್ತು ಪಿಎಚ್‌ಡಿಯನ್ನು ಮಾಡಿದ್ದಾರೆ.

ಸಾಕಷ್ಟು ವಿದ್ಯಾರ್ಹತೆಯನ್ನು ಹೊಂದಿರುವ ಕಾರಣಕ್ಕಾಗಿ ಪ್ರಸಕ್ತ ಶಿವರಾಜ್ ಸಿಂಗ್ ಚೌಹಾಣ್ ಸಚಿವ ಸಂಪುಟದಲ್ಲಿ ಅವರು ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆರೆಸ್ಸೆಸ್ ಬೆಂಬಲವನ್ನು ಹೊಂದಿರುವ ಮೋಹನ್ ಯಾದವ್ ಅವರು ಕ್ಲೀನ್ ಇಮೇಜ್ ವ್ಯಕ್ತಿಯಾಗಿದ್ದಾರೆ. ಮಧ್ಯ ಪ್ರದೇಶದ ಕುಸ್ತಿ ಫೆಡರೇಷನ್‌ನಲ್ಲಿ ಮೋಹನ್ ಯಾದವ್ ಅವರು ಸಕ್ರಿಯರಾಗಿದ್ದಾರೆ.

ಮತ್ತಿಬ್ಬರು ಸಚಿವರು ಡಿಸಿಎಂಗಳು

ನಿರ್ಗಮಿತ ಹಣಕಾಸು ಸಚಿವ ಮತ್ತು ಮಂಡಸೌರ್‌ನಿಂದ ಎರಡು ಬಾರಿ ಶಾಸಕರಾಗಿರುವ ಜಗದೀಶ್ ದೇವರಾ ಮತ್ತು ರೇವಾ ಕ್ಷೇತ್ರದಿಂದ ಆಯ್ಕೆಯಾಗಿರುವ, ನಿರ್ಗಮಿತ ಸಾರ್ವಜನಿಕ ಸಂಪರ್ಕ ಇಲಾಖೆಯ ಸಚಿವ ಶಾಸಕ ರಾಜೇಂದ್ರ ಶುಕ್ಲಾ ಅವರು ಉಪ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಮಧ್ಯ ಪ್ರದೇಶ ವಿಧಾನಸಭೆಯ ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಲಾಗಿದೆ. ವಾಸ್ತವದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಇವರು ಪ್ರಮುಖ ಸ್ಪರ್ಧಿಯಾಗಿದ್ದರು.

ಈ ಸುದ್ದಿಯನ್ನೂ ಓದಿ: Mohan Yadav: ಮಧ್ಯಪ್ರದೇಶಕ್ಕೆ ಮೋಹನ್ ಯಾದವ್ ನೂತನ ಮುಖ್ಯಮಂತ್ರಿ

Exit mobile version