ನವದೆಹಲಿ: ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಇತ್ತೀಚೆಗೆ ದಿಲ್ಲಿ ಮಾರ್ಕೆಟ್‌ಗೆ ಭೇಟಿ ನೀಡಿದ್ದರು. ಅಲ್ಲದೇ, ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದ ತುಣುಕೊಂದು ಇನ್‌ಸ್ಟಾಗ್ರಾಮ್‌ದಲ್ಲಿ ಪೋಸ್ಟ್ ಮಾಡಲಾಗಿದ್ದು, ಸಖತ್ ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವೈಯಕ್ತಿಕ ಕೆಲವು ಸಂಗತಿಗಳು ಬಹಿರಂಗಗೊಂಡಿವೆ. ಸಂದರ್ಶನವು ಸಾಕಷ್ಟು ಕುತೂಹಲ ಮೂಡಿಸಿದೆ. ಈಗ ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ ಅವರು ರುಚಿಕಟ್ಟಾದ ಅಡುಗೆ ಮಾಡುವ ರಾಜಕಾರಣಿ ಯಾರು ಎಂಬ ಮಾಹಿತಿಯನ್ನು ನೀಡಿದ್ದಾರೆ.
ಖಾನೇ ಮೇ ಕ್ಯಾ ಹೈ ಹೆಸರಿನ ಯೂಟ್ಯೂಬ್ ಚಾನೆಲ್‌ಗೆ ರಾಹುಲ್ ಗಾಂಧಿ ಅವರು ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು, ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರು ಅತ್ಯುತ್ತಮ ಅಡುಗೆ ಮಾಡುತ್ತಾರೆಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗಿದ್ದೂ, ತಮ್ಮ ತಾಯಿ (ಸೋನಿಯಾ ಗಾಂಧಿ) ಮಾಡುವ ಅಡುಗೆ ದಿ ಬೆಸ್ಟ್ ಎಂದು ರಾಹುಲ್ ಹೇಳಿಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್
ನನ್ನ ಸಹೋದರಿಗೆ ಇಷ್ಟ ಆಗಲ್ಲ. ಆದರೆ, ನನ್ನ ಪ್ರಕಾರ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅಡುಗೆಯಲ್ಲಿ ಎತ್ತಿದ ಕೈ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಹಾಗೆಯೇ, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಚೆನ್ನಾಗಿಯೇ ಅಡುಗೆ ಮಾಡುತ್ತಾರೆಂದು ರಾಹುಲ್ ಹೇಳಿಕೊಂಡಿದ್ದಾರೆ.
ಬೆಳಗ್ಗೆ ಕಾಫಿ ಮತ್ತು ಸಂಜೆ ಟೀ ಕುಡಿಯಲು ಹೆಚ್ಚು ಇಷ್ಟ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದಲ್ಲದೆ, ಅವರು ಫ್ರೆಂಚ್ ಸಿಹಿಭಕ್ಷ್ಯಗಳಿಗಿಂತ “ಭಾರತೀಯ ಮಿಥಾಯ್”ಗೆ ಹೆಚ್ಚು ಆದ್ಯೆತ ನೀಡುತ್ತಾರೆ. ಸಿಹಿ ಮತ್ತು ಮಸಾಲೆಯುಕ್ತ ಆಹಾರದ ನಡುವೆ ಆಯ್ಕೆಯನ್ನು ನೀಡಿದರೆ, ಅವರು ಮೊದಲಿನದನ್ನು ಆರಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: Rahul Gandhi: ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ 5 ಸಾವಿರ ರೂಪಾಯಿ ದೇಣಿಗೆ ನೀಡಿದ ರಾಹುಲ್ ಗಾಂಧಿ
ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿ ಅವರು ಓಲ್ಡ್ ದಿಲ್ಲಿಯ ಮಟಿಯಾ ಮಹಲ್ ಮಾರುಕಟ್ಟೆ ಮತ್ತು ಬಂಗಾಳಿ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಈ ಪ್ರದೇಶಗಳ ಜನಪ್ರಿಯ ಭಕ್ಷ್ಯಗಳನ್ನು ಸೇವಿಸಿದ್ದರು. ಮಟಿಯಾ ಮಹಲ್ ಪ್ರದೇಶದ ಪ್ರಸಿದ್ಧ ಶರಬತ್ ಮಾರಾಟಗಾರರನ್ನು ಭೇಟಿ ಮಾಡಿದ್ದರು. ಬಂಗಾಳಿ ಮಾರುಕಟ್ಟೆಯಲ್ಲಿ ನಾಥು ಸ್ವೀಟ್ಸ್ ಮಳಿಗೆಯಲ್ಲಿ ಗೋಲ್‌ಗಪ್ಪ ಸವಿದಿದ್ದರು.
ಶನಿವಾರ ಸರ್ಕಾರಿ ಬಂಗಲೆ ತೊರೆದ ರಾಹುಲ್ ಗಾಂಧಿ
2019ರಲ್ಲಿ ಮೋದಿ ಉಪನಾಮಕ್ಕೆ ಮಾಡಿದ ಅಪಮಾನದ ಕೇಸ್ನಲ್ಲಿ ದೋಷಿಯಾಗಿ, ಸಂಸದ ಸ್ಥಾನದಿಂದಲೂ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇಂದು ದೆಹಲಿಯಲ್ಲಿರುವ ತಮ್ಮ ಸರ್ಕಾರಿ ಬಂಗಲೆಯನ್ನು ತೊರೆದಿದ್ದಾರೆ. ಲ್ಯುಟೆನ್ಸ್ ದೆಹಲಿಯಲ್ಲಿರುವ 12 ತುಘಲಕ್ ಲೇನ್ನಲ್ಲಿ ಇರುವ ಸರ್ಕಾರಿ ಬಂಗಲೆಯಲ್ಲಿ ರಾಹುಲ್ ಗಾಂಧಿ 2005ರಿಂದಲೂ ವಾಸವಾಗಿದ್ದರು. ಆದರೆ ಸಂಸದನ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಲೋಕಸಭಾ ವಸತಿ ಕಾರ್ಯಾಲಯ ರಾಹುಲ್ ಗಾಂಧಿಯವರಿಗೆ ನೋಟಿಸ್ ನೀಡಿ, ಏಪ್ರಿಲ್ 22ರೊಳಗೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಸೂಚಿಸಿತ್ತು. ಅದರಂತೆ ಇಂದು ಅವಧಿ ಮುಗಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಬಂಗಲೆಯನ್ನು ಬಿಟ್ಟಿದ್ದಾರೆ.
ಇಂದು ಸರ್ಕಾರಿ ಬಂಗಲೆಯನ್ನು ತೊರೆದ ಬೆನ್ನಲ್ಲೇ ಮಾಧ್ಯಮಗಳ ಜತೆ ಮಾತನಾಡಿದ ರಾಹುಲ್ ಗಾಂಧಿ ‘ನಾನು ಸತ್ಯವನ್ನು ಹೇಳಿದ್ದಕ್ಕೆ ಬೆಲೆ ತೆರುತ್ತಿದ್ದೇನೆ. ಅದಕ್ಕಾಗಿಯೇ ಬಂಗಲೆ ಬಿಡಬೇಕಾಗಿ ಬಂತು’ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಏಪ್ರಿಲ್ 11ರಂದು ಮಾತನಾಡಿದ್ದ ರಾಹುಲ್ ಗಾಂಧಿ ‘ನಾನು ಅನರ್ಹತೆಗೆಲ್ಲ ಹೆದರುವುದಿಲ್ಲ. ನನಗೆ ಸರ್ಕಾರಿ ಬಂಗಲೆಯಲ್ಲಿ ವಾಸಿಸಲು ಆಸಕ್ತಿಯೂ ಇಲ್ಲ’ ಎಂದು ಹೇಳಿದ್ದರು. ‘ಸಂಸದ ಸ್ಥಾನ ಎಂಬುದು ಒಂದು ಟ್ಯಾಗ್. ಇದೊಂದು ಸ್ಥಾನ ಮತ್ತು ಹುದ್ದೆ. ಬಿಜೆಪಿ ನನ್ನಿಂದ ಈ ಸಂಸದನ ಸ್ಥಾನ/ಟ್ಯಾಗ್/ಹುದ್ದೆಯನ್ನು ಕಿತ್ತುಕೊಳ್ಳಬಹುದು. ಮನೆಯನ್ನೂ ಕಸಿದುಕೊಂಡು ನನ್ನನ್ನು ಜೈಲಿನಲ್ಲಿ ಇಡಬಹುದು. ಆದರೆ ನಾನು ವಯಾನಾಡ್ನ ಜನರನ್ನು ಪ್ರತಿನಿಧಿಸುವುದರಿಂದ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದಿದ್ದರು.