ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ -3 (Chandrayaan -3) ಲ್ಯಾಂಡರ್ ಅನ್ನು ಅನ್ನು ಯಶಸ್ವಿಯಾಗಿ ಇಳಿಸುವ ಮೂಲಕ ಮತ್ತೊಂದು ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸುವ ಮೂಲಕ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದಂತ ಸಾಧನೆ ಮಾಡಿದೆ. ಈ ಬೃಹತ್ ಯೋಜನೆಯ ಯಶಸ್ಸಿಗಾಗಿ ಸಾವಿರಾರು ಮಂದಿ ದುಡಿದಿದ್ದಾರೆ. ಅವರಲ್ಲಿ ವಿಜ್ಞಾನಿಗಳು, ತಂತ್ರಜ್ಞಾನ ಪರಿಣತರು, ಸಂಪರ್ಕ ಸಾಧನ ನಿರ್ಹವಣಾ ನುರಿತರು ಸೇರಿ ಹಲವರಿದ್ದಾರೆ. ಇವರೆಲ್ಲರಿಗೂ ಮುಖ್ಯಸ್ಥರಾಗಿದ್ದವರು ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್. ಇವರ ಜತೆಗೆ ಪ್ರಾಜೆಕ್ಟ್ ಡೈರೆಕ್ಟರ್ ವಿ. ಮುತ್ತುವೇಲ್, ಮಿಷನ್ ಆಪರೇಷನ್ ಡೈರೆಕ್ಟರ್ ಶ್ರೀಕಾಂತ್ ಮತ್ತು ಸ್ಯಾಟ್ಲೈಟ್ ಡೈರೆಕ್ಟರ್ ಶಂಕರನ್ ಪ್ರಮುಖವಾಗಿ ಕೆಲಸ ಮಾಡಿದ್ದರು. ವಿಶೇಷ ಏನೆಂದರೆ ತಂಡದಲ್ಲಿ ಇನ್ನೊಬ್ಬರಿದ್ದರು. ಅವರೇ ಅಸೊಸಿಯೇಟ್ ಪ್ರಾಜೆಕ್ಟ್ ಡೈರೆಕ್ಟರ್ ಕಲ್ಪನಾ ಕೆ. ಅವರು ಚಂದ್ರಯಾನ 3ರ ಹಿಂದಿರುವ ನಾರಿ ಶಕ್ತಿ. ಅವರ ಉಪಸ್ಥಿತಿಯು ಭಾರತದ ಬಾಹ್ಯಾಕಾಶ ಪರಿಶೋಧನೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಸೂಚಿಸಿದೆ ಹಾಗೂ ಹೊಸ ಪೀಳಿಗೆಗೆ ಸ್ಫೂರ್ತಿಯಾಗಿದೆ.
ಚಂದ್ರಯಾನ -3 ರ ಯಶಸ್ಸಿನ ಹಿಂದಿನ ಸ್ಫೂರ್ತಿದಾಯಕ ಶಕ್ತಿಯಾಗಿದ್ದ ಕಲ್ಪನಾ ಕೆ., ಇಸ್ರೋದ ಚಂದ್ರ ಪರಿಶೋಧನಾ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬದ್ಧತೆ, ಪರಿಶ್ರಮ ಹಾಗೂ ಬಾಹ್ಯಾಕಾಶದ ಕಡೆಗಿನ ಅವರ ಆಕರ್ಷಣೆಯೇ ಅವರಿಗೆ ಚಂದ್ರಯಾನದಂತಹ ದೊಡ್ಡ ಯೋಜನೆ ನೇತೃತ್ವ ಸಿಗುವಂತೆ ಮಾಡಿತು.
ಕಲ್ಪನಾ ಅವರ ಜವಾಬ್ದಾರಿ ಏನಾಗಿತ್ತು?
ಚಂದ್ರಯಾನ -3 ಯೋಜನೆಯ ಸಮಯದಲ್ಲಿ ಕಲ್ಪನಾ ಅವರ ಪ್ರತಿಭೆ ಅನಾವರಣಗೊಂಡಿದೆ. ಅಲ್ಲಿ ಚಂದ್ರನ ಲ್ಯಾಂಡರ್ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವಲ್ಲಿ ಮತ್ತು ಅನುಕೂಲಕ್ಕೆ ತಕ್ಕ ಹಾಗೆ ಸಿದ್ಧಪಡಿಸುವಲ್ಲಿ ಅವರ ಶ್ರಮವಿದೆ. ಸಂಕೀರ್ಣ ಎಂಜಿನಿಯರಿಂಗ್ ಸವಾಲುಗಳನ್ನು ಎದುರಿಸಿದ ಅವರು ಲ್ಯಾಂಡರ್ ನಿರ್ಮಾಣ ಮಾಡಿದ್ದಾರೆ.
ಕಲ್ಪನಾ ಕೆ. ಅವರು ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ (ಯುಆರ್ಎಚ್ಸಿ ) ಉಪ ಯೋಜನಾ ನಿರ್ದೇಶಕರಾಗಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅಂದ ಹಾಗೆ ಚಂದ್ರಯಾನ 3ರಲ್ಲಿ ಯಶಸ್ಸು ಸಾಧಿಸುವ ಜತೆಗೆ ಚಂದ್ರಯಾನ -2 ಮತ್ತು ಮಂಗಳಯಾನ ಯೋಜನೆಗಳಿಗೂ ಕೆಲಸ ಮಾಡಿದ್ದರು.
ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಯಶಸ್ವಿಯಾಗಿ ಇಳಿದ ನಂತರ, ಇಸ್ರೋದ ತಮ್ಮ ತಂಡವನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಚಂದ್ರಯಾನ -3ರ ಯಶಸ್ಸು ನಮ್ಮ ತಂಡಕ್ಕೆ ಅತ್ಯಂತ ಸ್ಮರಣೀಯ ಮತ್ತು ಸಂತೋಷದ ಕ್ಷಣವಾಗಿ ಉಳಿಯುತ್ತದೆ. ಚಂದ್ರಯಾನ -2 ಅನುಭವದ ನಂತರ ನಮ್ಮ ಬಾಹ್ಯಾಕಾಶ ನೌಕೆಯನ್ನು ಪುನರ್ನಿರ್ಮಿಸಲು ಪ್ರಾರಂಭಿಸಿದ ದಿನದಿಂದ ನಾವು ನಮ್ಮ ಗುರಿಯನ್ನು ದೋಷರಹಿತವಾಗಿ ಸಾಧಿಸಿದ್ದೇವೆ. ನಮ್ಮ ತಂಡ ಚಂದ್ರಯಾನ -3 ಅನ್ನು ಉಸಿರಾಡುತ್ತಿದೆ. ಪುನರಚನೆ ಸೇರಿದಂತೆ ಸೂಕ್ಷ್ಮವಾಗಿ ನಡೆಸಿದ ಎಲ್ಲಾ ಯೋಜನೆಗಳು ನಮ್ಮೆಲ್ಲರ ಪ್ರಯತ್ನದಿಂದ ಸಾಫಲ್ಯಗೊಂಡಿದೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ : Chandrayaan- 3 : ಚಂದ್ರನ ಮೇಲೆ ಇಳಿದ ಲ್ಯಾಂಡರ್ ಮಾಡಿದ ಮೊದಲ ಕೆಲಸವೇನು? ಅಪ್ಡೇಟ್ ಕೊಟ್ಟಿದೆ ಇಸ್ರೊ
ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ -3ರ ಯಶಸ್ವಿ ಲ್ಯಾಂಡಿಂಗ್ ಇಸ್ರೋದ ಪ್ರತಿಭಾವಂತ ಮನಸ್ಸುಗಳ ಜಾಣ್ಮೆ ಮತ್ತು ಸಹಯೋಗದ ಪ್ರಯತ್ನಗಳಿಗೆ ಸಾಕ್ಷಿ. ಈ ಗಮನಾರ್ಹ ಮಿಷನ್ ತನ್ನ ಉದ್ದೇಶಗಳನ್ನು ಆಶ್ಚರ್ಯಕರ ನಿಖರತೆಯೊಂದಿಗೆ ಸಾಧಿಸಿದೆ. ಮುಂದಿನ ವೈಜ್ಞಾನಿಕ ಪರಿಶೋಧನೆಗೆ ಅಮೂಲ್ಯ ಡೇಟಾವನ್ನು ನೀಡಿತು.
ಇಸ್ರೋ ಮತ್ತು ನಾರಿ ಶಕ್ತಿ
ಚಂದ್ರಯಾನ -3 ರ ಅದ್ಭುತ ಯಶಸ್ಸು ಬಾಹ್ಯಾಕಾಶ ಪರಿಶೋಧನೆ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಪ್ರಭಾವವನ್ನು ಪ್ರತಿನಿಧಿಸಿದೆ. ಕಲ್ಪನಾ ಕೆ ಅವರ ಗಮನಾರ್ಹ ಸಾಧನೆಗಳು ಲಿಂಗ ಅಡೆತಡೆಗಳು ನಿವಾರಿಸಿದೆ. ಭಾರತವು ಬಾಹ್ಯಾಕಾಶ ಅನ್ವೇಷಣೆಯಲ್ಲಿ ತನ್ನ ಪ್ರಾಮುಖ್ಯತೆಯನ್ನು ಪ್ರತಿಪಾದಿಸುತ್ತಲೇ ಇರುವಾಗ, ಕಲ್ಪನಾ ಕೆ ಅವರಂತಹ ಮಹಿಳೆಯರ ಸಾಧನೆಗಳು ಯುವ ಮನಸುಗಳಿಗೆ ಸ್ಫೂರ್ತಿಯಾಗಿದೆ.