Site icon Vistara News

Bharat Ratna: ಉತ್ತರ ಭಾರತದ ‘ಜನ ನಾಯಕ’ ಈ ಕರ್ಪೂರಿ ಠಾಕೂರ್!

Who is this Karpoori Thakur who received Bharat Ratna posthumously?

ನವದಹೆಲಿ: ಹಿಂದುಳಿದ ವರ್ಗದ ನಾಯಕರಾಗಿ ಗುರುತಿಸಿಕೊಂಡಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ(Former Bihar CM), ‘ಜನ ನಾಯಕ’ ಕರ್ಪೂರಿ ಠಾಕೂರ್ (Karpoori Thakur) ಅವರಿಗೆ ಕೇಂದ್ರ ಸರ್ಕಾರವು (Central Government) ಭಾರತ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಿದೆ(Bharat Ratna Award). ಲೋಹಿಯಾ ಚಿಂತನೆಯಿಂದ ಪ್ರೇರಿತರಾಗಿದ್ದ ಠಾಕೂರ್ ಅವರು 1970ರಿಂದ 1971ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಆಗ ಅವರು ಸಮಾಜವಾದಿ ಮತ್ತು ಭಾರತೀಯ ಕ್ರಾಂತಿ ದಳ ಪಕ್ಷದಲ್ಲಿದ್ದರು. ಮತ್ತೆ 1977ರಿಂದ 1979ರವರೆಗೆ ಎರಡನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿದ್ದರು. ಆಗ ಜನತಾ ಪಾರ್ಟಿಯಲ್ಲಿದ್ದರು.

ಕರ್ಪೂರಿ ಠಾಕೂರ್ ಅವರು ಉತ್ತರ ಭಾರತದಲ್ಲಿ ಹಿಂದುಳಿದ ವರ್ಗಗಳ ನಾಯಕರಾಗಿ ಗುರುತಿಸಿಕೊಂಡಿದ್ದರು. ಬಿಹಾರದ ರಾಜಕಾರಣದಲ್ಲಿ ಅಗ್ರಮಾನ್ಯರಾಗಿದ್ದರು. ನಾಯ್ (ಕ್ಷೌರಿಕ) ಸಮುದಾಯದಲ್ಲಿ ಗೋಕುಲ್ ಠಾಕೂರ್ ಮತ್ತು ರಾಮ್ದುಲಾರಿ ದೇವಿ ದಂಪತಿಗೆ ಕರ್ಪೂರಿ ಅವರು ಜನಿಸಿದರು. ಈಗ ಕರ್ಪುರಿ ಗ್ರಾಮ ಎಂದು ಕರೆಯಲಾಗುವ ಪಿತೌಂಜಿಯಾ ಗ್ರಾಮದಿಂದ ಹಿಡಿದು ಬಿಹಾರದ ಮುಖ್ಯಮಂತ್ರಿಯಾಗುವವರೆಗಿನ ಅವರ ಪಯಣವು ಸಮರ್ಪಣೆ ಮತ್ತು ಸಾರ್ವಜನಿಕ ಸೇವೆಗೆ ಸಾಕ್ಷಿಯಾಗಿದೆ.

1970 ರ ದಶಕದಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿ ಅವರ ಆಡಳಿತವು ವಿಶೇಷವಾಗಿ ಸಮಾಜದ ವಂಚಿತ ವರ್ಗಗಳಿಗೆ ನ್ಯಾಯ ಕಲ್ಪಿಸಲು ನಾಂದಿ ಹಾಡಿತು. ಹೃದಯವಂತ ಸಮಾಜವಾದಿ ನಾಯಕ ಠಾಕೂರ್ ಅವರು ತಮ್ಮ ವಿದ್ಯಾರ್ಥಿ ದಿನಗಳಲ್ಲಿ ರಾಷ್ಟ್ರೀಯವಾದಿ ವಿಚಾರಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು ಮತ್ತು ನಂತರ ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟವನ್ನು ಸೇರಿದರು. ಅವರ ರಾಜಕೀಯ ಸಿದ್ಧಾಂತವು ‘ಲೋಹಿಯಾ’ ಚಿಂತನೆಯ ಆಧಾರಿತವಾಗಿದ್ದು, ಇದು ಕೆಳಜಾತಿಗಳ ಸಬಲೀಕರಣಕ್ಕೆ ಒತ್ತು ನೀಡಿತು.

ಸರ್ಕಾರಿ ಸೇವೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸಮಾನ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದ್ದ ಮೀಸಲಾತಿಗಾಗಿ “ಕರ್ಪೂರಿ ಠಾಕೂರ್ ಫಾರ್ಮುಲಾ” ವನ್ನು ಪರಿಚಯಿಸಿದ್ದು ಠಾಕೂರ್ ಅವರ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಒಂದಾಗಿದೆ. 1978ರ ನವೆಂಬರ್‌ ತಿಂಗಳಲ್ಲಿ ಅವರು ಬಿಹಾರದಲ್ಲಿ ಹಿಂದುಳಿದ ವರ್ಗಗಳಿಗೆ 26% ಮೀಸಲಾತಿಯನ್ನು ಜಾರಿಗೆ ತಂದರು. ಇದು 1990 ರ ದಶಕದಲ್ಲಿ ಮಂಡಲ್ ಆಯೋಗದ ಶಿಫಾರಸುಗಳಿಗೆ ವೇದಿಕೆಯನ್ನು ಸಿದ್ಧಪಡಿಸಿತು. ಈ ನೀತಿಯು ಹಿಂದುಳಿದ ವರ್ಗಗಳಿಗೆ ಅಧಿಕಾರ ನೀಡುವುದಲ್ಲದೆ, ಹಿಂದಿಯ ಹೃದಯಭೂಮಿಯಲ್ಲಿ (ಉತ್ತರ ಭಾರತ) ರಾಜಕೀಯದ ಚಹರೆಯನ್ನು ಬದಲಿಸಿ, ಪ್ರಾದೇಶಿಕ ಪಕ್ಷಗಳ ಉದಯಕ್ಕೂ ಕಾರಣವಾಯಿತು.

ಶಿಕ್ಷಣ ಮಂತ್ರಿಯಾಗಿ ಠಾಕೂರ್ ಅವರು ಮೆಟ್ರಿಕ್ಯುಲೇಷನ್ ಹಂತದಲ್ಲಿ ಇಂಗ್ಲಿಷ್ ಅನ್ನು ಕಡ್ಡಾಯ ವಿಷಯವಾಗಿ ರದ್ದುಗೊಳಿಸಿದರು. ಇಂಗ್ಲಿಷ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನೇಕ ವಿದ್ಯಾರ್ಥಿಗಳಿಗೆ ತಡೆಗೋಡೆ ಎಂದು ಗುರುತಿಸಿದ್ದರು. ಅವರು ಹಲವಾರು ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದರು, ವಿಶೇಷವಾಗಿ ಹಿಂದುಳಿದ ಪ್ರದೇಶಗಳಲ್ಲಿ ಮತ್ತು 8 ನೇ ತರಗತಿಯವರೆಗಿನ ಶಿಕ್ಷಣವನ್ನು ಉಚಿತವಾಗಿ ನೀಡಿದರು. ಇದರಿಂದ ಶಾಲೆಯನ್ನು ತೊರೆಯುವ ಮಕ್ಕಳ ಸಂಖ್ಯೆಯಲ್ಲಿ ಸಾಕಷ್ಟು ಕಡಿಮೆಯಾಯಿತು.

ಠಾಕೂರ್ ಅವರ ಆಡಳಿತ ಪರಂಪರೆಯು ಶೈಕ್ಷಣಿಕ ಸುಧಾರಣೆಗಳನ್ನು ಮೀರಿ ವಿಸ್ತರಿಸಿದೆ. ಅವರು ಪ್ರಮುಖ ಭೂ ಸುಧಾರಣೆಗಳನ್ನು ಜಾರಿಗೆ ತಂದರು. ಜಮೀನ್ದಾರರಿಂದ ಭೂರಹಿತ ದಲಿತರಿಗೆ ಭೂಮಿಯನ್ನು ಮರುಹಂಚಿಕೆ ಮಾಡಲು ಕಾರಣವಾಯಿತು. ಪರಿಣಾಮ ಜನರು ಅವರನ್ನ ಜನ ನಾಯಕ ಎಂದು ಕರೆಯಲಾರಂಭಿಸಿದರು. ಸವಲತ್ತು ಪಡೆದ ವರ್ಗದಿಂದ ಗಮನಾರ್ಹ ಪ್ರತಿರೋಧ ಮತ್ತು ನಿಂದನೆಯನ್ನು ಎದುರಿಸುತ್ತಿದ್ದರೂ, ಠಾಕೂರ್ ಅವರ ನೀತಿಗಳು ಭವಿಷ್ಯದ ನಾಯಕರಿಗೆ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸುವುದನ್ನು ಮುಂದುವರಿಸಲು ಅಡಿಪಾಯವನ್ನು ಹಾಕಿದವು ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ.

ಈ ಸುದ್ದಿಯನ್ನೂ ಓದಿ: Bharat Ratna: ಕರ್ಪೂರಿ ಠಾಕೂರ್‌ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ

Exit mobile version