Site icon Vistara News

Chhattisgarh Election Result: ಛತ್ತೀಸ್‌ಗಢ ಸಿಎಂ ರೇಸ್‌ನಲ್ಲಿ ಸಾವೊ, ಚೌಧರಿ, ರಮಣ್ ಸಿಂಗ್!

Raman_Sao_Choudhary

ನವದೆಹಲಿ: ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಫಲಿತಾಂಶವು (Chhattisgarh Election Result) ಎಲ್ಲರ ನಿರೀಕ್ಷೆ ಮತಗಟ್ಟೆಗಳ ಸಮೀಕ್ಷೆಗಳನ್ನು (Exit Polls Results) ಉಲ್ಟಾ ಮಾಡಿದೆ. ಯಾರೂ ಬಿಜೆಪಿ (BJP Party) ಭಾರೀ ಜಯವನ್ನು ಸಾಧಿಸಲಿದೆ ಎಂದು ನಂಬಿರಲಿಲ್ಲ. ಆಡಳಿತಾರೂಢ ಕಾಂಗ್ರೆಸ್ (Congress Party) ಮತ್ತೊಂದು ಅವಧಿಗೆ ಆಯ್ಕೆಯಾಗಲಿದೆ ಎಂದು ಊಹಿಸಲಾಗಿತ್ತು. ಅಂತಿಮವಾಗಿ ಎಲ್ಲರ ಎಣಿಕೆ ಸುಳ್ಳಾಗಿದೆ; ಭಾರತೀಯ ಜನತಾ ಪಾರ್ಟಿ ಭರ್ಜರಿಯಾಗಿ ಗೆದ್ದಿದೆ. ರಾಜಸ್ಥಾನ ಮತ್ತು ಮಧ್ಯ ಪ್ರದೇಶದಂತೆ ಬಿಜೆಪಿ ಛತ್ತೀಸ್‌ಗಢದಲ್ಲೂ ಯಾವುದೇ ನಾಯಕರನ್ನು ಮುಖ್ಯಮಂತ್ರಿ ಅಭ್ಯರ್ಥಿ (CM candidate) ಎಂದು ಬಿಂಬಿಸಿರಲಿಲ್ಲ. ಹಾಗಾಗಿ, ಈಗ ಛತ್ತೀಸ್‌ಗಢದಿಂದ ಮುಖ್ಯಮಂತ್ರಿ ಯಾರಾಗುತ್ತಾರೆಂಬ ಕುತೂಹಲ ಮೂಡಿದೆ(Chhattisgarh CM). ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಜತೆಗೆ, ಅರುಣ್ ಸಾವೊ, ಒಪಿ ಚೌಧರಿ ಅವರ ಹೆಸರೂ ಕೇಳಿ ಬರುತ್ತಿವೆ. ಛತ್ತೀಸ್‌ಗಢ ವಿಧಾನಸಭೆಯ 90 ಸ್ಥಾನಗಳ ಪೈಕಿ ಬಿಜೆಪಿ 54 ಮತ್ತು ಕಾಂಗ್ರೆಸ್ 35 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಆರೆಸ್ಸೆಸ್‌ನ ಹಿರಿಯ ನಾಯಕ ಅಭಯ್‌ರಾಮ್ ಸಾವೋ ಅವರ ಪುತ್ರ ಅರುಣ್ ಅವರ ಹೆಸರು ಛತ್ತೀಸ್‌ಗಢ ಸಿಎಂ ಹುದ್ದೆಗೆ ಕೇಳಿ ಬರುತ್ತಿದೆ. 2000 ರಲ್ಲಿ ಛತ್ತೀಸ್‌ಗಢ ರಚನೆಯಾದಾಗಿನಿಂದಲೂ ಬಿಜೆಪಿ ರಾಜ್ಯ ಘಟಕವನ್ನು ಮುನ್ನಡೆಸಲು ನಂದಕುಮಾರ್ ಸಾಯಿ, ಶಿವಪ್ರತಾಪ್ ಸಿಂಗ್, ರಾಮಸೇವಕ್ ಪೈಕ್ರಾ ಮತ್ತು ವಿಕ್ರಮ್ ಉಸೇಂಡಿಯಂತಹ ಬುಡಕಟ್ಟು ನಾಯಕರನ್ನು ಹೆಚ್ಚಾಗಿ ಅವಲಂಬಿಸಿದೆ. ಆದರೆ, ಕಾಂಗ್ರೆಸ್‌ನ ನಾಯಕ, ಸಿಎಂ ಭೂಪೇಶ್ ಬಘೇಲ ಅವರ ಹಿಂದುಳಿದ ವರ್ಗಗಳ ರಾಜಕಾರಣಕ್ಕೆ ಸರಿಯಾದ ಠಕ್ಕರ್ ನೀಡಲು ಬಿಜೆಪಿಯು ಇದೇ ಮೊದಲ ಬಾರಿಗೆ 2022ರ ಆಗಸ್ಟ್‌ನಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರದ ಅರುಣ್ ಸಾವೋ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿತು.

ಸಾವೋ ಕೂಡ ಬಘೇಲ್ ಪ್ರತಿನಿಧಿಸುವ ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಛತ್ತೀಸ್‌ಗಢ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ಒಬಿಸಿ ವರ್ಗಕ್ಕೆ ಸೇರಿದವರಾಗಿದ್ದಾರೆ. ಒಬಿಸಿ ಬೆಂಬಲದಿಂದಲೇ ಕಾಂಗ್ರೆಸ್ 2018ರಲ್ಲಿ ಪ್ರಚಂಡ ಗೆಲವು ಸಾಧಿಸಿತ್ತು. ಅದೇ ಮಂತ್ರವನ್ನು ಜಪಿಸಿರುವ ಬಿಜೆಪಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಶಾಕ್ ನೀಡಿದೆ. ಹಾಗಾಗಿ, ಮುಖ್ಯಮಂತ್ರಿಗಳ ರೇಸ್‌ನಲ್ಲಿ ಅರುಣ್ ಸಾವೋ ಅವರ ಹೆಸರು ಪ್ರಧಾನವಾಗಿ ಕೇಳಿ ಬರುತ್ತಿದೆ.

ಈ ಸುದ್ದಿಯನ್ನೂ ಓದಿ: PM Narendra Modi: ಉತ್ತಮ ಆಡಳಿತ, ಅಭಿವೃದ್ಧಿಗೆ ಸಂದ ಜಯ ಎಂದ ಪ್ರಧಾನಿ ಮೋದಿ

ಇನ್ನು ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರೂ ಹೆಸರು ಮುಖ್ಯಮಂತ್ರಿ ಹುದ್ದೆಗಾಗಿ ರೇಸ್‌ನಲ್ಲಿದೆ. ಛತ್ತೀಸ್‌ಗಢನ ಅತಿ ದೀರ್ಘ ಅವಧಿಯ ಸಿಎಂ ಎಂದು ಖ್ಯಾತರಾಗಿರುವ ರಮಣ್ ಸಿಂಗ್ ಅವರು 2018ರಿಂದ ಈಚೆಗೆ ಅಷ್ಟೇನೂ ಮುಂಚೂಣಿಯಲ್ಲಿ ಇರಲಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ಎಫೆಕ್ಟ್ ಅದಾಗಿತ್ತು. ರಮಣ್ ಸಿಂಗ್ ಅವರು ಮುಖ್ಯಂತ್ರಿಯಾಗಿದ್ದಾಗ ಚಾವುರ್ ವಾಲೇ ಬಾಬಾ ಎಂದೇ ಖ್ಯಾತರಾಗಿದ್ದರು. ಅವರು ಆಡಳಿತದಲ್ಲಿ ಅಗ್ಗದ ಬೆಲೆಗೆ ಅಂದರೆ ಕೆಜಿ 2ರಿಂದ 3 ರೂ.ಗೆ ಅಕ್ಕಿಯನ್ನು ವಿತರಿಸುತ್ತಿದ್ದರು. ಹಾಗಾಗಿ, ಜನಸಾಮನ್ಯರ ನಡುವೆ ಚಿರಪರಿಚಿತರಾಗಿರುವ ರಮಣ್ ಸಿಂಗ್ ಅವರಿಗೆ ಈ ಬಾರಿಯು ಸಿಎಂ ಹುದ್ದೆ ಒಲಿದು ಬಂದರೆ ಅಚ್ಚರಿ ಪಡಬೇಕಿಲ್ಲ.

ಒಪಿ ಚೌಧರಿ. ಮುಖ್ಯಮಂತ್ರಿಗೆ ಕೇಳಿ ಬರುತ್ತಿರುವ ಮತ್ತೊಂದು ಹೆಸರು. 2005 ಬ್ಯಾಚಿನ ಛತ್ತೀಸ್‌ಗಢ ಕೆಡರ್‌ನ ಐಎಎಸ್ ಅಧಿಕಾರಿಯಾಗಿರುವ ಒ ಪಿ ಚೌಧರಿ ಅವರು 2018ರಲ್ಲಿ ಬಿಜೆಪಿಯನ್ನು ಸೇರುವ ಮೂಲಕ ರಾಜಕೀಯ ಜೀವನವನ್ನುಆರಂಭಿಸಿದರು. ಒಟ್ಟು 13 ವರ್ಷ ಅವರು ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಛತ್ತೀಸ್‌ಗಢ ಚುನಾವಣೆ ಗೆಲುವಿಗೆ ಮಹತ್ವದ ಕಾಣಿಕೆ ನೀಡಿರುವ ಚೌಧರಿ ಅವರೂ ಸಂಭಾವ್ಯ ಸಿಎಂ ಅಭ್ಯರ್ಥಿಯಾಗಿದ್ದಾರೆ.

ಛತ್ತೀಸ್‌ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವಿಗೆ ಕಾರಣಗಳೇನು?

1) ಬುಡಕಟ್ಟು ಸಮುದಾಯದ ಒಲವು
ಮುಖ್ಯವಾಗಿ, ಮೋದಿ ಸರ್ಕಾರ ಬುಡಕಟ್ಟು ಸಮುದಾಯದ (Scheduled Tribe) ಅಭಿವೃದ್ಧಿಗಾಗಿ ತೆಗೆದುಕೊಂಡ ಕ್ರಮಗಳೇ ಅವರ ಒಲವು ಗಳಿಸಲು ನೆರವಾಗಿವೆ. ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ (ನ.15ರಂದು) ಪ್ರಧಾನಿ ಮೋದಿ, ʼವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳʼ (particularly vulnerable tribal groups – PVTG) ಅಭಿವೃದ್ಧಿಗಾಗಿ ನೂತನ ಕಾರ್ಯಕ್ರಮವೊಂದನ್ನು ಘೋಷಿಸಿದ್ದರು. ಈ ಯೋಜನೆಯು 24,000 ಕೋಟಿ ರೂ. ವೆಚ್ಚದಲ್ಲಿ ಅಂಚಿನಲ್ಲಿರುವ ಬುಡಕಟ್ಟು ಸಮುದಾಯಗಳವರಿಗೆ ತಲುಪುವಂಥ ರಸ್ತೆ, ಟೆಲಿಕಾಂ ಸಂಪರ್ಕ, ಶಿಕ್ಷಣ, ಆರೋಗಹ್ಯ ಸೇವೆ, ಪೌಷ್ಟಿಕತೆಯ ಮತ್ತಿತ ಸೌಲಭ್ಯಗಳನ್ನು ತಲುಪಿಸುವ ಕಾರ್ಯಕ್ರಮವಾಗಿದೆ. ಇದನ್ನು ಅವರು ಬುಡಕಟ್ಟು ಸಮುದಾಯಗಳ ನಾಯಕರಾದ ಬಿರ್ಸಾ- ಮುಂಡಾ ಜನ್ಮಸ್ಥಾನವಾದ ಜಾರ್ಖಂಡ್‌ನ ಉಲಿಹಾಟುವಿನಲ್ಲಿ ಉದ್ಘಾಟಿಸಲಿದ್ದಾರೆ. ಇದು ಹಾಗೂ ಇಂಥ ಹಲವಾರು ಯೋಜನೆಗಳು ಕೇಂದ್ರ ಸರ್ಕಾರದ ಬುಟ್ಟಿಯಲ್ಲಿದ್ದು, ಈ ಬಾರಿ ಅದು ವಿಶೇಷವಾಗಿ ಗುಡ್ಡಗಾಡು ಹಾಗೂ ಬುಡಕಟ್ಟು ಸಮುದಾಯಗಳ ಮತಗಳನ್ನು ಗುರಿಯಾಗಿಸಿಕೊಂಡಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾದ 47 ಸೀಟುಗಳಲ್ಲಿ 31ನ್ನು ಗೆದ್ದುಕೊಂಡಿತ್ತು. ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನಗಳಲ್ಲಿ ಈ ಗೆಲುವಿನ ಹೆಚ್ಚಿನ ಪ್ರಮಾಣ ಬಂದಿತ್ತು. ಛತ್ತೀಸ್‌ಗಢದಲ್ಲಿ 11 ಲೋಕಸಭೆ ಸ್ಥಾನಗಳಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಈ 11ರಲ್ಲಿ 9ನ್ನು ಬಿಜೆಪಿ ಗೆದ್ದುಕೊಂಡಿತ್ತು. ಬುಡಕಟ್ಟು ಸಮುದಾಯಗಳ ಹೃದಯ ಗೆದ್ದಿರುವ ಬಿಜೆಪಿ, ಅದನ್ನು ಉಳಿಸಿಕೊಂಡಿದೆ ಎಂದು ತರ್ಕಿಸಬಹುದು.

2) ಹಗರಣ, ಆಡಳಿತ ವಿರೋಧಿ ಅಲೆ?
ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರ ಆಡಳಿತದ ಬಗ್ಗೆ ಛತ್ತೀಸ್‌ಗಢದ ಜನತೆ ಭ್ರಮನಿರಸನಗೊಂಡಿದ್ದಾರೆ ಎಂದು ವಿಶ್ಲೇಷಕರು ತರ್ಕಿಸಿದ್ದಾರೆ. ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸರಣಿ ಹಗರಣಗಳನ್ನು ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತಲೇ ಬಂದಿತ್ತು. ಬಹುಕೋಟಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಹಗರಣ ಮುಖ್ಯವಾದುದು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬೆಂಬಲ ನೀಡಲು ಪ್ರಾರಂಭಿಸಲಾದ ಕೇಂದ್ರ ಪ್ರಾಯೋಜಿತ ಉಚಿತ ಧಾನ್ಯಗಳ ಯೋಜನೆಯಲ್ಲಿ 5,000 ಕೋಟಿ ರೂಪಾಯಿಗಳ ಹಗರಣವಾಗಿದೆ.

ಜಾರಿ ನಿರ್ದೇಶನಾಲಯವು 2,161 ಕೋಟಿ ರೂಪಾಯಿಗಳ ಮದ್ಯ ಹಗರಣವನ್ನು ಸಹ ತನಿಖೆ ನಡೆಸುತ್ತಿದೆ. ಇದರಲ್ಲಿ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಬಂಧಿಸಲಾಗಿದೆ. ಅವರ ಜಾಮೀನು ಅರ್ಜಿಗಳನ್ನು ಕಳೆದ ವಾರ ಛತ್ತೀಸ್‌ಗಢ ಹೈಕೋರ್ಟ್ ತಿರಸ್ಕರಿಸಿದೆ. ಇಬ್ಬರು ಕಾಂಗ್ರೆಸ್ ಶಾಸಕರು ಮತ್ತು ಐಎಎಸ್ ಅಧಿಕಾರಿ ಆರೋಪಿಯಾಗಿರುವ ಕಲ್ಲಿದ್ದಲು ಹಗರಣದ ಆರೋಪವನ್ನೂ ಹಾಲಿ ಸರ್ಕಾರ ಎದುರಿಸುತ್ತಿದೆ. ಜೊತೆಗೆ ಬಹುಕೋಟಿ ಮಹದೇವ್‌ ಬೆಟ್ಟಿಂಗ್‌ ಆಪ್‌ ಹಗರಣದಲ್ಲಿ ಮುಖ್ಯಮಂತ್ರಿ ಬಘೇಲ್‌ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಇವು ಸರ್ಕಾರದ ವರ್ಚಸ್ಸಿಗೆ ದೊಡ್ಡ ಮಟ್ಟದ ಹಾನಿ ಉಂಟುಮಾಡಿದ್ದವು.

3) ಮೋದಿ ಕಿ ಗ್ಯಾರಂಟಿ
ಕರ್ನಾಟಕದಲ್ಲಿ ಕಾಂಗ್ರೆಸ್‌ ಗ್ಯಾರಂಟಿಗಳನ್ನು ಟೀಕಿಸಿದ್ದ ಬಿಜೆಪಿ, ಛತ್ತೀಸ್‌ಗಢದಲ್ಲೂ ಇತರ ರಾಜ್ಯಗಳಂತೆ ಹಲವು ಗ್ಯಾರಂಟಿಗಳ ಭರವಸೆಯನ್ನು ಮತದಾರರಿಗೆ ನೀಡಿತ್ತು. ʼಮೋದಿ ಕಿ ಗ್ಯಾರಂಟಿʼ ಶೀರ್ಷಿಕೆಯ ಪ್ರಣಾಳಿಕೆಯಲ್ಲಿ ಮನೆಮನೆಗೆ ₹500ಗೆ ಎಲ್‌ಪಿಜಿ ಸಿಲಿಂಡರ್‌ಗಳು, ಎರಡು ವರ್ಷಗಳಲ್ಲಿ ಒಂದು ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗಗಳು, ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ ₹12,000 ಆರ್ಥಿಕ ನೆರವು, ಭೂರಹಿತ ಕೃಷಿ ಕಾರ್ಮಿಕರಿಗೆ ₹10,000 ವಾರ್ಷಿಕ ನೆರವು, ಪ್ರತಿ ಕ್ವಿಂಟಾಲ್‌ಗೆ ₹3,100 ಬೆಂಬಲ ಬೆಲೆಯಲ್ಲಿ ಭತ್ತದ ಖರೀದಿ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿತ್ತು.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Exit mobile version