Site icon Vistara News

Congress Presidential Election | ರಾಹುಲ್‌ ಗಾಂಧಿ ಹೊರತಾಗಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿರೋರು ಯಾರು? ಇಲ್ಲಿದೆ ಮಾಹಿತಿ

Rahul Gandhi

ನವದೆಹಲಿ: ಲೋಕಸಭೆ ಚುನಾವಣೆ ಸೇರಿ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲೂ ಸೋತು ಸುಣ್ಣವಾಗಿರುವ ಕಾಂಗ್ರೆಸ್‌ ನಾಯಕತ್ವದಲ್ಲಿ ಬದಲಾವಣೆಯ ಅಗತ್ಯವಿದೆ. ಹಾಗಾಗಿ, ಆಗಸ್ಟ್‌ ೨೧ರಿಂದ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಚುನಾವಣೆ (Congress Presidential Election) ಆರಂಭವಾಗಲಿದೆ. ಪಕ್ಷದ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರೇ ಮತ್ತೆ ಅಧ್ಯಕ್ಷ ಗಾದಿ ಏರುತ್ತಾರೆ ಎಂಬ ಮಾತು ಕೇಳಿಬರುತ್ತಿದ್ದರೂ, ಅವರ ಹೊರತಾಗಿ ಹಲವು ನಾಯಕರ ಹೆಸರುಗಳೂ ಕೇಳಿ ಬರುತ್ತಿರುವುದು ಕುತೂಹಲ ಮೂಡಿಸಿದೆ.

ಮಧ್ಯಪ್ರದೇಶ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಕಮಲ್‌ನಾಥ್‌, ದಲಿತ ನಾಯಕರು ಆಗಬೇಕು ಎಂದಾದರೆ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ಸಚಿವ ಸುಶೀಲ್‌ ಕುಮಾರ್‌ ಶಿಂಧೆ, ಲೋಕಸಭೆ ಮಾಜಿ ಸ್ಪೀಕರ್‌ ಮೀರಾ ಕುಮಾರ್‌, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಸೇರಿ ಹಲವರ ಹೆಸರುಗಳು ಕೇಳಿಬರುತ್ತಿವೆ.

ರಾಹುಲ್‌ ಗಾಂಧಿಗೆ ನಿರಾಸಕ್ತಿ?

೨೦೧೯ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋಲನುಭವಿಸಿದ ಬಳಿಕ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಹುಲ್‌ ಗಾಂಧಿ ಮತ್ತೆ ಪಕ್ಷದ ಅಧ್ಯಕ್ಷ ಗಾದಿಗೇರಲು ಇಚ್ಛಿಸುತ್ತಿಲ್ಲ ಎಂದು ತಿಳಿದುಬಂದಿದೆ. ಪಕ್ಷದ ನಾಯಕರು, ಮುಖಂಡರು ರಾಹುಲ್‌ ಗಾಂಧಿ ಅವರ ಪರ ಬ್ಯಾಟಿಂಗ್‌ ಮಾಡುತ್ತಿದ್ದರೂ, ರಾಹುಲ್‌ ಗಾಂಧಿ ಅವರು ಮತ್ತೆ ಪಕ್ಷದ ಚುಕ್ಕಾಣಿ ಹಿಡಿಯಲು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕಾಗಿಯೇ, ಚುನಾವಣೆಗೆ ದಿನಗಣನೆ ಆರಂಭವಾದರೂ ರಾಹುಲ್‌ ಹೆಸರು ಮುನ್ನೆಲೆಗೆ ಬರುತ್ತಿಲ್ಲ ಎಂದು ತಿಳಿದುಬಂದಿದೆ.

ಸೋನಿಯಾ ಮುಂದುವರಿಕೆ ಸಾಧ್ಯತೆ

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನವು ಗಾಂಧಿ ಕುಟುಂಬಕ್ಕೇ ಸೀಮಿತ ಎನ್ನುವಷ್ಟರಮಟ್ಟಿಗೆ ಅದೇ ಕುಟುಂಬದವರು ಅಧ್ಯಕ್ಷಗಿರಿ ಅನುಭವಿಸಿದ್ದಾರೆ. ಹಾಗಾಗಿ, ರಾಹುಲ್‌ ಗಾಂಧಿ ಅವರು ಮತ್ತೆ ಅಧ್ಯಕ್ಷರಾಗಲು ನಿರಾಕರಿಸಿದರೆ, ಸೋನಿಯಾ ಗಾಂಧಿಯವರೇ ಅಧ್ಯಕ್ಷೆಯಾಗಿ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ, ಇದಕ್ಕೆ ಜಿ-೨೩ ತಂಡ ಕಟ್ಟಿರುವ “ಬಂಡಾಯʼ ನಾಯಕರು ಒಪ್ಪುವುದಿಲ್ಲ ಹಾಗೂ ಮತ್ತಷ್ಟು ಸಿಡಿದೇಳುವ ಅಪಾಯ ಇರುವುದರಿಂದ ಗಾಂಧಿ ಕುಟುಂಬಕ್ಕೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಆ.೨೧ರಿಂದ ೨೮ರವರೆಗೆ ಚುನಾವಣೆ ನಡೆಯಲಿದ್ದು, ಚುನಾವಣೆಯ ಅಂತಿಮ ದಿನವೇ ನೂತನ ಅಧ್ಯಕ್ಷರ ಘೋಷಿಸುವ ಸಾಧ್ಯತೆ ಇದೆ.

ಇದನ್ನೂ ಓದಿ | Rahul Class | ಕಾಂಗ್ರೆಸ್‌ ನಾಯಕರಿಗೆ ಒಗ್ಗಟ್ಟಿನ ಪಾಠ ಮಾಡಿದ ರಾಹುಲ್‌, ಚುನಾವಣೆಯೇ ಟಾರ್ಗೆಟ್‌

Exit mobile version