ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅರವಿಂದ್ ಕೇಜ್ರಿವಾಲ್ ಸಚಿವ ಸಂಪುಟದ ಇಬ್ಬರು ಸದಸ್ಯರು ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಅಬಕಾರಿ ನೀತಿ ಜಾರಿಯಲ್ಲಿ ಅಕ್ರಮ ನಡೆದಿರುವ ಆರೋಪದಲ್ಲಿ ಬಂಧಿತರಾಗಿರುವ ಮನೀಷ್ ಸಿಸೋಡಿಯಾ (Manish Sisodia) ಹಾಗೂ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಪ್ರಕರಣದಲ್ಲಿ ಜೈಲುಪಾಲಾಗಿರುವ ಸತ್ಯೇಂದರ್ ಸಿಂಗ್ ಜೈನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮನೀಷ್ ಸಿಸೋಡಿಯಾ ನಿಭಾಯಿಸುತ್ತಿದ್ದ 18 ಖಾತೆಗಳನ್ನು ಕೇಜ್ರಿವಾಲ್ ಅವರು ಕೈಲಾಶ್ ಗೆಹ್ಲೋಟ್ ಹಾಗೂ ರಾಜಕುಮಾರ್ ಆನಂದ್ ಅವರಿಗೆ ವಹಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಗೃಹ, ಹಣಕಾಸು, ಶಿಕ್ಷಣ, ಪಿಡಬ್ಲ್ಯೂಡಿ, ಅಬಕಾರಿ, ಜಾಗೃತ ದಳ, ಕಾರ್ಮಿಕ ಇಲಾಖೆ, ಉದ್ಯೋಗ ಖಾತೆ, ಪ್ರವಾಸೋದ್ಯಮ ಸೇರಿ 18 ಖಾತೆಗಳನ್ನು ಸಿಸೋಡಿಯಾ ನಿಭಾಯಿಸುತ್ತಿದ್ದರು. ಈ ಖಾತೆಗಳನ್ನು ಹೆಚ್ಚುವರಿಯಾಗಿ ಕೈಲಾಶ್ ಗೆಹ್ಲೋಟ್ ಹಾಗೂ ರಾಜಕುಮಾರ್ ಆನಂದ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಸತ್ಯೇಂದರ್ ಜೈನ್ ಅವರಿಗೆ ನೀಡಲಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಯಾರಿಗೆ ನೀಡಲು ತೀರ್ಮಾನಿಸಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂ. ಹಗರಣ ನಡೆದಿರುವ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಗಂಭೀರ ಆರೋಪ ಕೇಳಿಬಂದಿರುವ ಕಾರಣ ಸಿಬಿಐ ಅಧಿಕಾರಿಗಳು ಮನೀಷ್ ಸಿಸೋಡಿಯಾ ಅವರನ್ನು ಬಂಧಿಸಿದ್ದಾರೆ. ಅಲ್ಲದೆ, ಸಿಬಿಐ ಬಂಧನ ಪ್ರಶ್ನಿಸಿ ಮನೀಷ್ ಸಿಸೋಡಿಯಾ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಇದನ್ನೂ ಓದಿ: Manish Sisodia Resigns: ಬಂಧನದ ಬೆನ್ನಲ್ಲೇ ಡಿಸಿಎಂ ಸ್ಥಾನಕ್ಕೆ ಮನೀಷ್ ಸಿಸೋಡಿಯಾ ರಾಜೀನಾಮೆ