ಪ್ರತ್ಯಕ್ಷದರ್ಶಿ ವರದಿ: ವಿಕ್ರಮ್
ವಾರಾಣಸಿ: ಲೋಕಸಭೆ ಚುನಾವಣೆಯು (Lok Sabha Election 2024) ಕೊನೆಯ ಹಂತ ತಲುಪಿದೆ. ಜೂನ್ 1ರಂದು ಏಳನೇ ಹಂತದ ಮತದಾನದ ಮೂಲಕ ಸಾರ್ವತ್ರಿಕ ಚುನಾವಣೆಗೆ ತೆರೆ ಬೀಳಲಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಉತ್ತರ ಪ್ರದೇಶದ ವಾರಾಣಸಿಯಿಂದ (Varanasi) ಸ್ಪರ್ಧಿಸಿದ್ದು, ಸುಮಾರು 7 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ, ವಾರಾಣಸಿಯಲ್ಲಿ ನೆಲೆಸಿರುವ ಕನ್ನಡಿಗರಂತೂ ಮೋದಿ ಗೆಲುವು ನಿಶ್ಚಿತ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಮೋದಿ ಕುರಿತು ವಾರಾಣಸಿಯಲ್ಲಿರುವ ಕನ್ನಡಿಗರು ಹೇಳಿದ್ದೇನು? ಇಲ್ಲಿದೆ ‘ವಿಸ್ತಾರ ನ್ಯೂಸ್’ ಗ್ರೌಂಡ್ ರಿಪೋರ್ಟ್.
“ನಾವು ಬೆಂಗಳೂರಿನಿಂದ ಕಾಶಿಗೆ ಬಂದು ನೆಲೆಸಿದ್ದೇವೆ. 2012ರ ಕೊನೆಯಲ್ಲಿ ನಾವು ಇಲ್ಲಿಗೆ ಬಂದೆವು. ನಾವು ಇಲ್ಲಿಗೆ ಬಂದಾಗ ಸಮಾಜವಾದಿ ಪಕ್ಷ ಅಧಿಕಾರದಲ್ಲಿತ್ತು. ನಾವು ಎರಡೂ ಸರ್ಕಾರಗಳನ್ನು ನೋಡಿದ ಕಾರಣ ನಮಗೆ ನಿಜವಾದ ವ್ಯತ್ಯಾಸ ಗೊತ್ತು. ಮೊದಲಿಗೆ ಇಲ್ಲಿ ವಿದ್ಯುತ್ ವೋಲ್ಟೇಜ್ ಇರಲಿಲ್ಲ. ಈಗ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಗಂಗೆಯು ಶುದ್ಧಗೊಂಡಿದ್ದಾಳೆ. ಇಲ್ಲಿ ಗಲಭೆಗಳು ಸಂಪೂರ್ಣವಾಗಿ ನಿಂತಹೋಗಿವೆ. ಒಂದೇ ಒಂದು ಗಲಾಟೆ ನಡೆಯುವುದಿಲ್ಲ. ಕಳೆದ 10 ವರ್ಷಗಳಲ್ಲಿ ಅಪಾರ ಅಭಿವೃದ್ಧಿಯಾಗಿದೆ” ಎಂಬುದಾಗಿ ಕನ್ನಡಿಗರೊಬ್ಬರು ಮಾಹಿತಿ ನೀಡಿದ್ದಾರೆ.
“ಸಮಾಜದಲ್ಲಿ ಧರ್ಮ ಇದ್ದಾಗಲೇ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕಾಗಿಯೇ, ನರೇಂದ್ರ ಮೋದಿ ಅವರು ಯಾವುದೇ ಗಲಾಟೆ, ಗದ್ದಲ ಇಲ್ಲದೆ, 150 ಎಕರೆ ಜಾಗವನ್ನು ಪಡೆದುಕೊಂಡು, ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಿಸಿದ್ದಾರೆ. ಹಾಗಾಗಿ, ಮೋದಿ ಅವರು ಲಕ್ಷಾಂತರ ಮತಗಳಿಂದ ಗೆಲುವು ಸಾಧಿಸುವುದು ನಿಶ್ಚಿತ” ಎಂಬುದಾಗಿ ಹೇಳಿದ್ದಾರೆ. ಇನ್ನೊಬ್ಬ ಕನ್ನಡಿಗ ಮಾತನಾಡಿ, “ನಾನು ಮೊದಲ ಬಾರಿಗೆ ಮತ ಚಲಾವಣೆ ಮಾಡುತ್ತಿದ್ದೇನೆ. ನನ್ನ ಮೊದಲ ವೋಟು ಮೋದಿ ಅವರಿಗೆ” ಎಂದು ಯುವಕ ಹೇಳಿದ್ದಾರೆ.
ಮೈಸೂರಿನವರಾದ, 1984ರಲ್ಲಿಯೇ ವಾರಾಣಸಿಗೆ ತೆರಳಿದ, ಸ್ವಾಮೀಜಿ ಆಗಿರುವ ಮತ್ತೊಬ್ಬ ಕನ್ನಡಿಗ ವಿಸ್ತಾರ ನ್ಯೂಸ್ ಜತೆ ಮಾತನಾಡಿದ್ದಾರೆ. “ಕಳೆದ 40 ವರ್ಷಗಳಿಂದ ಕಾಶಿಯಲ್ಲಿಯೇ ನೆಲೆಸಿದ್ದೇನೆ. ಮೊದಲು ಸ್ವಚ್ಛತೆ, ಅಭಿವೃದ್ಧಿಯಾಗಿರಲಿಲ್ಲ. ಕಾಶಿಗೆ ಶೇ.90ರಷ್ಟು ಜನ ಬರುವುದು ದಕ್ಷಿಣ ಭಾರತದಿಂದಲೇ. ಈಗ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಘಾಟ್‌ಗಳನ್ನು ಸ್ವಚ್ಛಗೊಳಿಸಿ, ಭಕ್ತರಿಗೆ ಅನುಕೂಲ ಮಾಡಲಾಗಿದೆ. ಮೋದಿ ಅವರಿರದಿದ್ದರೆ ವಾರಾಣಸಿ ನಾಶವಾಗುತ್ತಿತ್ತು” ಎಂದಿದ್ದಾರೆ. ಕನ್ನಡಿಗರು ಮಾತ್ರವಲ್ಲ, ಕಾಶಿಯ ಬಹುತೇಕ ನಾಗರಿಕರು ಕೂಡ ಮೋದಿ ಅವರ ಆಡಳಿತವನ್ನು ಮೆಚ್ಚಿದ್ದಾರೆ.
ಮೋದಿ ವಿರುದ್ಧ ಕಣಕ್ಕಿಳಿದ ನಾಯಕರಿವರು
ನರೇಂದ್ರ ಮೋದಿ ಅವರು 2014ರಿಂದಲೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಈ ಬಾರಿ ಕಾಂಗ್ರೆಸ್ ಅಜಯ್ ರಾಯ್ ಅವರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್ ಮಹಾಮಂಡಲೇಶ್ವರ್ ಹೇಮಾಂಗಿ ಸಖಿ ಅವರು ಕೂಡ ಸ್ಪರ್ಧಿಸುತ್ತಿದ್ದಾರೆ. ಬಿಎಸ್‌ಪಿಯು ಅಥರ್ ಜಮಾಲ್ ಲರಿ ಅವರಿಗೆ ಟಿಕೆಟ್ ನೀಡಿದೆ. ಕ್ಷೇತ್ರದಲ್ಲಿ ಜೂನ್ 1ರಂದು ಮತದಾನ ನಡೆಯಲಿದೆ. ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ 19.62 ಲಕ್ಷ ಮತದಾರರಿದ್ದಾರೆ. ಇವರಲ್ಲಿ 10.65 ಲಕ್ಷ ಪುರುಷರಿದ್ದರೆ, 8.97 ಲಕ್ಷ ಮಹಿಳೆಯರಿದ್ದಾರೆ. 135 ಮಂಗಳಮುಖಿಯರೂ ಮತದಾನ ಮಾಡಲಿದ್ದಾರೆ.
ಇದನ್ನೂ ಓದಿ: Phalodi Satta Bazar: ಮೋದಿಗೆ 330 ಸೀಟು ಖಚಿತ ಎಂದ ಸಟ್ಟಾ ಬಜಾರ್ ಸಮೀಕ್ಷೆ; ರಾಜ್ಯವಾರು ವರದಿ ಇಲ್ಲಿದೆ