Site icon Vistara News

ಮೋದಿಗಾಗಿ ಯಾರು ಕೆಲಸ ಮಾಡುತ್ತಾರೋ ಅವರು ರಾಜ್ಯಪಾಲರಾಗುತ್ತಾರೆ: ಕಾಂಗ್ರೆಸ್ ಟೀಕೆ

Who work for Modi are now governors, Congress criticized

ನವದೆಹಲಿ: ರಾಜ್ಯಪಾಲ ಸ್ಥಾನಕ್ಕೆ 6 ಹೊಸಬರನ್ನು ನೇಮಕ ಮಾಡಿದ ಬೆನ್ನಲ್ಲೇ ವಿವಾದವೂ ತಲೆದೋರಿದೆ. ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ವಾದ ವಿವಾದಕ್ಕೆ ಕಾರಣವಾಗಿದೆ. ಅಯೋಧ್ಯ ವಿವಾದ ಕುರಿತು ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ (Supreme Court) ಪೀಠದಲ್ಲಿ ಒಬ್ಬರಾಗಿದ್ದ ಎಸ್ ಅಬ್ದುಲ್ ನಜೀರ್ (S Abdul Nazeer) ಅವರನ್ನು ಕೇಂದ್ರ ಸರ್ಕಾರ ಆಂಧ್ರ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ (Congress) ಸಂಸದ ಮಾಣಿಕಮ್ ಠಾಗೋರ್ ಅವರು, ಯಾರು ಮೋದಿಗಾಗಿ ಕೆಲಸ ಮಾಡುತ್ತಾರೋ ಅವರೀಗ ರಾಜ್ಯಪಾಲರು ಎಂದು ಟೀಕಿಸಿದ್ದಾರೆ. ಅದಾನಿಗಾಗಿ ಮೋದಿ ಕೆಲಸ ಮಾಡುತ್ತಾರೆ. ಮೋದಿಗಾಗಿ ಯಾರು ಕೆಲಸ ಮಾಡುತ್ತಾರೋ ಅವರು ರಾಜ್ಯಪಾಲರಾಗುತ್ತಾರೆ. ಹಾಗಿದ್ದರೆ, ಜನರಿಗಾಗಿ ಕೆಲಸ ಮಾಡುವರಾರು? ಭಾರತ್ ಮಾತಾ ಕಿ ಜೈ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸರ್ಕಾರದ ಕ್ರಮ ಟೀಕಿಸುವಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಹಿಂದೆ ಬಿದ್ದಿಲ್ಲ. ರಾಜ್ಯಪಾಲ ನೇಮಕಾತಿಗಳನ್ನು ಹೆಸರಿಸದೇ, ಈ ಹಿಂದೆ ಅರುಣ್ ಜೇಟ್ಲಿ ಅವರು ಆಡಿದ ಮಾತುಗಳ ಹಳೆಯ ವಿಡಿಯೋವೊಂದನ್ನು ಷೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿಅರುಣ್ ಜೇಟ್ಲಿ ಅವರು, ನಿವೃತ್ತಿಯ ಪೂರ್ವ ತೀರ್ಪುಗಳು ನಿವೃತ್ತಿಯ ನಂತರದ ಉದ್ಯೋಗಗಳಿಂದ ಪ್ರಭಾವಿತವಾಗಿರುತ್ತವೆ ಎಂದು ಹೇಳುತ್ತಾರೆ. ಈ ವಿಡಿಯೋ ಷೇರ್ ಮಾಡಿ, ಖಚಿತವಾಗಿ ಕಳೆದ 3-4 ವರ್ಷಗಳಲ್ಲಿ ಇದಕ್ಕೆ(ಅರುಣ್ ಜೇಟ್ಲಿ ಹೇಳಿಕೆ ಉಲ್ಲೇಖಿಸಿ) ಸಾಕಷ್ಟು ಪುರಾವೆಗಳು ದೊರೆತಿವೆ ಎಂದು ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ಸೈಯದ್ ಅಬ್ದುಲ್ ನಜೀರ್ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿದ್ದರು. 2023 ಜನವರಿ 4ರಂದು ಅವರು ನಿವೃತ್ತರಾಗಿದ್ದಾರೆ. ಆಂಧ್ರ ಪ್ರದೇಶದ ಗವರ್ನರ್ ಬಿಸ್ವ ಭೂಷಣ್ ಹರಿಚರಣ್ ಅವರನ್ನು ಛತ್ತೀಸ್‌ಗಢ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಿದ್ದರಿಂದ ಆಂಧ್ರ ರಾಜ್ಯಪಾಲರಾಗಿ ನಜೀರ್ ಅವರನ್ನು ಭಾನುವಾರ ನೇಮಕ ಮಾಡಲಾಗಿದೆ.

ಇದನ್ನೂ ಓದಿ: Appointments of Governors: ಆಂಧ್ರಕ್ಕೆ ನಿವೃತ್ತ ಜಡ್ಜ್, ಕನ್ನಡಿಗ ಅಬ್ದುಲ್ ನಜೀರ್ ರಾಜ್ಯಪಾಲ, ಒಟ್ಟು 12 ಗವರ್ನರ್ ನೇಮಕ

ಬಿ ಎಲ್ ಸಂತೋಷ್ ತಿರುಗೇಟು

ಕಾಂಗ್ರೆಸ್‌ನ ಆರೋಪಗಳಿಗೆ ತಿರುಗೇಟು ನೀಡಿರುವ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು, ಇತ್ತೀಚಿನ ದಿನಗಳಲ್ಲಿ ನೇಮಕಾತಿಗಳನ್ನು ವಿರೋಧಿಸುವುದು ಕಾಂಗ್ರೆಸ್-ಲೆಫ್ಟ್ ಇಕೋ ಸಿಸ್ಟಮ್‌ಗೆ ಸಾಮಾನ್ಯವಾಗಿದ್ದು, ಆಂಧ್ರ ಪ್ರದೇಶದ ಗವರ್ನರ್ ಆಗಿ ನಿವೃತ್ತ ಜಡ್ಜ್ ಎಸ್ ಅಬ್ದುಲ್ ನಜೀರ್ ನೇಮಕಕ್ಕೂ ಕೊಂಕು ತೆಗೆದಿದೆ. ಈ ಇಕೋ ಸಿಸ್ಟಮ್ ಪ್ರಕಾರ ನಜೀರ್ ಅವರು ಮಾಡಿರುವ ದೊಡ್ಡ ತಪ್ಪು ಎಂದರೆ, ಶ್ರೀ ರಾಮ್ ಜನ್ಮ ಭೂಮಿ ಜಡ್ಜ್‌ಮೆಂಟ್ ನೀಡಿದ್ದು. DO AS I SAY NOT AS I DO ಬ್ರಿಗೇಡ್ ಕಾರ್ಯನಿರತವಾಗಿದ ಎಂದು ಟ್ವೀಟ್ ಮಾಡಿದ್ದಾರೆ.

Exit mobile version