Site icon Vistara News

ಜಾಮ್‌ನಗರದಲ್ಲೇ ಅನಂತ್‌ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮ ಏಕೆ? ಅಜ್ಜಿ, ಮೋದಿ ನಂಟೇನು?

Anant Ambani Radhika Merchant

Why Anant Ambani chose Gujarat's Jamnagar as pre-wedding gala venue

ಗಾಂಧಿನಗರ: ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ (Mukesh Ambani) ಅಂಬಾನಿ ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ವಿವಾಹ ಪೂರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಾಮ್‌ನಗರದಲ್ಲಿ ಸ್ವರ್ಗವನ್ನೇ ಧರೆಗೆ ಇಳಿಸಲಾಗಿದೆ. ಮಾರ್ಚ್‌ 1ರಿಂದ ಮೂರು ದಿನಗಳ ಕಾಲ ಗುಜರಾತ್‌ನ ಜಾಮ್‌ನಗರದಲ್ಲಿ (Jamnagar) ಅದ್ಧೂರಿಯಾಗಿ ವಿವಾಹಪೂರ್ವ ಕಾರ್ಯಕ್ರಮ ನಡೆಯಲಿದ್ದು, ದೇಶ-ವಿದೇಶಗಳ ಸಾವಿರಾರು ಗಣ್ಯರು ಆಗಮಿಸಲಿದ್ದಾರೆ. ಇನ್ನು, ಮುಕೇಶ್‌ ಅಂಬಾನಿ ಕುಟುಂಬವು ಮುಂಬೈನಲ್ಲಿ ನೆಲೆಸಿದ್ದರೂ ಜಾಮ್‌ನಗರದಲ್ಲೇ ಏಕೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಇದಕ್ಕೆ, ಅನಂತ್‌ ಅಂಬಾನಿ ಅಜ್ಜಿ, ಅಜ್ಜ ಹಾಗೂ ನರೇಂದ್ರ ಮೋದಿ (Narendra Modi) ಅವರ ನಂಟಿದೆ ಎಂಬುದು ಗಮನಾರ್ಹವಾಗಿದೆ.

ಹೌದು, ಈ ಕುರಿತು ಅನಂತ್‌ ಅಂಬಾನಿ ಅವರೇ ಮಾತನಾಡಿದ್ದಾರೆ. “ಜಾಮ್‌ನಗರದಲ್ಲೇ ವಿವಾಹ ಪೂರ್ವ ಕಾರ್ಯಕ್ರಮ ಆಯೋಜಿಸಲು ಬೇರೆ ದೇಶಗಳ ಬದಲು ದೇಶದಲ್ಲಿಯೇ ಮದುವೆಯಾಗಿ (Wed In India) ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು ನನಗೆ ಸ್ಫೂರ್ತಿಯಾಯಿತು. ಇನ್ನು, ಜಾಮ್‌ನಗರವು ನನ್ನ ಅಜ್ಜಿಯ ಜನ್ಮಸ್ಥಳವಾಗಿದೆ. ಅಷ್ಟೇ ಅಲ್ಲ, ನನ್ನ ಅಜ್ಜ ಧೀರೂಭಾಯಿ ಅಂಬಾನಿ ಹಾಗೂ ಅಪ್ಪ ಮುಕೇಶ್‌ ಅಂಬಾನಿ ಅವರು ಜಾಮ್‌ನಗರದಿಂದಲೇ ಉದ್ಯಮ ಆರಂಭಿಸಿದ್ದಾರೆ. ಹಾಗಾಗಿ, ಜಾಮ್‌ನಗರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ತಿಳಿಸಿದ್ದಾರೆ.

“ನಾನು ಇಲ್ಲಿಯೇ ಬೆಳೆದಿದ್ದೇನೆ. ನನ್ನ ಅಜ್ಜಿಯ ಜನ್ಮಭೂಮಿ, ನನ್ನ ಅಜ್ಜ, ತಂದೆಯ ಕರ್ಮಭೂಮಿಯಲ್ಲಿ ವಿವಾಹಪೂರ್ವ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂತಸ ಹಂಚಿಕೊಳ್ಳಲು ತೀರ್ಮಾನಿಸಿದೆವು. ನನ್ನ ತಂದೆಯವರು ಕೂಡ, ಇದು ನನ್ನೂರು, ಇಲ್ಲಿ ಕಾರ್ಯಕ್ರಮ ಆಯೋಜಿಸೋಣ ಎಂದರು. ಮೋದಿ ಅವರು ಕೂಡ, ದೇಶದ ಶ್ರೀಮಂತರು, ಉದ್ಯಮಿಗಳು ವಿದೇಶದಲ್ಲಿ ಮದುವೆಯಾಗುವ ಬದಲು, ದೇಶದಲ್ಲಿಯೇ ಮದುವೆಯಾಗಿ ಎಂಬುದಾಗಿ ಕರೆ ನೀಡಿದರು. ಇದೆಲ್ಲ ಕಾರಣಗಳಿಗಾಗಿ ಜಾಮ್‌ನಗರವನ್ನೇ ಆಯ್ಕೆ ಮಾಡಿಕೊಂಡಿವೆ” ಎಂದು ಹೇಳಿದರು.

ಯಾವ ಗಣ್ಯರಿಗೆಲ್ಲ ಆಹ್ವಾನ?

ವಿವಾಹಪೂರ್ವ ಕಾರ್ಯಕ್ರಮಗಳಿಗೆ ಉದ್ಯಮಿಗಳಿಂದ ಹಿಡಿದು ಸಿನಿಮಾ ಸ್ಟಾರ್‌ಗಳವರೆಗೆ ನೂರಾರು ಗಣ್ಯರಿಗೆ ಮುಕೇಶ್‌ ಅಂಬಾನಿ ಕುಟುಂಬಸ್ಥರು ಆಹ್ವಾನಿಸಿದ್ದಾರೆ. ಉದ್ಯಮಿಗಳಾದ ಗೌತಮ್‌ ಅದಾನಿ, ನಂದನ್‌ ನಿಲೇಕಣಿ, ಅದರ್‌ ಪೂನಾವಾಲಾ, ಮಂಗಳಂ ಬಿರ್ಲಾ, ಕ್ರೀಡಾ ತಾರೆಯರಾದ ಸಚಿನ್‌ ತೆಂಡೂಲ್ಕರ್‌ ಹಾಗೂ ಅವರ ಕುಟುಂಬ, ಎಂ.ಎಸ್.ಧೋನಿ. ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ ಸೇರಿ ಹಲವರಿಗೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬಾಲಿವುಡ್‌ ನಟ-ನಟಿಯರಿಗೂ ಅಂಬಾನಿ ಕುಟುಂಬವು ಆಮಂತ್ರಣ ನೀಡಿದೆ. ಅಮಿತಾಭ್‌ ಬಚ್ಚನ್‌ ಹಾಗೂ ಕುಟುಂಬಸ್ಥರು, ಶಾರುಖ್‌ ಖಾನ್‌, ಆಮೀರ್‌ ಖಾನ್‌, ಸಲ್ಮಾನ್‌ ಖಾನ್‌, ಅಕ್ಷಯ್‌ ಕುಮಾರ್‌, ಸೈಫ್‌ ಅಲಿ ಖಾನ್‌, ಚಂಕಿ ಪಾಂಡೆ, ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ, ರಣಬೀರ್‌ ಕಪೂರ್-ಆಲಿಯಾ ಭಟ್‌, ವಿಕ್ಕಿ ಕೌಶಲ್‌-ಕತ್ರಿನಾ ಕೈಫ್‌, ಅನಿಲ್‌ ಕಪೂರ್‌, ಶ್ರದ್ಧಾ ಕಪೂರ್‌ ಸೇರಿ ಹಲವರಿಗೆ ಆಹ್ವಾನಿಸಲಾಗಿದೆ. ಹಾಲಿವುಡ್‌ನ ಖ್ಯಾತ ಪಾಪ್‌ ಗಾಯಕಿ ರಿಹಾನಾ ಅವರನ್ನೂ ಆಮಂತ್ರಿಸಲಾಗಿದೆ ಎಂದು ತಿಳಿದುಬಂದಿದೆ. ಭರ್ಜರಿ ಭೋಜನ, ಪಾಪ್‌ ಗಾಯಕಿ ರಿಹಾನಾ ಅವರ ಗಾಯನ, ಮೋಜು-ಮಸ್ತಿಯೂ ಇರಲಿದೆ.

ಇದನ್ನೂ ಓದಿ: Anant Ambani wedding: 2500 ಐಟಂ, 20 ಲೇಡಿ ಶೆಫ್‌ಗಳು… ಇನ್ನೂ ಇದೆ ಅನಂತ್‌ ಅಂಬಾನಿ- ರಾಧಿಕಾ ಮದುವೆ ವಿಶೇಷ!

ಹೇಗಿದೆ ಕಾರ್ಯಕ್ರಮದ ಸಿದ್ಧತೆ?

ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯುವ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಅದ್ಧೂರಿ ತಯಾರಿ ನಡೆಯುತ್ತಿದೆ. ಸ್ವತಃ ನೀತಾ ಅಂಬಾನಿ ಅವರು ಈ ಸಿದ್ಧತೆಯ ಉಸ್ತುವಾರಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅಂಬಾನಿ ಕುಟುಂಬದಿಂದ ಗುಜರಾತ್‌ನ ಜಾಮ್ ನಗರದಲ್ಲಿ ಹದಿನಾಲ್ಕು ಹೊಸ ದೇಗುಲಗಳ ಸಮುಚ್ಚಯವನ್ನೇ ನಿರ್ಮಾಣ ಮಾಡಲಾಗಿದೆ. ಸೊಗಸಾಗಿ ಕೆತ್ತನೆ ಮಾಡಿದ ಸ್ತಂಭಗಳು, ಕಲಾಕೃತಿಗಳು, ದೇವ- ದೇವತೆಗಳ ಚಿತ್ರಗಳು, ಮನಮೋಹಕವಾದ ಶಿಲ್ಪಗಳು, ವಾಸ್ತುಶಿಲ್ಪದಿಂದ ಪ್ರೇರಿತವಾದ ಪಾರಂಪರಿಕ ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version