Site icon Vistara News

ವಿಸ್ತಾರ ಸಂಪಾದಕೀಯ: ಭದ್ರತಾ ಪಡೆಗಳಲ್ಲಿ ಆತ್ಮಹತ್ಯೆಗಳೇಕೆ?

indian Army

ಕಳೆದ ಮೂರು ವರ್ಷಗಳಲ್ಲಿ ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್‌ನಂತಹ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್‌) ಒಟ್ಟು 436 ಸಿಬ್ಬಂದಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಸದನದಲ್ಲಿ ತಿಳಿಸಿದ್ದಾರೆ. ಯಾಕೆ ಈ ಆತ್ಮಹತ್ಯೆಗಳು ಆಗುತ್ತಿವೆ ಎಂಬುದನ್ನು ಆಮೂಲಾಗ್ರವಾಗಿ ಪರಿಶೀಲಿಸಿ ವರದಿ ನೀಡಲು ಹಾಗೂ ಪರಿಹಾರಗಳನ್ನು ಸೂಚಿಸಲು ಒಂದು ಕಾರ್ಯಪಡೆಯನ್ನು ಸ್ಥಾಪಿಸಲಾಗಿದೆ. ಸಿಎಪಿಎಫ್‌ ವ್ಯಾಪ್ತಿಯಲ್ಲಿ CRPF, BSF, CISF, ITBP, SSB, NSG ಮತ್ತು ಅಸ್ಸಾಂ ರೈಫಲ್ಸ್ ಬರುತ್ತವೆ. ಈ ಪಡೆಗಳಲ್ಲಿ ಆತ್ಮಹತ್ಯೆಗಳು ಮಾತ್ರ ಸಮಸ್ಯೆಯಾಗಿಲ್ಲ. ರೊಚ್ಚಿಗೆದ್ದು ಸಹೋದ್ಯೋಗಿಗಳನ್ನು, ಅದರಲ್ಲೂ ಮೇಲಧಿಕಾರಿಗಳನ್ನು ಕೊಲ್ಲುವ ಪ್ರವೃತ್ತಿಯೂ ಕಂಡುಬರುತ್ತಿದೆ. ಇದನ್ನು Fratricide (ಭ್ರಾತೃಹತ್ಯೆ) ಎಂದು ಕರೆಯುತ್ತಾರೆ. ಈ ಪ್ರವೃತ್ತಿಯ ಹಿಂದೆ ತೀವ್ರ ಒತ್ತಡ, ಕಿರುಕುಳ, ಅದರಿಂದ ಉಂಟಾಗುವ ಮಾನಸಿಕ ಸಮಸ್ಯೆ ಇತ್ಯಾದಿಗಳು ಖಂಡಿತವಾಗಿಯೂ ಇವೆ.

ಇತ್ತೀಚೆಗೆ ರೈಲ್ವೇ ಪೊಲೀಸ್ ಪಡೆಯ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಎಂಬಾತ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್‌ಪ್ರೆಸ್‌ನಲ್ಲಿ ತನ್ನ ಹಿರಿಯ ಸಹೋದ್ಯೋಗಿ ಮತ್ತು ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈತನನ್ನು ಮುಂಬಯಿಗೆ ವರ್ಗಾಯಿಸಿದ್ದರಿಂದ ಆತ ಕೋಪಗೊಂಡಿದ್ದ; ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಎಂದು ಗೊತ್ತಾಗಿದೆ. ಆದರೆ ವರ್ಗಾವಣೆ ಮತ್ತು ಕಠಿಣ ದುಡಿಮೆಯ ಕಾಲಾವಧಿಗಳು ಈ ಪಡೆಗಳಲ್ಲಿ ಸಾಮಾನ್ಯ. ಇಲ್ಲಿ ದುಡಿಯುವ ಯೋಧರು ಅದಕ್ಕಾಗಿಯೇ ತರಬೇತಾಗಿರುತ್ತಾರೆ ಹಾಗೂ ಮಾನಸಿಕವಾಗಿ ಸಿದ್ಧರಿರುತ್ತಾರೆ. ಆದರೂ ಇವರಲ್ಲಿ ಯಾಕೆ ಆತ್ಮಹತ್ಯೆ ಹಾಗೂ ಇಂಥ ಹತ್ಯೆಗಳು ಹೆಚ್ಚುತ್ತಿವೆ? ಸಚಿವರೇ ಸದನದಲ್ಲಿ ನೀಡಿದ ಮಾಹಿತಿಯ ಪ್ರಕಾರ, ಒಟ್ಟಾರೆಯಾಗಿ 2011ರಿಂದ ಈಚೆಗೆ 1,532 ಸಿಬ್ಬಂದಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ಅಂದರೆ ವರ್ಷಕ್ಕೆ ಸರಾಸರಿ 120 ಮಂದಿಗೂ ಅಧಿಕ. ಬೇರೊಂದು ಕೋನದಿಂದ ನೋಡುವುದಾದರೆ, ಯಾವುದೇ ಶಾಂತಿ ಪಾಲನೆ, ಯುದ್ಧದಲ್ಲಿ ಹುತಾತ್ಮರಾಗುತ್ತಿರುವ ಯೋಧರಿಗಿಂತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಯೋಧರ ಸಂಖ್ಯೆಯೇ ಹೆಚ್ಚು ಎನಿಸುವಂತಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಡೇಟಾ ಸಂರಕ್ಷಣೆ ಕಾಯಿದೆಗೆ ಕಾಲ ಪಕ್ವ

ಯೋಧರ ಆತ್ಮಹತ್ಯೆ ಹಾಗೂ ಭ್ರಾತೃಹತ್ಯೆಗಳು ನಿಜಕ್ಕೂ ನಮಗೆ ಕಳವಳಕಾರಿ ಸಂಗತಿ ಆಗಬೇಕಿದೆ. ಸಶಸ್ತ್ರ ಪಡೆಗಳಲ್ಲಿರುವ ಯೋಧರು ಬಹುಕಾಲ ಕುಟುಂಬದಿಂದ ದೂರವಾಗಿದ್ದು ಕೆಲಸ ಮಾಡಬೇಕಾಗುತ್ತದೆ. ಕುಟುಂಬಸೌಖ್ಯದ ಅನೇಕ ಕ್ಷಣಗಳಿಂದ ಅವರು ವಂಚಿತರೇ ಆಗಿ ಉಳಿಯುತ್ತಾರೆ. ಹೆಚ್ಚಿನ ಕೆಲಸದ ಸಮಯವು ಇದರೊಂದಿಗೆ ಸೇರಿ ಮನಸ್ಸಿನ ಮೇಲೆ ತೀವ್ರ ಒತ್ತಡವನ್ನು ಸೃಷ್ಟಿಸಬಹುದು. ಶ್ರೇಣಿಗಳ ನಡುವಿನ ತಾರತಮ್ಯ, ಅಧಿಕಾರ ದುರುಪಯೋಗ, ಕೆಲಸದ ಸ್ಥಳದಲ್ಲಿ ಬೆದರಿಸುವಿಕೆ, ಶಿಸ್ತು ಅಥವಾ ಕಾನೂನು ಕ್ರಮದ ಭಯ, ಕಂಪನಿಯ ಕಮಾಂಡರ್ ಮತ್ತು ಜವಾನರ ನಡುವಿನ ಸಂವಹನದ ಕೊರತೆ ಇತ್ಯಾದಿಗಳು ಇಂಥ ಕೃತ್ಯಗಳಿಗೆ ಕಾರಣವಾಗಿವೆ ಎಂದು ಕಾರ್ಯಪಡೆಯು ಉಲ್ಲೇಖಿಸಿದ ಕಾರಣಗಳು. ಈ ವರ್ಷದ ಜನವರಿಯಲ್ಲಿ ಕಾರ್ಯಪಡೆ ಗೃಹ ಇಲಾಖೆಗೆ ಸಲ್ಲಿಸಿದ ಕರಡು ವರದಿಯಲ್ಲಿ, ಮೂರು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ. ಸೇವಾ ಪರಿಸ್ಥಿತಿಗಳು, ಕೆಲಸದ ಪರಿಸ್ಥಿತಿಗಳು ಮತ್ತು ವೈಯಕ್ತಿಕ ಸಮಸ್ಯೆಗಳು. ಮಿತಿಮೀರಿದ ಕೆಲಸದ ಸಮಯ, ವಿಶ್ರಾಂತಿ ಮತ್ತು ಮನರಂಜನೆಗೆ ಸಮಯದ ಕೊರತೆ, ಇತರ ವಲಯಗಳವರಿಗೆ ಹೋಲಿಸಿದರೆ ಕೆಲಸದ ತೃಪ್ತಿಯ ಕೊರತೆ, ಪ್ರತ್ಯೇಕತೆಯ ಭಾವನೆ, ಸಾಮಾಜಿಕ ಮತ್ತು ಕೌಟುಂಬಿಕ ಬೆಂಬಲದ ಕೊರತೆ, ಈ ಕೊರತೆಗಳನ್ನು ಪರಿಹರಿಸಲು ಸರಿಯಾದ ಕಾರ್ಯವಿಧಾನ ಇಲ್ಲದಿರುವುದು- ಇವು ಕಾರಣಗಳಾಗಿವೆ. ಮಾನಸಿಕ ಒತ್ತಡದ ನಿವಾರಣೆಗೆ ಸೂಕ್ತ ಕೌನ್ಸೆಲಿಂಗ್‌, ರಜೆ- ವಿಶ್ರಾಂತಿಯ ವ್ಯವಸ್ಥೆ, ಮೇಲಧಿಕಾರಿ- ಜವಾನ ಸಂಬಂಧದಲ್ಲಿ ಸುಧಾರಣೆಯಾಗಬೇಕು ಎಂದು ಅದು ಸೂಚಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದರೆ ಈ ಸಮಸ್ಯೆ ಕೊನೆಗಾಣಬಹುದು.

Exit mobile version