ನವದೆಹಲಿ: ಕಾಂಗ್ರೆಸ್‌ಅನ್ನು ಸುಮಾರು ಎರಡು ದಶಕಗಳವರೆಗೆ ಆಳಿರುವ, ದೇಶದ ರಾಜಕೀಯ ಪಟ್ಟುಗಳನ್ನು ಕಲಿತಿರುವ ಹಾಗೂ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವುದರಲ್ಲಿ ನಿಸ್ಸೀಮರಾಗಿರುವ ಸೋನಿಯಾ ಗಾಂಧಿ ಅವರು ಈಗ ಕಾಂಗ್ರೆಸ್ ಅಧ್ಯಕ್ಷ ಗಾದಿ ಮೇಲೆ ಯಾರನ್ನು ಕೂರಿಸಬೇಕು ಎಂಬುದರಲ್ಲೂ ಇಂತಹುದೇ ಚಾಣಾಕ್ಷತನ ಮೆರೆಯಲು ಮುಂದಾಗಿದ್ದಾರೆ.
ಅತ್ಯಾಪ್ತ, ನಿಷ್ಠಾವಂತ, ಕಣ್ಣಿನಲ್ಲಿ ಸನ್ನೆ ಮಾಡಿದರೂ ಅದನ್ನು ಮಾಡಿ ತೋರಿಸುವ ಅಶೋಕ್ ಗೆಹ್ಲೋಟ್ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡುವ ಕುರಿತು ಮಾತುಗಳು ಕೇಳಿಬರುತ್ತಿರುವುದರ ಹಿಂದೆ ಸೋನಿಯಾ ಗಾಂಧಿಯವರ ರಣತಂತ್ರವಿದೆ ಎಂದೇ ಹೇಳಲಾಗುತ್ತಿದೆ. ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗಲು ಒಪ್ಪದ ಕಾರಣ ಇಕ್ಕಟ್ಟಿಗೆ ಸಿಲುಕಿದರೂ ಅಧ್ಯಕ್ಷ ಗಾದಿಗೆ ನಿಷ್ಠಾವಂತನನ್ನೇ ತಂದು ಕೂರಿಸಿದರೆ ಪರೋಕ್ಷವಾಗಿ ಪಕ್ಷದ ಮೇಲೆ ಹಿಡಿತ ಸಾಧಿಸಬಹುದು ಎಂಬುದು ಸೋನಿಯಾ ಲೆಕ್ಕಾಚಾರವಾಗಿದೆ. ಆದರೆ, ಇದರ ಹಿಂದೆ ಮತ್ತೊಂದು ರಣತಂತ್ರವೂ ಇದೆ ಎಂಬುದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಯ ಚಾಣಾಕ್ಷತನಕ್ಕೆ ಹಿಡಿದ ಕನ್ನಡಿಯಾಗಿದೆ.
ಒಂದೇ ಕಲ್ಲಿಗೆ ಎರಡು ಹಕ್ಕಿ
ಅಶೊಕ್ ಗೆಹ್ಲೋಟ್ ಅವರನ್ನು ಎಐಸಿಸಿ ಹುದ್ದೆಗೇರಿಸಿದರೆ ಸೋನಿಯಾ ಗಾಂಧಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತಾಗಲಿದೆ. ಗಾಂಧಿ ಕುಟುಂಬೇತರ ವ್ಯಕ್ತಿಯೊಬ್ಬರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ ಶ್ರೇಯಸ್ಸು ಸೋನಿಯಾ ಗಾಂಧಿ ಅವರಿಗೆ ಸಲ್ಲುತ್ತದೆ. ಇದೊಂದೇ ಅಲ್ಲ, ಬಹುದಿನಗಳಿಂದ ರಾಜಸ್ಥಾನ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಸಚಿನ್ ಪೈಲಟ್ ಅವರ ಆಸೆ, ಬೇಡಿಕೆಯನ್ನೂ ಈಡೇರಿಸಿದಂತಾಗುತ್ತದೆ.
ಗೆಹ್ಲೋಟ್ ಪದೋನ್ನತಿಯು ಪಕ್ಷದ ಮೇಲೆ ಹಿಡಿತ ಸಾಧಿಸಲು ನೆರವಾದರೆ, ಪೈಲಟ್ ಅವರನ್ನು ಮುಖ್ಯಮಂತ್ರಿ ಮಾಡಿದರೆ ರಾಜಸ್ಥಾನದಲ್ಲಿ ಯುವ ನಾಯಕನಿಗೆ ಮಹತ್ತರ ಹುದ್ದೆ ನೀಡಿದಂತಾಗುತ್ತದೆ. ಇದರಿಂದ ರಾಜಸ್ಥಾನದಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಬಹುದು. ಸಚಿನ್ ಪೈಲಟ್ ಅವರ ಬಿಕ್ಕಟ್ಟನ್ನೂ ಶಾಶ್ವತವಾಗಿ ಬಗೆಹರಿಸಬಹುದು.
ನಿಷ್ಠಾವಂತರ ಮೇಲೇಕೆ ಮಮತೆ?
ಸೋನಿಯಾ ಗಾಂಧಿ ಅವರು ರಾಜಕೀಯಕ್ಕೇ ಪ್ರವೇಶಿಸಿರಲಿಲ್ಲ. ಆಗಲೇ, ಅವರಿಗೆ ನಿಷ್ಠಾವಂತರು ಹೇಗೆ ನೆರವಾಗುತ್ತಾರೆ, ಹೇಗೆ ತಾವು ಪ್ರಾಬಲ್ಯ ಸಾಧಿಸಬಹುದು ಎಂಬುದು ಗೊತ್ತಾಗಿದೆ. ೧೯೯೮ರಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದ ಸೀತಾರಾಮ ಕೇಸರಿ ಅವರನ್ನು ತಮ್ಮ ಬೆಂಬಲಿಗರು ಹೇಗೆ ನಡೆಸಿಕೊಂಡರು, ಹೇಗೆ ತಾವು ಎಐಸಿಸಿ ಗದ್ದುಗೆಯೇರಲು ನೆರವಾದರು ಎಂಬುದು ಸೋನಿಯಾ ಗಾಂಧಿ ಅವರಿಗೆ ಮನವರಿಕೆಯಾಗಿದೆ. ಹಾಗಾಗಿ, ಸೋನಿಯಾ ಅವರು ಯಾರಿಗಾದರೂ ಒಂದು ಹುದ್ದೆ ನೀಡಿದರೆ, ಅದರ ಹಿಂದೆ ನೂರು ಲೆಕ್ಕಾಚಾರವಿರುತ್ತದೆ.
ಒಪ್ಪುವರೇ ಅಶೋಕ್ ಗೆಹ್ಲೋಟ್
ನನಗೆ ಪಕ್ಷವು ಹಲವು ಜವಾಬ್ದಾರಿಗಳನ್ನು ನೀಡಿದೆ, ನಾನು ರಾಜಸ್ಥಾನದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅಶೋಕ್ ಗೆಹ್ಲೋಟ್ ಅವರು ಹೇಳಿದರೂ, ನನ್ನನ್ನು ಅಧ್ಯಕ್ಷನನ್ನಾಗಿ ಮಾಡುತ್ತಾರೆ ಎಂಬುದು ಮಾಧ್ಯಮಗಳ ವರದಿ ಎಂದಷ್ಟೇ ಸ್ಪಷ್ಟನೆ ನೀಡಿದರೂ, “ಸೋನಿಯಾ ಮ್ಯಾಡಂ” ಹೇಳಿದರೆ ಖಂಡಿತವಾಗಿಯೂ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಸಚಿನ್ ಪೈಲಟ್‌ರಂತಹ ಯುವ ನಾಯಕ ಬಂಡಾಯವೆದ್ದರೂ, ರಾಜಸ್ಥಾನ ಮುಖ್ಯಮಂತ್ರಿ ಕುರ್ಚಿಯನ್ನು ಸೋನಿಯಾ ಗಾಂಧಿ ಅವರು ಗೆಹ್ಲೋಟ್ ಅವರಿಗೇ ಬಿಟ್ಟುಕೊಟ್ಟರು. ಅದು ಗೆಹ್ಲೋಟ್ ಅವರು ನಿಷ್ಠರಾಗಿದ್ದಕ್ಕೆ ನೀಡಿದ ಉಡುಗೊರೆಯಾಗಿತ್ತು. ಈಗ ಅದೇ ನಿಷ್ಠೆ, ಪ್ರಾಮಾಣಿಕತೆಗೆ ಮತ್ತೊಂದು ಉಡುಗೊರೆ ನೀಡಲು ಸೋನಿಯಾ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ೭೧ ವರ್ಷದ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್‌ಅನ್ನು ಸಮರ್ಥವಾಗಿ ಮುನ್ನಡೆಸಬಲ್ಲರೇ? ಜಿ-೨೩ ಬಂಡಾಯ ನಾಯಕರು ಅದಕ್ಕೆ ಆಸ್ಪದ ನೀಡುವರೇ? ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್‌ಅನ್ನು ಮತ್ತೆ ಜಯದತ್ತ ತರುವರೇ ಎಂಬ ಪ್ರಶ್ನೆ ರಾಜಕಾರಣಿಗಳು ಮಾತ್ರವಲ್ಲ, ಸಾಮಾನ್ಯರಲ್ಲೂ ಕಾಡುತ್ತಿವೆ.
ಇದನ್ನೂ ಓದಿ | Gehlot Denies | ನನಗೆ ಕಾಂಗ್ರೆಸ್ ಅಧ್ಯಕ್ಷನಾಗಲು ಸೂಚನೆ ಇಲ್ಲ ಎಂದ ಅಶೋಕ್ ಗೆಹ್ಲೋಟ್