Site icon Vistara News

Freebies Issue | ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೂ 10 ವೋಟ್‌ ಸಿಗಲ್ಲ ಎಂದು ಸಿಜೆಐ ಎನ್‌.ವಿ.ರಮಣ ಹೇಳಿದ್ದೇಕೆ?

Supreme

ನವದೆಹಲಿ: ಚುನಾವಣೆಗಳ ವೇಳೆ ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳ ಭರವಸೆ ಕುರಿತು ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಕೆಲ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಪರವಾಗಿಯೇ ಮಾತನಾಡುತ್ತಿವೆ. ಇದರ ಬೆನ್ನಲ್ಲೇ, “ಕೇಂದ್ರ ಸರಕಾರವು ಉಚಿತ ಕೊಡುಗೆಗಳ ಪ್ರಕರಣದ (Freebies Issue) ಕುರಿತು ಒಮ್ಮತದ ತೀರ್ಮಾನಕ್ಕೆ ಬರಲು ಸರ್ವಪಕ್ಷಗಳ ಸಭೆಯನ್ನೇಕೆ ಕರೆಯಬಾರದು” ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ತಿಳಿಸಿದ್ದಾರೆ. ಹಾಗೆಯೇ, ಪ್ರಕರಣದ ಗಂಭೀರತೆ ಕುರಿತು ಮಾತನಾಡುತ್ತ, “ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೂ ೧೦ ವೋಟು ಸಿಗಲಿಕ್ಕಿಲ್ಲ” ಎಂದು ಮಾರ್ಮಿಕವಾಗಿ ಹೇಳಿದರು.

“ವ್ಯಕ್ತಿಗಳಿಗಿಂತ ಪ್ರತಿಯೊಂದು ಪಕ್ಷಗಳೂ ಉಚಿತ ಕೊಡುಗೆಗಳ ಭರವಸೆ ನೀಡುತ್ತವೆ. ಪಕ್ಷಗಳ ಮತಗಳಿಕೆಯ ಮೂಲದ್ರವ್ಯವೇ ಉಚಿತ ಕೊಡುಗೆ ಆಗಿದೆ. ನಾನು ಚುನಾವಣೆಯಲ್ಲಿ ನಿಂತರೂ ೧೦ ಮತ ಸಿಗಲಿಕ್ಕಿಲ್ಲ. ಏಕೆಂದರೆ, ಇಲ್ಲಿ ಒಬ್ಬ ವ್ಯಕ್ತಿಗಿಂತ ಪಕ್ಷಗಳ ಭರವಸೆಗಳ ಮೇಲೆ ಹಚ್ಚು ನಂಬಿಕೆ ಇದೆ. ಎಲ್ಲ ಪಕ್ಷಗಳೂ ಭರವಸೆ ನೀಡುವಾಗ, ಯಾವ ಪಕ್ಷ ಸಮಿತಿಯ ನೇತೃತ್ವ ವಹಿಸುತ್ತದೆ? ಅಷ್ಟಕ್ಕೂ ಕೇಂದ್ರ ಸರಕಾರವೇಕೆ ಸರ್ವಪಕ್ಷ ಸಭೆ ಕರೆಯಬಾರದು” ಎಂದು ಪ್ರಶ್ನಿಸಿದರು.

ಬಿಜೆಪಿ ಸೇರಿ ಎಲ್ಲ ಪಕ್ಷಗಳೂ ಉಚಿತ ಕೊಡುಗೆಗಳ ಭರವಸೆ ನೀಡುವುದರಿಂದ ನ್ಯಾಯಾಲಯವು ಮಧ್ಯಪ್ರವೇಶಿಸುವಂತಾಗಿದೆ ಎಂದು ಹೇಳುತ್ತ, ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸುವುದಾಗಿ ತಿಳಿಸಿದರು. ಉಚಿತ ಕೊಡುಗೆಗಳನ್ನು ವಿರೋಧಿಸಿ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ | ಉಚಿತ ಆಮಿಷ ನೀಡಿದವರು ಯಾರು? ಪ್ರಧಾನಿಯ ಕಾಲೆಳೆದ ಬಿಜೆಪಿ ಸಂಸದ ವರುಣ್‌ ಗಾಂಧಿ

Exit mobile version