ಶಿಮ್ಲಾ: ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಸುಖವಿಂದರ್ ಸಿಂಗ್ ಸುಖು (Sukhvinder Singh Sukhu) ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿದೆ. ಇದರ ಬೆನ್ನಲ್ಲೇ ಸುಖವಿಂದರ್ ಸಿಂಗ್ ಅವರ ಬೆಂಬಲಿಗರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಅತ್ತ, ಹಿಮಾಚಲ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷೆ, ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾದರೆ, ಪ್ರತಿಭಾ ಸಿಂಗ್ ಅವರ ಪರ ಬೆಂಬಲಿಗರ ಒತ್ತಾಯವಿದ್ದರೂ ಹೈಕಮಾಂಡ್, ಸುಖವಿಂದರ್ ಸಿಂಗ್ ಅವರನ್ನೇ ಆಯ್ಕೆ ಮಾಡಲು ಕಾರಣಗಳೇನು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
೧. ಶಾಸಕರ ಬೆಂಬಲ
ಸುಖವಿಂದರ್ ಸಿಂಗ್ ಅವರಿಗೆ ಹೆಚ್ಚಿನ ಶಾಸಕರ ಬೆಂಬಲ ಇದ್ದಿದ್ದೇ ಮುಖ್ಯಮಂತ್ರಿ ಹುದ್ದೆ ಸಿಗಲು ಕಾರಣ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಉನ್ನತ ಮೂಲಗಳ ಪ್ರಕಾರ, ಸುಖವಿಂದರ್ ಅವರಿಗೆ ಪಕ್ಷದ ೧೮ ಶಾಸಕರ ಬೆಂಬಲ ಇತ್ತು. ಪ್ರತಿಭಾ ಸಿಂಗ್ ಪರ ೧೫ ಶಾಸಕರು ಇದ್ದರು. ಇದನ್ನು ಪರಿಗಣಿಸಿದ ಹೈಕಮಾಂಡ್, ಕೊನೆಗೆ ಸುಖವಿಂದರ್ ಅವರಿಗೆ ಮಣೆ ಹಾಕಿದೆ ಎಂದು ತಿಳಿದುಬಂದಿದೆ.
೨. ರಾಹುಲ್ ಆಪ್ತ, ಅನುಭವಿ ನಾಯಕ
ಪ್ರತಿಭಾ ಸಿಂಗ್ ಅವರಿಗೆ ಹೋಲಿಸಿದರೆ ಸುಖವಿಂದರ್ ಸಿಂಗ್ ಅವರಿಗೆ ಸಂಘಟನೆಯಲ್ಲಿ ಹೆಚ್ಚಿನ ಅನುಭವವಿದೆ. ಪ್ರತಿಭಾ ಸಿಂಗ್ ಅವರಿಗೂ ಮೊದಲೇ ಸುಖವಿಂದರ್ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿದ್ದಾರೆ. ಅವರಿಗೆ ಆಡಳಿತಾತ್ಮಕವಾಗಿಯೂ ಅನುಭವವಿದೆ. ಮೇಲಾಗಿ, ಸುಖವಿಂದರ್ ಸಿಂಗ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಪ್ತರಾಗಿದ್ದೂ ಸಿಎಂ ಆಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.
೩. ಒಬ್ಬ ವ್ಯಕ್ತಿ, ಒಂದೇ ಹುದ್ದೆ
ಪ್ರತಿಭಾ ಸಿಂಗ್ ಅವರು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದಾರೆ. ಪಕ್ಷದಲ್ಲೀಗ ‘ಒಬ್ಬ ವ್ಯಕ್ತಿ, ಒಂದೇ ಹುದ್ದೆ’ ಎಂಬ ನೀತಿ ಜಾರಿಯಲ್ಲಿರುವ ಕಾರಣ, ಪ್ರತಿಭಾ ಸಿಂಗ್ ಅವರಿಗೆ ಮತ್ತೊಂದು ಹುದ್ದೆ ನೀಡುವುದು ಬೇಡ ಎಂಬುದು ಹೈಕಮಾಂಡ್ ಉದ್ದೇಶವಾಗಿದೆ. ಹಾಗಾಗಿ, ಪ್ರತಿಭಾ ಸಿಂಗ್ ಅವರ ಬದಲು ಸುಖವಿಂದರ್ ಸಿಂಗ್ ಅವರಿಗೆ ಮನ್ನಣೆ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.
೪. ಹೊಸ ಮುಖ, ನವ ನಾಯಕತ್ವಕ್ಕೆ ಆದ್ಯತೆ
ಸುಖವಿಂದರ್ ಸಿಂಗ್ ಅವರಿಗೆ ಈಗ ೫೮ ವರ್ಷ. ಪ್ರತಿಭಾ ಸಿಂಗ್ ಅವರಿಗೆ ೬೬ ವರ್ಷ ವಯಸ್ಸು. ಪ್ರತಿಭಾ ಸಿಂಗ್ ಅವರ ಪತಿ ಆರು ಬಾರಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಕುಟುಂಬದ ನಾಯಕತ್ವದ ಬಗ್ಗೆ ಜನರಿಗೆ ಗೊತ್ತಿದೆ. ಹಾಗಾಗಿ, ಈ ಬಾರಿ ಹೊಸ ನಾಯಕತ್ವಕ್ಕೆ ಮನ್ನಣೆ ನೀಡುವ ಮೂಲಕ ರಾಜ್ಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಬೇಕು ಎಂಬ ದೃಷ್ಟಿಯಿಂದಾಗಿ ಸುಖವಿಂದರ್‌ಗೆ ಸಿಎಂ ಹುದ್ದೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Sukhwinder Singh Sukhu | ಸುಖವಿಂದರ್ ಸಿಂಗ್‌ಗೆ ಹಿಮಾಚಲ ಸಿಎಂ ಪಟ್ಟ, ಅಷ್ಟಕ್ಕೂ ಯಾರಿದು ಸುಖವಿಂದರ್?