Site icon Vistara News

ದೇವೇಗೌಡರಿಗೆ ಈ ವಯಸ್ಸಲ್ಲಿ ಬಿಜೆಪಿ, ಮೋದಿ ಸಹವಾಸ ಏಕೆ ಬೇಕಿತ್ತು? ರಾಜ್ಯಸಭೆಯಲ್ಲಿ ಖರ್ಗೆ ಪ್ರಶ್ನೆ

Mallikarjun Kharge

Why Did HD Deve Gowda Go With BJP At This Age; Asks Mallikarjun Kharge

ನವದೆಹಲಿ: ಸಂಸತ್ ಅಧಿವೇಶನದಲ್ಲಿ (Parliament Session) ವಾದ, ವಿವಾದ, ಆಕ್ರೋಶ, ಆರೋಪ, ಚರ್ಚೆ, ಗಲಾಟೆಯ ಜತೆಗೆ ಕೆಲವೊಮ್ಮೆ ನವಿರಾದ ಹಾಸ್ಯ, ಚಟಾಕಿ, ಜೋಕ್‌, ಕಾಲೆಳೆಯುವಿಕೆ, ರಾಜಕಾರಣಿಗಳ ಮಧ್ಯೆ ಇರುವ ಅವಿನಾಭಾವ ಸಂಬಂಧವೂ ಅನಾವರಣಗೊಳ್ಳುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ರಾಜ್ಯಸಭೆಯಲ್ಲಿ ಎಚ್‌.ಡಿ.ದೇವೇಗೌಡರ (HD Deve Gowda) ಕುರಿತು ಸಿಡಿಸಿದ ಹಾಸ್ಯ ಚಟಾಕಿಗೆಗೆ ಇಡೀ ಕಲಾಪ ನಗೆಗಡಲಲ್ಲಿ ಮುಳುಗಿದೆ. “91ನೇ ವಯಸ್ಸಿನಲ್ಲಿ ದೇವೇಗೌಡರಿಗೆ ಬಿಜೆಪಿ, ಮೋದಿ (BJP JDS Alliance) ಸಹವಾಸ ಬೇಕಿತ್ತಾ” ಎಂದು ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಕೇಳಿದ್ದಾರೆ.

“ದೇವೇಗೌಡರು ಜೀವನಪೂರ್ತಿ ರೈತ ಪ್ರತಿಭಟನೆ, ಸಮಾಜವಾದ, ಜಾತ್ಯತೀತವಾದವನ್ನು ಪ್ರತಿಪಾದಿಸಿದರು. ಆದರೆ, ದೇವೇಗೌಡರು 91ನೇ ವಯಸ್ಸಿನಲ್ಲಿ ಹೋಗಿ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ಜತೆ ಮೈತ್ರಿ ಮಾಡಿಕೊಂಡರು. ಅದರಲ್ಲೂ, ನರೇಂದ್ರ ಮೋದಿ ಅವರನ್ನು ಎಚ್‌.ಡಿ.ದೇವೇಗೌಡರು ತಬ್ಬಿಕೊಂಡರು. ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದರು. ನಾನು, 20-30 ವರ್ಷದವನಾಗಿದ್ದಾಗಿನಿಂದ ನೋಡುತ್ತಿದ್ದೇನೆ. ಇವರು ಯಾರನ್ನೂ ಹೊಗಳಿದವರಲ್ಲ. ಈಗ ಅವರು ಏಕಾಏಕಿ ಮೋದಿ ಅವರನ್ನು ಹೊಗಳಿದ್ದು ನನಗೆ ಅಚ್ಚರಿ ಮೂಡಿಸಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳುತ್ತಲೇ ಪ್ರಧಾನಿ ನರೇಂದ್ರ ಮೋದಿ, ಎಚ್.ಡಿ.ದೇವೇಗೌಡ ಸೇರಿ ಎಲ್ಲರೂ ಮನಸಾರೆ ನಕ್ಕರು.

“ಬೇರೆಯವರ ಬಗ್ಗೆ ದೇವೇಗೌಡರು ಹೊಗಳುವುದು ತುಂಬ ಕಡಿಮೆ. ಅವರಿಗೆ ಅಂತಹ ಅಭ್ಯಾಸವೇ ಇಲ್ಲ. ಈ ಅಭ್ಯಾಸವು ಬದಲಾವಣೆಯಾಗಿದ್ದೇ ನನಗೆ ಅಚ್ಚರಿ ಮೂಡಿಸಿದೆ. ನನ್ನನ್ನು ಪ್ರೀತಿಸಿದ, ಆತ್ಮೀಯತೆಯಿಂದ ಕಂಡ ಏಕೈಕ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಮಾತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಪ್ರೀತಿ, ಸಂಬಂಧ ಮೊದಲೇ ಇದ್ದರೆ ಚೆನ್ನಾಗಿತ್ತು. ಈಗ 91ನೇ ವಯಸ್ಸಿನಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಏನು ಪ್ರಯೋಜನ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇದನ್ನೂ ಓದಿ: ದೇಶಕ್ಕೆ ಮನಮೋಹನ್‌ ಸಿಂಗ್‌ ಕೊಡುಗೆ ಅಪಾರ; ರಾಜ್ಯಸಭೆಯಲ್ಲಿ ಮೋದಿ ಬಣ್ಣನೆ

ಖರ್ಗೆಯನ್ನು ಹೊಗಳಿದ ಗೌಡರು

ಮತ್ತೊಂದೆಡೆ, ಸಂಸತ್ತಿನಲ್ಲಿ ಎಚ್‌.ಡಿ.ದೇವೇಗೌಡರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಹಾಡಿ ಹೊಗಳಿದರು. “ಮಲ್ಲಿಕಾರ್ಜುನ ಖರ್ಗೆ ಒಬ್ಬ ಪ್ರಾಮಾಣಿಕ ವ್ಯಕ್ತಿ. ಅವರೇ ಮುಖ್ಯಮಂತ್ರಿಯಾಗಲಿ, ಕುಮಾರಸ್ವಾಮಿ ಬೇಡ ಎಂದು ನಾನು ಮೈತ್ರಿ ವೇಳೆ ಹೇಳಿದೆ. ಆದರೆ, ಕಾಂಗ್ರೆಸ್ಸಿಗರೇ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗುವುದರಿಂದ ತಡೆದರು. ನಾನು ಆ ಕಾಂಗ್ರೆಸ್‌ ನಾಯಕರ ಹೆಸರು ಹೇಳಲು ಹೋಗುವುದಿಲ್ಲ. ಆದರೆ, ಖರ್ಗೆ ಅವರೇ ಸಿಎಂ ಆಗಬೇಕು ಎಂಬುದು ನನ್ನ ಇಚ್ಛೆಯಾಗಿತ್ತು” ಎಂದು ದೇವೇಗೌಡರು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version