Site icon Vistara News

India Bloc: ಮಮತಾ ಬ್ಯಾನರ್ಜಿ ಇಂಡಿಯಾ ಕೂಟದಿಂದ ದೂರ ಸರಿಯಲು ರಾಹುಲ್ ಕಾರಣ?

INDIA Alliance Partner Trinamool TMC Will contest all 42 West Bengal Seats

ನವದೆಹಲಿ: ಟಿಎಂಸಿ ನಾಯಕಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (CM Mamata Banerjee) ಅವರು ನೀಡಿದ ಹೇಳಿಕೆಯೊಂದು ಕಾಂಗ್ರೆಸ್ ನೇತೃತ್ವದ (Congress Party) ಇಂಡಿಯಾ ಕೂಟದಲ್ಲಿ (India Bloc) ಬಿರುಗಾಳಿ ಎಬ್ಬಿಸಿದೆ. ಬಂಗಾಳದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಇಲ್ಲ. ರಾಜ್ಯದ ಎಲ್ಲ 42 ಕ್ಷೇತ್ರಗಳಲ್ಲೂ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಆದಾಗ್ಯೂ, ಟಿಎಂಸಿ ಇಂಡಿಯಾ ಕೂಟದ ಭಾಗವಾಗಿದೆ ಎಂದು ಬ್ಯಾನರ್ಜಿ ಅವರು ಹೇಳಿದ್ದರು. ಆದರೆ, ಮಮತಾ ಬ್ಯಾನರ್ಜಿ ಅವರ ಈ ದಿಢೀರ್ ನಿರ್ಧಾರಕ್ಕೆ ಕಾರಣ ಏನು ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ನೀಡಿದ ಹೇಳಿಕೆಯೊಂದು ಮಮತಾ ಬ್ಯಾನರ್ಜಿ ಅವರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಬಂಗಾಳದಲ್ಲಿ ಮುನ್ನಡೆಸಲಿರುವ ರಾಹುಲ್ ಗಾಂಧಿ ಮಂಗಳವಾರ ಮಾತನಾಡಿ, ಯಾವುದೇ ಮಾತುಕತೆಗಳು ನಡೆಯದಿದ್ದರೂ ಟಿಎಂಸಿ ಜತೆ ಹಂಚಿಕೆಯ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದರು ಎನ್ನಲಾಗಿದೆ. ಈ ಹೇಳಿಕೆಯಿಂದ ಮಮತಾ ಬ್ಯಾನರ್ಜಿ ಅವರಿಗೆ ಅವಮಾನವಾದಂತಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಟಿಎಂಸಿ ನಾಯಕರೊಬ್ಬರು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಅವರು ಹೇಳಿದ್ದೇನು?

ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಕೈಗೊಂಡಿರುವ ರಾಹುಲ್ ಗಾಂಧಿ ಅವರು, ಮಮತಾ ಬ್ಯಾನರ್ಜಿ ಅವರು ತಮಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತುಂಬಾ ಹತ್ತಿರದವರಾಗಿದ್ದಾರೆ. ಕೆಲವೊಮ್ಮೆ ನಮ್ಮ ಪಕ್ಷದ ನಾಯಕರು ಏನೋ ಹೇಳುತ್ತಾರೆ, ಅವರ ನಾಯಕರು ಇನ್ನೇನೋ ಹೇಳುತ್ತಾರೆ. ಇದು ಹೀಗೆ ನಡೆಯುತ್ತಿರುತ್ತದೆ. ಇದೊಂದು ಸ್ವಾಭಾವಿಕ ಸಂಗತಿ ಎಂದು ಅಸ್ಸಾಮ್‌ನಲ್ಲಿ ಹೇಳಿದ್ದರು. ಈ ಹೇಳಿಕೆಯು ಮಮತಾ ಬ್ಯಾನರ್ಜಿ ಅವರಿಗೆ ಇರಸುಮುರಸು ತಂದಿದೆ ಎಂದು ಹೇಳಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಇಲ್ಲ ಎಂದು ಮಮತಾ ಬ್ಯಾನರ್ಜಿ ಘೋಷಿಸಿದ ಕೆಲವೇ ನಿಮಿಷಗಳ ಬಳಿಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ತೃಣಮೂಲ ಕಾಂಗ್ರೆಸ್ ಹೊರತಪಡಿಸಿ ಇಂಡಿಯಾ ಕೂಟವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಿತ್ರಪಕ್ಷಗಳೊಂದಿಗೆ ಮಾತುಕತೆಯಲ್ಲಿ ತೊಡಗಿರುವ ಕಾಂಗ್ರೆಸ್ ನಾಯಕರೊಬ್ಬರು ಪಕ್ಷದ ನಾಯಕತ್ವವು ಬ್ಯಾನರ್ಜಿ ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದರು. ಆದರೆ, ಆದರೆ ಪಶ್ಚಿ ಬಂಗಾಳದ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದಲ್ಲಿ ಮೈತ್ರಿ ಕುರಿತು ತೃಣಮೂಲ ಕಾಂಗ್ರೆಸ್ ಪಕ್ಷದ ವಿರುದ್ದ ಅಸಮಾಧಾನವಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಎರಡೇ ಸೀಟು ಎಂದಿದ್ದ ಮಮತಾ

ಸೀಟು ಷೇರಿಂಗ್ ಸಂಬಂಧ ಕಾಂಗ್ರೆಸ್ ಮತ್ತು ಟಿಎಂಸಿ ಮಧ್ಯೆ ಅಸಮಾಧಾನವಿದೆ. 2019ರಲ್ಲಿ ಕಾಂಗ್ರೆಸ್ ಗೆದ್ದಿದ್ದ ಮಾಲ್ಡಾ ದಕ್ಷಿಣ ಮತ್ತು ಬಹರಾಮಪುರ್ ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡಲಾಗುವುದು ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದರು. ಹೀಗಿದ್ದಾಗ್ಯೂ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅಥವಾ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಬ್ಯಾನರ್ಜಿ ಅವರೊಂದಿಗೆ ಮಾತನಾಡಿದರೆ ಕಾಂಗ್ರೆಸ್ ಹೆಚ್ಚುವರಿ ಕ್ಷೇತ್ರಗಳನ್ನು ಪಡೆಯಬಹುದು. ಹಾಗೆಯೇ, ಮೇಘಾಲಯ ಮತ್ತು ಅಸ್ಸಾಮ್‌ನಲ್ಲಿ ಟಿಎಂಸಿಗೆ ತಲಾ ಒಂದೊಂದು ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಡಬೇಕಾಗುತ್ತದೆ ಎಂದು ಟಿಎಂಸಿ ನಾಯಕರೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: CM Mamata Banerjee: ಕಾರು ಅಪಘಾತದಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಗಾಯ

Exit mobile version