ಬೆಂಗಳೂರು: ವಿಷಪೂರಿತ ಮದ್ಯ ಸೇವಿಸಿ ಹಲವಾರು ಮಂದಿ ಜೀವಕಳೆದುಕೊಂಡ ಸುದ್ದಿಯನ್ನು ನಾವೆಲ್ಲ ಮಾಧ್ಯಮಗಳಿಂದ ತಿಳಿದೇ ಇದ್ದೇವೆ. ಸಾಯುವವರ (Dangerous Hooch) ಸಂಖ್ಯೆ ಇನ್ನೂ ಹೆಚ್ಚಬಹುದು ಎನ್ನಲಾಗುತ್ತಿದೆ. ವಿಷಪೂರಿತ ಮದ್ಯ ಅಥವಾ ಕಳ್ಳಬಟ್ಟಿ ದುರಂತಗಳು ಇದೇನು ಹೊಸದೂ ಅಲ್ಲ, ಮೊದಲ ಬಾರಿಯೂ ಅಲ್ಲ. ಈಗಾಗಲೇ ಲೆಕ್ಕವಿಲ್ಲದಷ್ಟು ಜನ ಇದರಿಂದ ಪ್ರಾಣ ಕಳೆದುಕೊಂಡಿದ್ದರೂ, ಇಂಥ ಪ್ರಕರಣಗಳು ಮತ್ತೆ ಮತ್ತೆ ನಡೆಯುತ್ತಿವೆ. ಬಿಹಾರದಲ್ಲಿ ಕೆಲ ದಿನಗಳ ಹಿಂದಷ್ಟೇ ಕಳ್ಳಬಟ್ಟಿ ಸೇವಿಸಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಅಂದಹಾಗೆ, ಈ ಪ್ರಕರಣಗಳಿಗಿರುವ ಸಾಮಾಜಿಕ ಆಯಾಮಗಳು ಹಲವಾರು. ಅವುಗಳ ಹೊರತಾಗಿ ಇದಕ್ಕೊಂದು ವೈದ್ಯಕೀಯ ಅಥವಾ ಆರೋಗ್ಯದ ಆಯಾಮವೂ ಇದೆಯಲ್ಲ, ಆ ದೃಷ್ಟಿಯಲ್ಲಿ ಹೇಳುವುದಾದರೆ- ಮದ್ಯ ವಿಷವಾಗುವುದೆಂದರೇನು? ಇದನ್ನು ಕುಡಿದವರೇಕೆ ಸಾಯುತ್ತಾರೆ? ಇದರಿಂದ ದೇಹದ ಮೇಲಾಗುವ ಪರಿಣಾಮಗಳೇನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಮದ್ಯ ವಿಷವೇ?
ನೇರವಾಗಿ ಅಲ್ಲದಿದ್ದರೂ ಕ್ರಮೇಣ ಹೌದು ತಾನೆ! ಆದರ ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚಿನ ಮದ್ಯವನ್ನು ದೇಹಕ್ಕೆ ಸೇರಿಸಿದರೆ ಅಥವಾ ಭಾರಿ ಪ್ರಮಾಣವನ್ನು ಅತಿ ಕ್ಷಿಪ್ರವಾಗಿ ಹೊಟ್ಟೆಗಿಳಿಸಿದರೆ ಉಸಿರಾಟ, ಹೃದಯ ಬಡಿತ, ದೇಹದ ಉಷ್ಣತೆಗಳೆಲ್ಲದರ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಇದರಿಂದಾಗಿ ವ್ಯಕ್ತಿ ಕೋಮಾಗೆ ಜಾರಬಹುದು ಅಥವಾ ಸಾವು ಸಂಭವಿಸಬಹುದು. ಇದಲ್ಲದೆ, ಸ್ಥಳೀಯವಾಗಿ ದೊರೆಯುವ ಅಗ್ಗದ ವಸ್ತುಗಳನ್ನೆಲ್ಲ ಕೊಳೆಸಿ, ಬೇಗ ಹುದುಗು ಬರುವುದಕ್ಕೆ ಎಥೆನಾಲ್‌ನಂಥ ಒಂದಿಷ್ಟು ರಾಸಾಯನಿಕಗಳನ್ನು ಸೇರಿಸಿ, ಸುರಕ್ಷತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ತಯಾರಿಸುವ ಕಳ್ಳಬಟ್ಟಿ ಸಾರಾಯಿಯಿಂದ ಮದ್ಯ ವಿಷವಾಗುತ್ತದೆ.
ಎಥೆನಾಲ್ ಅಪಾಯಕಾರಿಯೇ?
ಹಾಗಲ್ಲ. ಯಾವ ವಸ್ತುವನ್ನು, ಯಾವುದಕ್ಕೆ, ಹೇಗೆ ಮತ್ತು ಎಷ್ಟು ಬಳಕೆ ಮಾಡಲಾಗುತ್ತದೆ ಎನ್ನುವುದರ ಆಧಾರದ ಮೇಲೆ ವಿಷ ಹೌದೋ ಅಲ್ಲವೋ ಎಂಬುದು ನಿರ್ಧಾರವಾಗುತ್ತದೆ. ಇಥೈಲ್ ಆಲ್ಕೋಹಾಲ್ ಅಥವಾ ಎಥೆನಾಲ್ ಎಂಬ ವಸ್ತು ಬಣ್ಣವಿಲ್ಲದ, ದಹಿಸಿ ಹೋಗುವಂಥ, ನೀರಿನಲ್ಲಿ ಕರಗಬಲ್ಲ, ಕೊಳಕು ಘಾಟಿನಂಥ ವಾಸನೆಯುಳ್ಳ ದ್ರವ. ನೈಸರ್ಗಿಕವಾಗಿ ಹುದುಗು ಬಂದ ಅಲ್ಕೋಹಾಲ್‌ಗಳಲ್ಲೂ ಸಾಮಾನ್ಯವಾಗಿ ಕಂಡುಬರುವ ಅಂಶವಿದು. ಅಲ್ಕೋಹಾಲ್‌ನಲ್ಲಿ ಮಾತ್ರವಲ್ಲದೆ ವಿನೇಗರ್, ಮೌಥ್ ವಾಷ್, ಪರ್ಫ್ಯೂಮ್, ಸ್ಯಾನಿಟೈಸರ್‌ನಂಥ ಹಲವು ಉತ್ಪನ್ನಗಳ ತಯಾರಿಕೆಯಲ್ಲಿ ಇದರ ಬಳಕೆಯಾಗುತ್ತದೆ. ಇವೆಲ್ಲ ಹದವರಿತು, ಸೂಕ್ತ ರೀತಿಯಲ್ಲಿ ಮಾಡುವಂಥ ಬಳಕೆಯ ವಿಷಯವಾಯಿತು. ಇದರಿಂದ ಬಳಸುವವರ ಪಾಲಿಗೆ ಎಥೆನಾಲ್ ವಿಷವಾಗುವುದಿಲ್ಲ. ಈ ದಿನ ಬಳಕೆಯ ವಸ್ತುಗಳನ್ನೂ ಕೆಲವೊಮ್ಮೆ ಮಕ್ಕಳು ಅಥವಾ ಉಳಿದವರು ತಿಳಿಯದೆ ಬಾಟಲಿಗಟ್ಟಲೆ ಸೇವಿಸಿ ಆಸ್ಪತ್ರೆ ಸೇರಿದ (ಕೆಲವೊಮ್ಮೆ ಜೀವ ಕಳೆದುಕೊಂಡ) ಉದಾಹರಣೆಗಳಿವೆ. ಆದರೆ ಮದ್ಯದ ವಿಷಯದಲ್ಲಿ ಹಾಗಲ್ಲ, ಬೇಗನೆ ಹುದುಗು ಬರಬೇಕೆಂಬ ಉದ್ದೇಶದಿಂದ ಭಾರೀ ಪ್ರಮಾಣದ ಎಥೆನಾಲನ್ನು ಕಳ್ಳಬಟ್ಟಿಯಲ್ಲಿ ತಯಾರಿಸುವ ಮದ್ಯಕ್ಕೆ ಬಳಸಲಾಗುತ್ತದೆ.
ಇದರಿಂದ ಏನಾಗುತ್ತದೆ?
ಕೇಂದ್ರ ನರಮಂಡಳದ ಮೇಲೆ ನೇರವಾಗಿ ಪರಿಣಾಮ ಬೀರುವಂಥ ರಾಸಾಯನಿಕವಿದು. ಇದರಿಂದ ನಮ್ಮ ದೇಹದ ಜಠರ, ಯಕೃತ್ತಿನಂಥ ಎಲ್ಲಾ ಅಂಗಗಳ ಮೇಲೂ ಇದರ ಪರಿಣಾಮ ಉಂಟಾಗುತ್ತದೆ. ಮೊದಲಿಗೆ ಒಳ್ಳೆಯ ಕಿಕ್ ಬಂದಂತೆ ಭಾಸವಾದರೂ, ಹೆಚ್ಚು ಸಮಯವಿಲ್ಲದೇ ಬಹುಬೇಗ ದೇಹವನ್ನೆಲ್ಲ ಈ ರಾಸಾಯನಿಕ ವ್ಯಾಪಿಸುತ್ತದೆ. ಮೆದುಳೇ ತಣ್ಣಗಾದ ಮೇಲೆ ಇನ್ನೇನು? ದೇಹದ ಹಲವು ಅಂಗಗಳು ತಮ್ಮ ಕೆಲಸ ಮಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಇದು ನೀರಿನಲ್ಲಿ ಸುಲಭವಾಗಿ ಕರಗುವ ವಸ್ತುವಾದ್ದರಿಂದ ದೇಹದಲ್ಲಿ ಕ್ಷಿಪ್ರವಾಗಿ ಹರಡುತ್ತದೆ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿರುವಾಗ ಹೆಚ್ಚಿನ ಪ್ರಮಾಣದ ಎಥೆನಾಲ್ ಜಠರ ಸೇರಿದರೆ ಕೋಮಾ ಅಥವಾ ಸಾವು ಬಹುತೇಕ ಖಚಿತ. ಒಂದೊಮ್ಮೆ ಬದುಕಿದರೂ, ಸರಿಪಡಿಸಲಾಗದ ರೀತಿಯಲ್ಲಿ ಮೆದುಳು ಮತ್ತು ದೇಹದ ಇತರ ಅಂಗಗಳು ಹಾನಿಗೆ ಒಳಗಾಗಿರುತ್ತವೆ.
ಇದನ್ನೂ ಓದಿ | Bihar Hooch Tragedy | ಕಳ್ಳಬಟ್ಟಿ ಸೇವಿಸಿ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ಇಲ್ಲ, ನಿತೀಶ್ ಕುಮಾರ್ ಘೋಷಣೆ