Site icon Vistara News

Joshimath Sinking | ಉತ್ತರಾಖಂಡದ ಜೋಶಿಮಠ ಪಟ್ಟಣ ಮುಳುಗುತ್ತಿರುವುದೇಕೆ? 600 ಮನೆ ಬಿರುಕು ಬಿಟ್ಟಿರುವುದೇಕೆ?

Joshimath Sinking

ಡೆಹ್ರಾಡೂನ್‌: ಮನುಷ್ಯನ ಅತಿ ಆಸೆ, ಅತಿಕ್ರಮಣ, ಅರಣ್ಯ ನಾಶ, ಎಲ್ಲೆಂದರಲ್ಲಿ ಗಗನಚುಂಬಿ ಕಟ್ಟಡಗಳನ್ನು ಕಟ್ಟುತ್ತಿರುವ ಕಾರಣ ಪ್ರಕೃತಿ ವಿಕೋಪ, ಭೂಕಂಪ, ತಾಪಮಾನ ಏರಿಕೆ ಸೇರಿ ಹಲವು ವೈಪರೀತ್ಯಗಳು ಸಂಭವಿಸುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರಾಖಂಡದ ಜೋಶಿಮಠ ಪಟ್ಟಣವೇ (Joshimath Sinking) ಮುಳುಗುತ್ತಿದೆ.

ಹೌದು, ಉತ್ತರಾಖಂಡದ ರಿಷಿಕೇಶ್‌-ಬದ್ರಿನಾಥ್‌ ರಾಷ್ಟ್ರೀಯ ಹೆದ್ದಾರಿಯಲ್ಲಿರುವ, ಗಿರಿ ಪ್ರದೇಶದ ಪಟ್ಟಣ ಎನಿಸಿರುವ ಜೋಶಿಮಠ ಕೂಡ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತದೆ. ಆದರೆ, ಕೆಲ ದಿನಗಳಿಂದ ಏಕಾಏಕಿ ದೇವಾಲಯ ಕುಸಿಯುತ್ತಿವೆ. ಭೂಮಿ ಬಿರುಕು ಬಿಡುತ್ತಿದೆ. ಎಲ್ಲೆಂದರಲ್ಲಿ ನೀರು ಜಿನುಗುತ್ತಿದೆ. ಸುಮಾರು 600 ಮನೆಗಳು ಬಿರುಕು ಬಿಟ್ಟಿವೆ. ಊರಿನ ಜನ, “ಪಟ್ಟಣವೇ ಮುಳುಗುತ್ತಿದೆ ಎಂಬಂತೆ ಭಾಸವಾಗುತ್ತಿದೆ” ಎಂದು ಹೇಳುತ್ತಿದ್ದಾರೆ.

ಆತಂಕದಲ್ಲಿ ಜನ
ಪಟ್ಟಣದಲ್ಲಿ ನೂರಾರು ಮನೆಗಳು ಬಿರುಕು ಬಿಡುತ್ತಿರುವ ಕಾರಣ, ಕಟ್ಟಡಗಳು ಕುಸಿಯುತ್ತಿರುವ ಕಾರಣ ಜನ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ. ಯಾವಾಗ ಮನೆ ಕುಸಿಯುತ್ತದೆಯೋ, ಯಾವಾಗ ಬೆಟ್ಟ ಕುಸಿಯುತ್ತದೆಯೋ ಎಂಬ ಭೀತಿ ಎದುರಾಗಿದೆ. ಇದರಿಂದಾಗಿಯೇ, ಈಗಾಗಲೇ ನೂರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಆದರೂ, ಉಳಿದವರು ಆತಂಕದಲ್ಲಿಯೇ ದಿನ ದೂಡುವಂತಾಗಿದೆ. ಆದಾಗ್ಯೂ, ಸರ್ಕಾರವು ಸಕಲ ಕ್ರಮದ ಭರವಸೆ ನೀಡಿದೆ.

ಏನಿದಕ್ಕೆ ಕಾರಣ?
ಜೋಶಿಮಠ ಪಟ್ಟಣವು ಗಿರಿ ಪ್ರದೇಶವಾದ ಕಾರಣ ಇಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂಬ ಎಚ್ಚರಿಕೆ ಇದೆ. ಆದರೂ, ಕಳೆದ ಕೆಲವು ದಶಕಗಳಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಮಾಡಲಾಗುತ್ತಿದೆ. ಜಲವಿದ್ಯುತ್‌ ಘಟಕಗಳ ನಿರ್ಮಾಣ ಕಾಮಗಾರಿ, ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಕಟ್ಟಡಗಳ ನಿರ್ಮಾಣ ಹೆಚ್ಚಿದೆ. ಇದರಿಂದಾಗಿ ಕಟ್ಟಡಗಳ ಕುಸಿತ, ಮನೆಗಳ ಬಿರುಕು, ಎಲ್ಲೆಂದರಲ್ಲಿ ನೀರು ಜಿನುಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯ ಎದುರಾಗಬಹುದು ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ | Flash Flood | ಹಿಮಾಚಲ ಪ್ರದೇಶ, ಉತ್ತರಾಖಂಡ್‌ನಲ್ಲಿ ಪ್ರವಾಹ ವಿಕೋಪಕ್ಕೆ 37 ಬಲಿ

Exit mobile version