ಚೆನ್ನೈ: ಅಥ್ಲಿಟ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ (Wrestlers Protest) ನಡೆಸುತ್ತಿರುವ ಕುಸ್ತಿಪಟುಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬೆಂಬಲ ಸೂಚಿಸಿದ ಬೆನ್ನಲ್ಲೇ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಸ್ಟಾಲಿನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲ ಘೋಷಿಸಿರುವ ಸ್ಟಾಲಿನ್ ಅವರು ಚಿತ್ರಸಾಹಿತಿ ವೈರಮುತ್ತು ವಿರುದ್ಧ ಕೇಳಿಬಂದಿರುವ ಆರೋಪಗಳ ವಿಚಾರದಲ್ಲಿ ಏಕೆ ಮೌನವಾಗಿದ್ದಾರೆ” ಎಂದು ಪ್ರಶ್ನಿಸಿದ್ದಾರೆ.
ಗೀತರಚನೆಕಾರ ವೈರಮುತ್ತು ಅವರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಕೆಲ ವರ್ಷಗಳ ಹಿಂದೆ ಎಂದು ಚಿನ್ಮಯಿ ಶ್ರೀಪಾದ ಆರೋಪಿಸಿದ್ದರು. 2018ರಲ್ಲಿ ದೇಶಾದ್ಯಂತ ಕೇಳಿಬಂದ ಮೀ ಟೂ ಅಭಿಯಾನಕ್ಕೆ ಚಿನ್ಮಯಿ ಶ್ರೀಪಾದ ಬೆಂಬಲ ಸೂಚಿಸಿದ್ದರು. ಈಗ ಮೀ ಟೂ ರೀತಿಯ ಪ್ರಕರಣದಲ್ಲಿಯೇ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಎಂ.ಕೆ.ಸ್ಟಾಲಿನ್ ಬೆಂಬಲ ಸೂಚಿಸಿದ ಕಾರಣ ಚಿನ್ಮಯಿ ಶ್ರೀಪಾದ ಅವರು ಪ್ರಶ್ನೆ ಮಾಡಿದ್ದಾರೆ.
“ತಮಿಳುನಾಡಿನಲ್ಲಿ ವೈರಮುತ್ತು ಅವರ ಪರ ತುಂಬ ಜನ ನಿಂತಿದ್ದಾರೆ. ಆದರೆ, ತಮಿಳುನಾಡಿನಲ್ಲಿ ವೈರಮುತ್ತು ಅವರ ವ್ಯಕ್ತಿತ್ವ ಚೆನ್ನಾಗಿದೆ ಎಂದು ಒಬ್ಬರೂ ಹೇಳುವುದಿಲ್ಲ. ನಾನು ಯಾವಾಗ ವೈರಮುತ್ತು ವಿಚಾರ ಪ್ರಸ್ತಾಪಿಸುತ್ತೀನೋ, ಆಗ ಸ್ಟಾಲಿನ್ ಅವರು ಮಗುಮ್ಮಾಗುತ್ತಾರೆ. ಕಳೆದ ಐದು ವರ್ಷದಿಂದ ನನ್ನ ಪ್ರಕರಣವು ಸಿಟಿ ಸಿವಿಲ್ ಕೋರ್ಟ್‌ನಲ್ಲಿದೆ. ಆದರೆ, ಇದುವರೆಗೆ ನ್ಯಾಯ ಸಿಕ್ಕಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಹಿನ್ನೆಲೆಯಲ್ಲಿ ಚಿನ್ಮಯಿ ಶ್ರೀಪಾದ ಅವರನ್ನು ಕಳೆದ ಐದು ವರ್ಷದಿಂದ ದಕ್ಷಿಣ ಭಾರತ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ. ಈಗಲೂ ಅವರ ವಿರುದ್ಧದ ನಿಷೇಧ ತೆರವುಗೊಳಿಸಿಲ್ಲ. ಇನ್ನು ಕೆಲವು ದಿನಗಳ ಹಿಂದಷ್ಟೇ, ಕುಸ್ತಿಪಟುಗಳ ಹೋರಾಟಕ್ಕೆ ನಟ ಕಮಲ್ ಹಾಸನ್ ಅವರು ಬೆಂಬಲ ಸೂಚಿಸಿದ್ದರು.
ಇದನ್ನೂ ಓದಿ: Wrestlers Protest: ಕುಸ್ತಿಪಟುಗಳ ಸಮಸ್ಯೆಯನ್ನು ಕೇಂದ್ರ ಸೂಕ್ಷ್ಮವಾಗಿ ಗಮನಿಸುತ್ತಿದೆ; ಅನುರಾಗ್ ಠಾಕೂರ್
“ಕುಸ್ತಿಪಟುಗಳು ದೇಶಕ್ಕಾಗಿ ಪದಕ ತರಲು ಹೋರಾಡುವ ಬದಲು ನ್ಯಾಯಕ್ಕಾಗಿ ಹೋರಾಡುವ ಸ್ಥಿತಿ ಬಂದಿದೆ” ಎಂದು ಬೇಸರ ವ್ಯಕ್ತಪಡಿಸಿದ್ದರು. ಆಗಲೂ ಕಮಲ್ ಹಾಸನ್ ಅವರಿಗೆ ಚಿನ್ಮಯಿ ಶ್ರೀಪಾದ್ ತಿರುಗೇಟು ನೀಡಿದ್ದರು. “ತಮಿಳು ಗೀತರಚನೆಕಾರನ ವಿರುದ್ಧ ನಾನು ಗಂಭೀರ ಆರೋಪ ಮಾಡಿದ್ದೆ. ಇದಕ್ಕಾಗಿ ನನ್ನನ್ನು ಬ್ಯಾನ್ ಮಾಡಿ ಐದು ವರ್ಷಗಳೇ ಕಳೆದಿವೆ. ಮಹಿಳಾ ರಕ್ಷಣೆ ಪರ ಇಷ್ಟೆಲ್ಲ ಮಾತನಾಡುವ ನೀವು, ನಿಮ್ಮ ಮೂಗಿನ ನೇರಕ್ಕೇ ನಡೆದ ಘಟನೆ ಬಗ್ಗೆ ಯಾಕೆ ಧ್ವನಿ ಎತ್ತುವುದಿಲ್ಲ” ಎಂದು ಚಿನ್ಮಯಿ ಪ್ರಶ್ನಿಸಿದ್ದರು.