Site icon Vistara News

ಜೋಡಿ ಸಿಂಹಗಳಿಗೆ ಅಕ್ಬರ್-ಸೀತೆ ಹೆಸರು ಬೇಡ, ಬದಲಿಸಿ; ಬಂಗಾಳ ಸರ್ಕಾರಕ್ಕೆ ಕೋರ್ಟ್‌ ಚಾಟಿ

Lions

Why Name Them Akbar, Sita?: High Court Asks Bengal Government To Rename Lions

ಕೋಲ್ಕೊತಾ: ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯ ಸಫಾರಿ ಪಾರ್ಕ್‌ನಲ್ಲಿರುವ ಸಿಂಹಕ್ಕೆ ಅಕ್ಬರ್‌ (Akbar) ಎಂದು, ಸಿಂಹಿಣಿಗೆ ಸೀತೆ (Sita) ಎಂದು ಹೆಸರಿಟ್ಟಿರುವ ಪ್ರಕರಣವು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಜೋಡಿ ಸಿಂಹಗಳ ಹೆಸರು ಬದಲಿಸಬೇಕು ಎಂದು ಕೋಲ್ಕೊತಾ ಹೈಕೋರ್ಟ್‌ (Calcutta High Court) ಆದೇಶಿಸಿದೆ. ಇದರಿಂದಾಗಿ ನ್ಯಾಯಾಲಯದಲ್ಲಿ ಪಶ್ಚಿಮ ಬಂಗಾಳ ಸರ್ಕಾರಕ್ಕೆ (West Bengal Government) ಭಾರಿ ಹಿನ್ನಡೆಯಾದಂತಾಗಿದೆ. ಸಿಂಹಗಳಿಗೆ ಅಕ್ಬರ್-ಸೀತೆ ಎಂಬುದಾಗಿ ಹೆಸರಿಟ್ಟಿರುವ ಕ್ರಮ ಪ್ರಶ್ನಿಸಿ ವಿಎಚ್‌ಪಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಹೆಸರು ಬದಲಿಸಲು ಸೂಚಿಸಿದೆ.

“ಪ್ರಾಣಿಗಳಿಗೆ ಹೆಸರಿಡುವುದು ಯಾವುದೇ ಕಾರಣಕ್ಕೂ ವಿವಾದಕ್ಕೆ ಗುರಿಯಾಗಬಾರದು. ನೀವು ಸಿಂಹಕ್ಕೆ ಹಿಂದು ದೇವತೆ, ಇಸ್ಲಾಂನ ಪ್ರವಾದಿ ಹಾಗೂ ಕ್ರೈಸ್ತ ದೇವರ ಹೆಸರು ಇಡುತ್ತೀರಾ? ಸ್ವಾತಂತ್ರ್ಯ ಹೋರಾಟಗಾರ ಅಥವಾ ನೋಬೆಲ್‌ ಪ್ರಶಸ್ತಿ ಪಡೆದವರ ಹೆಸರು ಇಡುತ್ತೀರಾ? ಹೆಸರಿಡುವುದು ವಿವಾದಕ್ಕೆ ಕಾರಣವಾಗಬಾರದು. ಕೂಡಲೇ ಹೆಸರುಗಳನ್ನು ಬದಲಾಯಿಸಿ” ಎಂದು ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರಿದ್ದ ಏಕಸದಸ್ಯ ಪೀಠವು ಮೌಖಿಕ ಆದೇಶ ನೀಡಿದೆ.

ಏನಿದು ಪ್ರಕರಣ?

ಪಶ್ಚಿಮ ಬಂಗಾಳದ ಸಫಾರಿ ಪಾರ್ಕ್‌ನಲ್ಲಿರುವ ಗಂಡು ಸಿಂಹಕ್ಕೆ ಅಕ್ಬರ್‌ ಎಂದು, ಸಿಂಹಿಣಿಗೆ ಸೀತೆ ಎಂದು ಅರಣ್‌ ಇಲಾಖೆ ಅಧಿಕಾರಿಗಳು ಹೆಸರಿಟ್ಟಿರುವುದು ವಿವಾದಕ್ಕೆ ಕಾರಣವಾಗಿತ್ತು. ಮೊಘಲ್‌ ದೊರೆಯಾದ ಅಕ್ಬರ್‌ ಹೆಸರನ್ನು ಗಂಡು ಸಿಂಹಕ್ಕೆ ಇಟ್ಟಿರುವುದು ಹಿಂದು ಸಂಘಟನೆಯ ಆಕ್ಷೇಪಕ್ಕೆ ಕಾರಣವಾಗಿತ್ತು. ಶ್ರೀರಾಮಚಂದ್ರನ ಪತ್ನಿ ಸೀತೆಯನ್ನು ಆರಾಧಿಸುವವರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ, ಒಂದು ಸಿಂಹಕ್ಕೆ ಮುಸ್ಲಿಂ ಅರಸನ ಹೆಸರಿಟ್ಟು, ಮತ್ತೊಂದಕ್ಕೆ ಸೀತೆ ಎಂದು ಹೆಸರಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ಹೆಸರು ಬದಲಿಸಬೇಕು ಎಂದು ವಿಶ್ವ ಹಿಂದು ಪರಿಷತ್‌ ಕೋರ್ಟ್‌ ಮೊರೆ ಹೋಗಿತ್ತು.

ಇದನ್ನೂ ಓದಿ: Lioness Sita: ಸಿಂಹಕ್ಕೆ ಅಕ್ಬರ್‌, ಸಿಂಹಿಣಿಗೆ ಸೀತೆ ಎಂದು ಹೆಸರಿಟ್ಟ ಅಧಿಕಾರಿಗಳು; ವಿಎಚ್‌ಪಿ ಕೆಂಡ

“ಪಶ್ಚಿಮ ಬಂಗಾಳದ ಅರಣ್ಯ ಇಲಾಖೆ ಅಧಿಕಾರಿಗಳು ಎರಡೂ ಸಿಂಹಗಳಿಗೆ ಹೆಸರಿಟ್ಟಿದ್ದಾರೆ. ಎರಡೂ ಸಿಂಹಗಳು ಒಟ್ಟಿಗೆ ವಾಸಿಸುತ್ತವೆ. ಒಂದು ಸಿಂಹಕ್ಕೆ ಅಕ್ಬರ್‌ ಎಂದು, ಸಿಂಹಿಣಿಗೆ ಸೀತೆ ಎಂದು ಹೆಸರಿಡುವ ಮೂಲಕ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಕೂಡಲೇ ಸಿಂಹಿಣಿಯ ಹೆಸರನ್ನು ಬದಲಾಯಿಸಬೇಕು ಎಂಬುದಾಗಿ ನಿರ್ದೇಶನ ನೀಡಬೇಕು” ಎಂದು ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ವಿಎಚ್‌ಪಿ ಮನವಿ ಮಾಡಿತ್ತು. ತ್ರಿಪುರದಿಂದ ತಂದ ಎರಡು ಸಿಂಹಗಳಿಗೆ ಅಕ್ಬರ್‌-ಸೀತೆ ಎಂದು ಹೆಸರಿಡಲಾಗಿತ್ತು. “ಇವುಗಳಿಗೆ ಮೊದಲೇ ಈ ಹೆಸರಿದ್ದವು. ನಾವು ಬದಲಿಸಿರಲಿಲ್ಲ” ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version