ನವ ದೆಹಲಿ: ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಉಗ್ರ ಸಂಘಟನೆಗೆ ಇಂದು ಬೆಳಗ್ಗೆಯೇ ರಾಷ್ಟ್ರೀಯ ತನಿಖಾ ದಳ ಶಾಕ್ ಕೊಟ್ಟಿದೆ. ಕರ್ನಾಟಕ ಸೇರಿ ಸುಮಾರು 13 ರಾಜ್ಯಗಳಲ್ಲಿನ ಪಿಎಫ್‌ಐ ಮುಖಂಡರ ಮನೆಗಳು, ಕಚೇರಿಗಳು ಮತ್ತು ಈ ಸಂಘಟನೆಗೆ ಸೇರಿದ ಇತರ ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ. 105ಕ್ಕೂ ಹೆಚ್ಚು ಮಂದಿಯನ್ನು ಅರೆಸ್ಟ್ ಕೂಡ ಮಾಡಲಾಗಿದೆ. ಇಂದು ನಡೆದಿದ್ದು ಏಕಾಏಕಿ ದಾಳಿಯಂತೂ ಖಂಡಿತ ಅಲ್ಲ. ಕಳೆದ ಹಲವು ದಿನಗಳಿಂದಲೂ ಪಿಎಫ್‌ಐ ಮೇಲೆ ಎನ್‌ಐಎ, ಇಡಿ ಕೆಂಗಣ್ಣು ಬಿದ್ದಿದೆ. ಪಿಎಫ್‌ಐ ಸಂಘಟನೆ ಉಗ್ರ ಚಟುವಟಿಕೆಗಳಿಗೆ ನೆರವು ನೀಡುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೇ ದಾಳಿ ನಡೆಸಿದ್ದಾಗಿ ಎನ್‌ಐಎ ಹೇಳಿದೆ.
ಎಲ್ಲ ಕಡೆ ಪಿಎಫ್ಐದೇ ಹೆಸರು !
ಕರ್ನಾಟಕದ ಹಿಜಾಬ್ ಗಲಾಟೆಯಿಂದ ಹಿಡಿದು, ಕೇರಳದಲ್ಲಿ ನಡೆದ ಆರ್‌ಎಸ್‌ಎಸ್ ಮುಖಂಡನ ಹತ್ಯೆಯವರೆಗೆ ಎಲ್ಲ ಕೇಸ್ನಲ್ಲೂ ಕೇಳಿಬರುತ್ತಿರುವುದು ಇದೇ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾದ ಹೆಸರು. ಸಮಾಜದಲ್ಲಿ ಎಲ್ಲರೂ ಸ್ವಾತಂತ್ರ್ಯ, ನ್ಯಾಯ, ಭದ್ರತೆಯನ್ನು ಅನುಭವಿಸಬೇಕು, ಸಮಾನತೆ ಸೃಷ್ಟಿಸಲು ಹೋರಾಡುತ್ತೇವೆ ಎಂದು ಹೇಳಿಕೊಂಡು 2006ರಲ್ಲಿ ಸ್ಥಾಪಿತವಾದ ಪಿಎಫ್‌ಐ, ಇದೀಗ ಇಡೀ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ. ತನ್ನ ಮೂಲ ಉದ್ದೇಶವನ್ನೇ ಮರೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ದೇಶದಲ್ಲಿ ಇತ್ತೀಚೆಗೆ ನಡೆದ ಎಲ್ಲ ಕೋಮು ಗಲಭೆಯ ಹಿಂದೆಯೂ ಪಿಎಫ್ಐದೇ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದೆ.
ಪಿಎಫ್ಐಗೆ ತಾಲಿಬಾನ್, ಅಲ್ಕೈದಾ ಉಗ್ರ ಸಂಘಟನೆ ಜತೆ ನಂಟಿದೆ ಎಂಬ ವಿಚಾರ ಬೆಳಕಿಗೆ ಬಂದಿದ್ದು 2010ರಲ್ಲಿ.ಇದೊಂದು ಉಗ್ರರಿಗೆ ಕುಮ್ಮಕ್ಕು ನೀಡುವ ಸಂಘಟನೆ ಎಂದು 2012ರಲ್ಲಿ ಅಂದಿನ ಕೇರಳ ಸರ್ಕಾರ ಹೈಕೋರ್ಟ್ಗೆ ಕೂಡ ವರದಿ ನೀಡಿತ್ತು. ಆಗಿನಿಂದಲೂ ಒಂದಲ್ಲ ಒಂದು ಗಲಭೆ, ಗಲಾಟೆಯಲ್ಲಿ ಪಿಎಫ್‌ಐ ಹೆಸರು ಕೇಳಿಬರುತ್ತಿದ್ದರೂ ಇತ್ತೀಚೆಗೆ ಅದರ ಹಾವಳಿ ಜೋರಾಗಿದೆ. 2019ರಿಂದ ನಡೆದ 2020ರ ಪ್ರಾರಂಭದವರೆಗೆ ನಡೆದ ಸಿಎಎ ವಿರೋಧಿ ಪ್ರತಿಭಟನೆ ಹಿಂಸಾಚಾರ ಸ್ವರೂಪ ತಾಳುವಲ್ಲೂ ಪಿಎಫ್‌ಐ ಪಾತ್ರ ವಹಿಸಿದೆ, ಇದೇ ಸಂಘಟನೆ ಹಣ ನೀಡಿ ಹಿಂಸಾಚಾರ ಸೃಷ್ಟಿಯಾಗುವಂತೆ ಮಾಡಿದೆ ಎಂದು ಅಂದಿನ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಗೃಹ ಸಚಿವಾಲಯಕ್ಕೆ ವರದಿ ಕೂಡ ಸಲ್ಲಿಸಿದ್ದರು.
ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವುದು..
ಪ್ರಸಕ್ತ ವರ್ಷ ಜುಲೈನಲ್ಲಿ ಪ್ರಧಾನಿ ಮೋದಿ ಬಿಹಾರಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿತವಾಗಿತ್ತು. ಈ ಸಂಚಿನ ರೂವಾರಿ ಕೂಡ ಇದೇ ಪಿಎಫ್‌ಐ ಆಗಿತ್ತು. ನರೇಂದ್ರ ಮೋದಿ ಬಿಹಾರಕ್ಕೆ ಹೋಗುವುದಕ್ಕೂ 15 ದಿನಗಳ ಮೊದಲೇ ಉಗ್ರರು ಬಿಹಾರದ ಫುಲ್ವಾರಿ ಶರೀಫ್‌ಗೆ ಬಂದು ಬೀಡುಬಿಟ್ಟಿದ್ದರು. ಮೋದಿ ಬಿಹಾರಕ್ಕೆ ಬಂದಾಗ ಹೇಗೆ ಟಾರ್ಗೆಟ್ ಮಾಡಬೇಕು ಎಂಬುದರ ಕುರಿತು ಅವರಿಗೆ ತರಬೇತಿ ನೀಡಲಾಗುತ್ತಿತ್ತು ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿತ್ತು. ಅಷ್ಟಲ್ಲದೆ, ಆ ಉಗ್ರ ಘಟಕದ ಮೇಲೆ ದಾಳಿ ಮಾಡಿದ್ದ ಪೊಲೀಸರಿಗೆ ಪಿಎಫ್ಐಗೆ ಸೇರಿದ 25 ಕರಪತ್ರಗಳು ಸಿಕ್ಕಿದ್ದವು. ಅದಕ್ಕೂ ಮಿಗಿಲಾಗಿ ‘2047ರ ವೇಳೆ ಭಾರತವನ್ನು ಸಂಪೂರ್ಣವಾಗಿ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾರ್ಪಡಿಸಲಾಗುವುದು’ ಎಂಬ ತಲೆಬರಹವಿದ್ದ ಚಿಕ್ಕ ಪುಸ್ತಕದ ರೂಪದ ದಾಖಲೆಯೂ ದೊರೆತಿತ್ತು. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ಆಗಿನಿಂದಲೂ ಪಿಎಫ್‌ಐ ವಿರುದ್ಧ ತನಿಖೆ ಇನ್ನಷ್ಟು ವೇಗ ಪಡೆದುಕೊಂಡಿದೆ.
ಕರ್ನಾಟಕದಲ್ಲಂತೂ ದೊಡ್ಡಮಟ್ಟದಲ್ಲಿ ವಿವಾದ ಸೃಷ್ಟಿಸಿದ ಹಿಜಾಬ್ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲು, ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆಗೂ ಪಿಎಫ್‌ಐ ಕಾರಣ. ಹಾಗೇ, ಇದೇ ವರ್ಷ ಏಪ್ರಿಲ್ನಲ್ಲಿ ನಡೆದ ಆರ್‌ಎಸ್‌ಎಸ್ ನಾಯಕ ಶ್ರೀನಿವಾಸನ್ ಹತ್ಯೆಯಲ್ಲೂ ಇದೇ ಸಂಘಟನೆ ಪಾತ್ರವಿರುವುದು ಗೊತ್ತಾಗಿದೆ. ಈ ಕೇಸ್ನಡಿ ಪಿಎಫ್ಐನ ಅಬೂಬ್ಕರ್ ಸಿದ್ದಿಕಿ ಎಂಬಾತನ ಬಂಧನವೂ ಆಗಿದೆ.
ಇ ಡಿ ತನಿಖೆ
ಪಿಎಫ್‌ಐ ಸಂಘಟನೆ ಟೆರರ್ ಫಂಡಿಂಗ್ ಮಾಡುತ್ತಿದೆ..ಅಂದರೆ ಉಗ್ರ ಕೃತ್ಯಗಳಿಗೆ ಹಣಕಾಸಿನ ನೆರವು ನೀಡುತ್ತಿದೆ ಎಂಬುದನ್ನೇ ಮುಖ್ಯವಾಗಿ ಕಾರಣವಾಗಿಟ್ಟುಕೊಂಡು ಎನ್‌ಐಎ ದಾಳಿ ನಡೆಸಿದೆ. ಹಾಗೇ ಕಳೆದೆರಡು ವರ್ಷಗಳ ಹಿಂದೆಯೇ ಇ.ಡಿ. ಕೂಡ ಪಿಎಫ್‌ಐ ವಿರುದ್ಧ ತನಿಖೆ ಪ್ರಾರಂಭ ಮಾಡಿದೆ. ಸಿಎಎ (ಪೌರತ್ವ (ತಿದ್ದುಪಡಿ) ಕಾಯ್ದೆ) ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲು ಇದು ಹಣಕಾಸು ಸಹಕಾರ ನೀಡಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ತನಿಖೆ ಶುರು ಮಾಡಿದ್ದ ಇ.ಡಿ. ಈ ವರ್ಷ ಫೆಬ್ರವರಿಯಲ್ಲಿ ಒಂದು ಚಾರ್ಜ್ಶೀಟ್ ಕೂಡ ಸಲ್ಲಿಸಿದೆ. 2020ರ ಸೆಪ್ಟೆಂಬರ್ನಲ್ಲಿ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಾಗ ಪಿಎಫ್‌ಐ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಪಟ್ಟಿತ್ತು, ಇದಕ್ಕಾಗಿ ಕೂಡ ಹಣ ಅಕ್ರಮ ವರ್ಗಾವಣೆ ನಡೆದಿದೆ ಎಂದು ಇ.ಡಿ. ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ. ಪಿಎಫ್‌ಐ ನಿಷೇಧಿಸಬೇಕು ಎಂಬ ಆಗ್ರಹ ಹೆಚ್ಚುತ್ತಿರುವ ಬೆನ್ನಲ್ಲೇ ಈಗ ಎನ್‌ಐಎ ಕೂಡ ದೇಶಾದ್ಯಂತ ಪಿಎಫ್‌ಐ ಬೆನ್ನು ಬಿದ್ದಿದೆ. ಮುಸ್ಲಿಮರೇ ಅನೇಕರು ಈ ಸಂಘಟನೆ ನಿಷೇಧಿಸಿ ಎಂದು ಬೇಡಿಕೆ ಇಡುತ್ತಿದ್ದಾರೆ.
ಇದನ್ನೂ ಓದಿ: NIA raid | ಎಸ್‌ಡಿಪಿಐ ಮತ್ತು ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ದಾಳಿ, 100ಕ್ಕೂ ಹೆಚ್ಚು ಮಂದಿ ವಶಕ್ಕೆ