ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಅವರನ್ನು ವಿಧಾನಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಚುನಾವಣೆ ಆಯೋಗವು ರಾಜ್ಯಪಾಲರಿಗೆ ಶಿಫಾರಸು ಮಾಡಿರುವ ಕಾರಣ ಈಗ ಸೊರೆನ್ ಗಾದಿ ಮೇಲೆ ಕತ್ತಿ ನೇತಾಡುತ್ತಿದೆ. ಹಾಗಾದರೆ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ವರಿಷ್ಠರೂ ಆಗಿರುವ ಸೊರೆನ್ ಅನರ್ಹತೆ ಶಿಫಾರಸಿಗೆ ಕಾರಣವೇನು? ಏನಿದು ಪ್ರಕರಣ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಗಣಿ ಗುತ್ತಿಗೆಯೇ ಸೊರೆನ್‌ಗೆ ಕುತ್ತು
ಮುಖ್ಯಮಂತ್ರಿಯಾಗಿರುವ ಹೇಮತ್ ಸೊರೆನ್ ಅವರ ಒಡೆತನದ ಕಲ್ಲಿನ ಗಣಿ (Stone Chips Mining)ಯ ಗುತ್ತಿಗೆಯ ಅವಧಿಯನ್ನು ಸೊರೆನ್ ಅವರೇ ವಿಸ್ತರಿಸಿಕೊಂಡಿದ್ದಾರೆ. ಇದು ಅಧಿಕಾರ ದುರುಪಯೋಗದ ಪರಮಾವಧಿಯಾಗಿದ್ದು, ಸ್ವಜನ ಪಕ್ಷಪಾತ ಎದ್ದು ಕಾಣುತ್ತಿದೆ. ಹಾಗಾಗಿ ಅವರನ್ನು ಅನರ್ಹಗೊಳಿಸಬೇಕು ಎಂದು ಬಿಜೆಪಿಯು ಚುನಾವಣೆ ಆಯೋಗಕ್ಕೆ ದೂರು ನೀಡಿದೆ.
ಬಿಜೆಪಿ ನೀಡಿದ ದೂರಿನಂತೆ ಚುನಾವಣೆ ಆಯೋಗವು ತನಿಖೆ ನಡೆಸಿದೆ. ಆಗಸ್ಟ್ ೧೨ರಂದು ಸೊರೆನ್ ಅವರ ಕಾನೂನು ಪರಿಣತರ ತಂಡವು ಆಯೋಗದ ಎದುರು ವಾದ ಮಂಡಿಸಿದೆ. ಹಾಗೆಯೇ, ಆಗಸ್ಟ್ ೧೮ರಂದು ಸೊರೆನ್ ಹಾಗೂ ಬಿಜೆಪಿಯು ಆಯೋಗಕ್ಕೆ ಲಿಖಿತ ಮಾಹಿತಿ ನೀಡಿವೆ. ಇದರಂತೆ, ಆಯೋಗವು ವಿಚಾರಣೆ ನಡೆಸಿ, ಮುಖ್ಯಮಂತ್ರಿಯ ಅನರ್ಹತೆಗೆ ಶಿಫಾರಸು ಮಾಡಿದೆ.
ರಾಜ್ಯಪಾಲರ ತೀರ್ಮಾನವೇ ಅಂತಿಮ
ಹೇಮಂತ್ ಸೊರೆನ್ ಅವರ ಅನರ್ಹತೆ ವಿಚಾರದಲ್ಲಿ ರಾಜ್ಯಪಾಲ ರಮೇಶ್ ಬೈಸ್ ಅವರ ತೀರ್ಮಾನವೇ ಅಂತಿಮವಾಗಿದೆ. ಸಂವಿಧಾನದ ೧೯೨ನೇ ಕಲಂ ಪ್ರಕಾರ, ಯಾವುದೇ ಶಾಸಕನ ಅನರ್ಹತೆ ವಿಚಾರದಲ್ಲಿ ರಾಜ್ಯಪಾಲರ ತೀರ್ಮಾನವೇ ಅಂತಿಮವಾಗಿದೆ. ರಾಜ್ಯಪಾಲರು ಅನರ್ಹತೆ ತೀರ್ಮಾನದಲ್ಲಿ ಚುನಾವಣೆ ಆಯೋಗದ ಸಲಹೆ ಪಡೆಯಬಹುದಾದರೂ, ಸೊರೆನ್ ವಿಚಾರದಲ್ಲಿ ಚುನಾವಣೆ ಆಯೋಗವೇ ಅನರ್ಹತೆಗೆ ಶಿಫಾರಸು ಮಾಡಿದೆ. ಹಾಗಾಗಿ, ರಾಜ್ಯಪಾಲರೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಇದನ್ನೂ ಓದಿ | Hemant Soren | ಜಾರ್ಖಂಡ್ ಸಿಎಂ ಅನರ್ಹತೆಗೆ ಚುನಾವಣೆ ಆಯೋಗ ಶಿಫಾರಸು, ಸೊರೆನ್ ಗಾದಿಗೆ ಕುತ್ತು