ಗುಜರಾತ್ನ ತಾಪಿ ಜಿಲ್ಲೆಯಲ್ಲಿ ಒಂದು ವಿಶೇಷ ಮದುವೆ ನಡೆದಿದೆ. ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರೇಮಿಗಳ ಮದುವೆಯನ್ನು, ಅವರ ಕುಟುಂಬದವರೇ ಮುಂದಾಗಿ ನಿಂತು ಮಾಡಿಸಿದ್ದಾರೆ. ಈ ಮೂಲಕ ತಮ್ಮ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಂಡಿದ್ದಾರೆ. ಆದರೆ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳ ಮದುವೆಯನ್ನು ಈಗ ಮಾಡಿದ್ದಾದರೂ ಹೇಗೆ?-ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ..
ನಿಜಾರ್ ತಾಲೂಕಿನ ನೆವಾಲಾ ಎಂಬ ಗ್ರಾಮದ ಗಣೇಶ್ ಪದ್ವಿ ಮತ್ತು ರಂಜನಾ ಪದ್ವಿ ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮಿಬ್ಬರ ಪ್ರೀತಿಯನ್ನು ಕುಟುಂಬದವರ ಎದುರು ಹೇಳಿದಾಗ ಅವರದನ್ನು ಒಪ್ಪಿಕೊಳ್ಳಲಿಲ್ಲ. ಎರಡೂ ಕುಟುಂಬಗಳು ವಿರೋಧಿಸಿದವು. ಅಷ್ಟೇ ಅಲ್ಲ, ಕೆಟ್ಟ ಮಾತುಗಳಿಂದ ಗಣೇಶ್ ಮತ್ತು ರಂಜನಾರನ್ನು ಬೈದರು. ಪ್ರತಿದಿನ ಎರಡೂ ಕುಟುಂಬದಲ್ಲಿ ಗಲಾಟೆ ಆಗುತ್ತಿತ್ತು. ಇದರಿಂದ ಬೇಸತ್ತ ಪ್ರೇಮಿಗಳು ಒಂದೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅವರಿಬ್ಬರು ಮೃತಪಟ್ಟ ಮೇಲೆ ಈಗ ಕುಟುಂಬದವರಿಗೆ ತಮ್ಮ ತಪ್ಪಿನ ಅರಿವಾಗಿದೆ. ನಮ್ಮಿಂದಲೇ ನಮ್ಮ ಮಕ್ಕಳು ಜೀವ ಕಳೆದುಕೊಳ್ಳಬೇಕಾಯಿತಲ್ಲ ಎಂದು ಪ್ರತಿದಿನ ಕೊರಗುತ್ತಿದ್ದ ಅವರೀಗ ತಮ್ಮ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ನಿರ್ಧರಿಸಿ, ರಂಜನಾ ಮತ್ತು ಗಣೇಶ್ ಪ್ರತಿಮೆಯನ್ನು ತಯಾರಿಸಿ, ಆ ಗೊಂಬೆಗಳಿಗೇ ಮದುವೆ ಮಾಡಿಸಿದ್ದಾರೆ. ಎರಡೂ ಕುಟುಂಬದವರು ಸೇರಿಕೊಂಡು, ಎಲ್ಲ ಸಂಪ್ರದಾಯಗಳನ್ನೂ ನೆರವೇರಿಸಿ ರಂಜನಾ-ಗಣೇಶ್ (ಪ್ರತಿಮೆ) ವಿವಾಹ ಮಾಡಿಸಿದ್ದಾರೆ. ಜನವರಿ 14ರಂದು ಈ ಮದುವೆ ನೆರವೇರಿದ್ದು, ಹತ್ತಿರದ ನೆಂಟರಿಷ್ಟರೂ ಈ ವಿಶೇಷ ಪ್ರತಿಮೆ ಕಲ್ಯಾಣಕ್ಕೆ ಸಾಕ್ಷಿಯಾಗಿದ್ದಾರೆ.
ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಆದರ್ಶ ತಾಯಂದಿರಿಗೆ ಸನ್ಮಾನ; ಹೀಗೊಂದು ವಿಶೇಷ ಮದುವೆ