Site icon Vistara News

ಚಾರ್‌ ಧಾಮ್‌ ಯಾತ್ರೆಯಲ್ಲಿ 100 ದಾಟಿದ ಸಾವು, 50 ವರ್ಷ ಮೇಲ್ಪಟ್ಟ ಯಾತ್ರಿಕರ ಆರೋಗ್ಯ ತಪಾಸಣೆ ಕಡ್ಡಾಯ

char dham yatra

ನವ ದೆಹಲಿ: ಉತ್ತರಾಖಂಡ್‌ನಲ್ಲಿ ಈ ವರ್ಷ ಚಾರ್‌ ಧಾಮ್ ಯಾತ್ರೆಯಲ್ಲಿ ಕೇವಲ 25 ದಿನಗಳಲ್ಲಿ 99 ಮಂದಿ ಯಾತ್ರಿಕರು ಸಾವಿಗೀಡಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಒಟ್ಟು ಸಾವಿನ ಸಂಖ್ಯೆ ನೂರು ದಾಟಿದೆ. ಸಲ ಈ ಭಾರಿ ಸಂಖ್ಯೆಯಲ್ಲಿ ಸಾವು ಸಂಭವಿಸಿರುವುದು ಏಕೆ ಎಂಬ ಚರ್ಚೆ ಈಗ ನಡೆಯುತ್ತಿದೆ.

” ಚಾರ್‌ ಧಾಮ್‌ ಯಾತ್ರೆಯ ಸಂದರ್ಭ ಯಾತ್ರಿಕರ ಸಾವು ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಚಾರ್‌ ಧಾಮ್‌ ಯಾತ್ರೆಯ ಹಾದಿಯಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ಆರೋಗ್ಯಾಧಿಕಾರಿ ಶೈಲಜಾ ಭಟ್‌ ತಿಳಿಸಿದ್ದಾರೆ. ಈ ನಡುವೆ ಉತ್ತರಾಖಂಡ್‌ನ ರುದ್ರಪ್ರಯಾಗ್‌ ನಲ್ಲಿ ಏಳು ಮಂದಿ ಕಣ್ಮರೆಯಾಗಿದ್ದಾರೆ. ಕಣ್ಮರೆಯಾದವರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಹೃದಯಾಘಾತ ಸಂಖ್ಯೆ ಹೆಚ್ಚಳಕ್ಕೆ ಕಾರಣ

ಚಾರ್‌ ಧಾಮ್‌ ಯಾತ್ರೆಯ ವೇಳೆ ಹೃದಯಾಘಾತದಿಂದ ಯಾತ್ರಿಕರ ಸಾವು ಸಂಭವಿಸುವುದು ಹೊಸತಲ್ಲವಾದರೂ, ಈ ವರ್ಷ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಯಾತ್ರಿಕರ ರೋಗನಿರೋಧಕ ಶಕ್ತಿ ಕುಸಿದಿರುವುದು, ಕೋವಿಡ್-‌19 ಬಂದಿರುವ ಹಿನ್ನೆಲೆ, ಯಾತ್ರಿಕರ ಸಂಖ್ಯೆ ಹೆಚ್ಚಳದ ಪರಿಣಾಮ ಉಂಟಾಗಿರುವ ಅನಾನುಕೂಲಗಳು ಹೃದಯಾಘಾತದ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂದು ಸಿಕ್ಸ್‌ ಸಿಗ್ಮಾ ಹೆಲ್ತ್‌ಕೇರ್‌ ಮುಖ್ಯಸ್ಥ ಪ್ರದೀಪ್‌ ಭಾರದ್ವಾಜ್‌ ತಿಳಿಸಿದ್ದಾರೆ. ಈ ಸಂಸ್ಥೆಯು ಉಚಿತವಾಗಿ ಚಾರ್‌ ಧಾಮ್‌ ಯಾತ್ರಿಕರಿಗೆ ವೈದ್ಯಕೀಯ ನೆರವು ನೀಡುತ್ತಿದೆ. ಹಿಮಾಲಯದ ಅಧಿಕ ಶೀತದ ವಾತಾವರಣದಲ್ಲಿ ದುರ್ಬಲ ರೋಗನಿರೋಧಕ ಶಕ್ತಿ ಹೋಂದಿರುವವರಿಗೆ ಆರೋಗ್ಯ ಸಮಸ್ಯೆ ಉಲ್ಬಣಿಸುತ್ತದೆ.

ಚಾರ್‌ ಧಾಮ್‌ ಯಾತ್ರೆಯ ವೇಳೆ 2019ರಲ್ಲಿ 90 ಯಾತ್ರಿಕರು ಸಾವಿಗೀಡಾಗಿದ್ದಾರೆ. 2018ರಲ್ಲಿ 102 ಮಂದಿ ಅಸುನೀಗಿದ್ದರು. ಏಪ್ರಿಲ್-ಮೇಯಿಂದ ಅಕ್ಟೋಬರ್-ನವೆಂಬರ್‌ ತನಕ ಯಾತ್ರೆ 6 ತಿಂಗಳು ನಡೆಯುತ್ತದೆ. ಕೋವಿಡ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎರಡು ವರ್ಷಗಳ ಬಿಡುವಿನ ಬಳಿಕ ಚಾರ್‌ ಧಾಮ್‌ ಯಾತ್ರೆ ಪುನರಾರಂಭವಾಗಿತ್ತು. ಯಾತ್ರಿಕರು ನಕಲಿ ದಾಖಲಾತಿಗಳ ಮೂಲಕ ಚಾರ್‌ ಧಾಮ್‌ ಯಾತ್ರೆ ನಡೆಸಿರುವುದೂ ಪತ್ತೆಯಾಗಿದೆ. ಇತ್ತೀಚೆಗೆ 6 ಯಾತ್ರಿಕರಿಂದ ನಕಲಿ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಗ್ಯ ತಪಾಸಣೆ ಕಡ್ಡಾಯ

ಚಾರ್‌ ಧಾಮ್‌ ಯಾತ್ರೆ ಮಾಡುವ 50 ವರ್ಷ ಮೇಲ್ಪಟ್ಟ ಯಾತ್ರಿಕರಿಗೆ ಆರೋಗ್ಯ ತಪಾಸಣೆ ಕಡ್ಡಾಯ ಎಂದು ಉತ್ತರಾಖಂಡ್‌ ಸರಕಾರ ಭಾನುವಾರ ತಿಳಿಸಿದೆ. ಸಾವು ನೋವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ತೀರ್ಮಾನ ತೆಗೆದುಕೊಂಡಿದೆ.

ಇದನ್ನೂ ಓದಿ:Explainer: ಚಾರ್‌ಧಾಮ್‌ ಯಾತ್ರೆ: ಸಾವುಗಳಿಗೆ ಕಾರಣವೇನು, ತಡೆಯುವುದು ಹೇಗೆ?

Exit mobile version