ಜೈಪುರ: ಪುಲ್ವಾಮಾದಲ್ಲಿ ಭಾರತದ ಯೋಧರ ಮೇಲೆ ನಡೆದ ಉಗ್ರರ ದಾಳಿಗೆ ನಾಲ್ಕು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಳೆದ ತಿಂಗಳಷ್ಟೇ ವರ್ಷಾಚರಣೆ ಮಾಡಲಾಗಿದೆ. ಉಗ್ರರ ದಾಳಿಯಿಂದ ಹುತಾತ್ಮರಾದ ಯೋಧರಿಗೆ ದೇಶಾದ್ಯಂತ ಗೌರವ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ, ರಾಜಸ್ಥಾನದಲ್ಲಿ ಪುಲ್ವಾಮಾ ಹುತಾತ್ಮ ಯೋಧರ ಪತ್ನಿಯರ (Pulwama Martyrs) ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಹಾಗಾಗಿ, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ಪುಲ್ವಾಮಾ ಹುತಾತ್ಮ ಯೋಧರ ಕುಟುಂಬಸ್ಥರಿಗೆ ಪರಿಹಾರ ಒದಗಿಸುವ ಕುರಿತು ರಾಜ್ಯ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸದ ಕಾರಣ ಸರ್ಕಾರದ ವಿರುದ್ಧ ಮೂವರು ಹುತಾತ್ಮ ಯೋಧರ ಪತ್ನಿಯರು ಕುಟುಂಬಸ್ಥರೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಪೊಲೀಸರು ಇದೇ ವೇಳೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಎಂ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ಹಲ್ಲೆಯಿಂದ ಯೋಧರ ಪತ್ನಿಯರಿಗೆ ಗಾಯಗಳಾಗಿವೆ.
ಯೋಧರ ಪತ್ನಿಯರ ಮೇಲೆ ನಡೆದ ಹಲ್ಲೆಯ ದೃಶ್ಯಗಳು
ರಾಜ್ಯಸಭೆ ಬಿಜೆಪಿ ಸದಸ್ಯ ಕಿರೋಡಿ ಲಾಲ್ ಮೀನಾ ಅವರು ಕೂಡ ಹುತಾತ್ಮ ಯೋಧರ ಪತ್ನಿಯರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ನಮಗೆ ಪರಿಹಾರ ಕೊಡಿ, ಇಲ್ಲವೇ ದಯಾಮರಣ ಕೊಡಿ ಎಂಬುದಾಗಿ ಯೋಧರ ಪತ್ನಿಯರು ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇಷ್ಟಾದರೂ, ಸರ್ಕಾರ ಯಾವುದೇ ಪರಿಹಾರ ಒದಗಿಸಿಲ್ಲ. ಇದರ ಮಧ್ಯೆಯೇ, ಅವರ ಮೇಲೆ ಹಲ್ಲೆ ನಡೆಸಿರುವುದು ಜನರನ್ನು ಕೆರಳಿಸಿದೆ.