Site icon Vistara News

ಪೊಲೀಸ್ ಅಧಿಕಾರಿಗೆ ಸಂಕಷ್ಟ ತಂದಿಟ್ಟ ಪತ್ನಿ-ಮಕ್ಕಳ ಸೆಲ್ಫಿ ಫೋಟೊ; ಕಂತೆಕಂತೆ ಹಣದ ಮೂಲ ಯಾವುದು?

Girl And Boy selfie with Money

ಉತ್ತರ ಪ್ರದೇಶ ಪೊಲೀಸ್​ ಅಧಿಕಾರಿ (UP Police Officer)ಯೊಬ್ಬರಿಗೆ ಅವರ ಪತ್ನಿ-ಮಕ್ಕಳೇ ಸಂಕಷ್ಟ ತಂದಿಟ್ಟಿದ್ದಾರೆ. ಪತ್ನಿ ಮತ್ತು ಮಕ್ಕಳ ಸೆಲ್ಫಿ ಕ್ರೇಜ್​ ಆ ಅಧಿಕಾರಿಯನ್ನು ಅನುಮಾನಿಸುವಂತೆ ಮಾಡಿದೆ. ಸದ್ಯ ಪೊಲೀಸ್ ಅಧಿಕಾರಿಯ ಮೇಲೆ ಪೊಲೀಸರೇ ಕಣ್ಗಾವಲು ಇಟ್ಟಿದ್ದಾರೆ. ಉನ್ನಾವೋದ ಬೆಹ್ತಾ ಮುಜಾವರ್​ ಪೊಲೀಸ್ ಠಾಣೆಯ ಈ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ.

ಪೊಲೀಸ್ ಅಧಿಕಾರಿ ರಮೇಶ್​ ಚಂದ್ರ ಸಹಾನಿ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಕಂತೆಕಂತೆ ಹಣದೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದೇ ಇಷ್ಟೆಲ್ಲ ಸಮಸ್ಯೆಯಾಗಲು ಕಾರಣ. ರಮೇಶ್ ಚಂದ್ರ ಮನೆಯಲ್ಲೇ ಈ ಫೋಟೋ ತೆಗೆಯಲಾಗಿದೆ. 500 ರೂಪಾಯಿ ನೋಟುಗಳ ಸುಮಾರು 27 ಬಂಡಲ್​​ಗಳನ್ನು ಬೆಡ್​ ಮೇಲೆ ಇಟ್ಟು, ಅದರೊಂದಿಗೆ ಅಧಿಕಾರಿಯ ಪತ್ನಿ-ಮಕ್ಕಳು ಪೋಸ್​ ಕೊಟ್ಟಿದ್ದಾರೆ. ಸುಮಾರು 14 ಲಕ್ಷ ರೂಪಾಯಿ ನಗದು ಇಲ್ಲಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇವರು ನೋಟಿನೊಂದಿಗೆ ತೆಗೆದುಕೊಂಡ ಸೆಲ್ಫಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ.

ಬೆಹ್ತಾ ಮುಜಾವರ್​ ಪೊಲೀಸ್ ಠಾಣೆಯಲ್ಲಿ ಇನ್​​ಸ್ಪೆಕ್ಟರ್ ಆಗಿದ್ದ ರಮೇಶ್​ ಚಂದ್ರ ಸಹಾನಿ ಅವರ ಪತ್ನಿ ಮತ್ತು ಮಕ್ಕಳ ಫೋಟೋ ವೈರಲ್ ಆಗುತ್ತಿದ್ದಂತೆ ಈ ಕೇಸ್​ನ್ನು ಉನ್ನಾವೋ ಎಸ್​ಪಿ ಸಿದ್ಧಾರ್ಥ್​ ಶಂಕರ್ ಮೀನಾ ಅವರು ಸುಮೊಟೊ ದಾಖಲಿಸಿಕೊಂಡಿದ್ದಾರೆ. ಹಾಗೇ, ರಮೇಶ್​ ಅವರನ್ನು ಈ ಠಾಣೆಯಿಂದ ವರ್ಗಾವಣೆ ಮಾಡಿ, ಸಾಮಾನ್ಯ ಕರ್ತವ್ಯಕ್ಕೆ ನಿಯೋಜಿಸಿದ್ದಾರೆ. ಇನ್ನು ಈ ಬಗ್ಗೆ ಸಮರ್ಥನೆ ಕೊಟ್ಟ ರಮೇಶ್ ಚಂದ್ರ ಸಹಾನಿ ಅವರು ‘ಈ ಹಣವಾಗಲಿ, ಫೋಟೋವಾಗಲಿ ಈಗಿನದಲ್ಲ. 2021ರಲ್ಲಿ ನಾನು ನನ್ನ ಕುಟುಂಬದ ಆಸ್ತಿಯನ್ನು ಮಾರಾಟ ಮಾಡಿದ್ದೆ. ಆಗ ಬಂದ ದುಡ್ಡು ಇದಾಗಿತ್ತು. 2021ರ ನವೆಂಬರ್ 14ರಂದು ಪತ್ನಿ-ಮಕ್ಕಳು ಸೇರಿ ತೆಗೆದುಕೊಂಡ ಫೋಟೋ ಇದು ಎಂದಿದ್ದಾರೆ. ಆದರೂ ತನಿಖೆ ಮುಗಿದು ವರದಿ ಬರದ ಹೊರತು, ಹಣದ ಮೂಲ ಯಾವುದೆಂದು ಗೊತ್ತಾಗದ ಹೊರತು ರಮೇಶ್ ಚಂದ್ರ ಸಹಾನಿ ವಾಪಸ್​ ಠಾಣೆಗೆ ಬರುವಂತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Exit mobile version