ಅಮೃತಸರ: 2013ರಲ್ಲಿ ಪಾಕಿಸ್ತಾನದ ಜೈಲಿನಲ್ಲಿ ಮೃತಪಟ್ಟ ಭಾರತೀಯ ಸರಬ್ಜಿತ್ ಸಿಂಗ್ (Sarabjit Singh) ಅವರ ಪತ್ನಿ ಸುಖ್ಪ್ರೀತ್ ಕೌರ್ ಅವರು ಸೋಮವಾರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರು ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದರು.
ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಅವರು ಆಕಸ್ಮಾತ್ ಆಗಿ ಬೀಳುತ್ತಿದ್ದಂತೆ ಅವರನ್ನು ಹತ್ತಿರದ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರು. ಅವರ ಅಂತಿಮಕ್ರಿಯೆಯನ್ನು ಮಂಗಳವಾರ ತಾರನ್ ತರನ್ ಜಿಲ್ಲೆಯ ಭಿಖಿವಿಂಡ್ನಲ್ಲಿ ನಡೆಸಲಾಯಿತು. ಸುಖ್ಪ್ರೀತ್ ಕೌರ್ ಅವರಿಗೆ ಪೂನಮ್ ಮತ್ತು ಸ್ವಪ್ನದೀಪ್ ಕೌರ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಸರಬ್ಜಿತ್ ಅವರನ್ನು ವಾಪಸ್ ಭಾರತಕ್ಕೆ ಕರೆತರುವ ಸಂಬಂಧ ಅವರ ಸಹೋದರಿ ದಲ್ಬಿರ್ ಗೌರ್ ಅವರು ಅನೇಕ ವೇದಿಕೆಗಳಲ್ಲಿ ಆಗ್ರಹಿಸುತ್ತಿದ್ದರು. ದಲ್ಬಿರ್ ಕೌರ್ ಕಳೆದ ಜೂನ್ ತಿಂಗಳಲ್ಲಿ ಎದೆ ನೋವಿನಿಂದಾಗಿ ಮೃತರಾಗಿದ್ದರು. ಲಾಹೋರ್ ಜೈಲಿನಲ್ಲಿದ್ದ ಸರಬ್ಜಿತ್ ಸಿಂಗ್ ಮೇಲೆ ಕೈದಿಗಳು ಹಲ್ಲೆ ಮಾಡಿದ್ದರಿಂದ 2013ರಲ್ಲಿ ಅವರೂ ಮೃತಪಟ್ಟಿದ್ದರು.
ಸರಬ್ಜಿತ್ ಅವರಿಗೆ ಭಯೋತ್ಪಾದನೆ ಮತ್ತು ಬೇಹುಗಾರಿಕೆಯ ಆರೋಪದಲ್ಲಿ ಪಾಕಿಸ್ತಾನಿ ನ್ಯಾಯಾಲಯವು ಅವರನ್ನು 1991ರಲ್ಲಿ ಮರಣದಂಡನೆಗೆ ಗುರಿಪಡಿಸಿತ್ತು. ಆದಾಗ್ಯೂ, ಸರ್ಕಾರವು 2008ರಲ್ಲಿ ಅನಿರ್ದಿಷ್ಟ ಅವಧಿಗೆ ಮರಣದಂಡನೆ ಶಿಕ್ಷೆಯನ್ನು ತಡೆ ಹಿಡಿದದ್ದನ್ನು ಇಲ್ಲಿ ಸ್ಮರಿಸಬಹುದು.