ಚೆನ್ನೈ: ಪತಿಯಿಂದ ದೂರವಾದ ಪತ್ನಿ ಮಂಗಳಸೂತ್ರ (ತಾಳಿ) ತೆಗೆದಿಟ್ಟಿದ್ದಾಳೆ ಎಂಬ ಕಾರಣವನ್ನೇ ಬಹುಮುಖ್ಯವಾಗಿ ಪರಿಗಣಿಸಿ, ವ್ಯಕ್ತಿಯೊಬ್ಬನಿಗೆ ಮದ್ರಾಸ್ ಹೈಕೋರ್ಟ್ ವಿಚ್ಛೇದನ ನೀಡಿದೆ. ಅಲ್ಲದೆ, ʼಪತ್ನಿ ಮಂಗಳ ಸೂತ್ರವನ್ನು ತೆಗೆದಿಡುವುದು ಪತಿಗೆ ನೀಡುವ ಮಾನಸಿಕ ಹಿಂಸೆಯ ಪರಮಾವಧಿ ಮಟ್ಟʼ ಎಂದೂ ಹೈಕೋರ್ಟ್ ಪೀಠ ಹೇಳಿದೆ. ನೊಂದ ಪತಿಯೊಬ್ಬ ಸಲ್ಲಿಸಿದ್ದ ವಿಚ್ಛೇದನಾ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‌ನ ವಿ.ಎಂ.ವೇಲುಮನಿ ಮತ್ತು ಎಸ್.ಸೌಂಥರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಹಿಂದು ಧರ್ಮದಲ್ಲಿ ತಾಳಿಗಿರುವ ಮಹತ್ವವನ್ನು ಹೇಳಿ, ಬಳಿಕ ವಿಚ್ಛೇದನ ಕೊಟ್ಟಿದೆ. ಹೈಕೋರ್ಟ್‌ನ ಈ ತೀರ್ಮಾನ ಹೊರಬೀಳುತ್ತಿದ್ದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ವ್ಯಾಪಕ ಚರ್ಚೆಯಾಗುತ್ತಿದೆ. ತಾಳಿ ಧರಿಸುವುದರ ಪರ ಮತ್ತು ವಿರೋಧ ಪೋಸ್ಟ್‌ಗಳು ಟ್ರೆಂಡ್ ಆಗುತ್ತಿವೆ.
ಸಿ.ಶಿವಕುಮಾರ್ ಎಂಬುವರು ಜೂ. 2016ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ತಮಿಳುನಾಡಿನ ಇರೋಡ್‌ನಲ್ಲಿ ವೈದ್ಯಕೀಯ ಕಾಲೇಜೊಂದರ ಪ್ರಾಧ್ಯಾಪಕರಾಗಿರುವ ಇವರು ಮೊದಲಿಗೆ ಸ್ಥಳೀಯ ಕೋರ್ಟ್‌ವೊಂದರಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಕೆ ಮಾಡಿದ್ದರು. ವಿಚಾರಣೆ ನಡೆಸಿದ ಬಳಿಕ ಆ ನ್ಯಾಯಾಲಯ ವಿಚ್ಛೇದನಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲ. ಬಳಿಕ ಶಿವಕುಮಾರ್ ಮದ್ರಾಸ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಶಿವಕುಮಾರ್ ಮತ್ತು ಅವರ ಪತ್ನಿಯನ್ನು ವಿಚಾರಣೆ ನಡೆಸಿದ ಮದ್ರಾಸ್ ಉಚ್ಛ ನ್ಯಾಯಾಲಯ ಸ್ಥಳೀಯ ಕೋರ್ಟ್ ಕೊಟ್ಟಿದ್ದ ತೀರ್ಪನ್ನು ರದ್ದುಗೊಳಿಸಿದೆ.
ಬ್ಯಾಂಕ್ ಲಾಕರ್‌ನಲ್ಲಿಟ್ಟೆ ಎಂದ ಮಹಿಳೆ
ಇನ್ನು ವಿಚಾರಣೆ ವೇಳೆ ಮಹಿಳೆ, ತಾನು ಪತಿ ಶಿವಕುಮಾರ್‌ರಿಂದ ಪ್ರತ್ಯೇಕವಾದ ಬಳಿಕ ಮಂಗಳಸೂತ್ರ ತೆಗೆದಿದ್ದಾಗಿ ಒಪ್ಪಿಕೊಂಡಿದ್ದಾರೆ. ಅದರಲ್ಲೂ ತಾನು ಮಂಗಳಸೂತ್ರದಲ್ಲಿ ಇರುವ ಚಿನ್ನದ ಚೈನ್ ಮತ್ತು ಕರಿಮಣಿಯನ್ನಷ್ಟೇ ತೆಗೆದು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದೇನೆ. ಆದರೆ ತಾಳಿಯನ್ನು ಉಳಿಸಿಕೊಂಡಿದ್ದೇನೆ ಎಂದು ಹೇಳಿದ್ದರು. ಆದರೆ ಮದ್ರಾಸ್ ಹೈಕೋರ್ಟ್ ಅದನ್ನೂ ಒಪ್ಪಲಿಲ್ಲ. ಹೀಗೆ ಮಂಗಳಸೂತ್ರದ ಚೈನ್-ಕರಿಮಣಿ ತೆಗೆಯುವುದಕ್ಕೂ ಒಂದಷ್ಟು ಪ್ರಕ್ರಿಯೆಗಳು ಇವೆ. ಆ ಸಂದರ್ಭಕ್ಕೆ ಕೂಡ ಅದರದ್ದೇ ಆದ ಮಹತ್ವ ಇದೆ ಎಂದು ಹೇಳಿದೆ.
ಹಾಗಿದ್ದಾಗ್ಯೂ ಮಹಿಳೆ ಪರ ವಕೀಲರು ವಾದಿಸಿ, ʼತಾಳಿಗೆ ಮಹತ್ವ ಇದೆ ಒಪ್ಪಿಕೊಳ್ಳುತ್ತೇವೆ. ಆದರೆ ಮದುವೆಯಲ್ಲಿ ತಾಳಿಯೇ ಮುಖ್ಯವಲ್ಲ. ಪತ್ನಿ ಅದನ್ನು ತೆಗೆದಾಕ್ಷಣ ಗಂಡ-ಹೆಂಡತಿ ಸಂಬಂಧ ಮುಗಿದೇಹೋಯಿತು ಎಂದೇನೂ ಪರಿಗಣಿತವಲ್ಲ ಎಂಬುದು ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 7ರಲ್ಲಿ ಉಲ್ಲೇಖಿಸಲಾಗಿದೆʼ ಎಂದಿದ್ದರು. ಆದರೂ ಹೈಕೋರ್ಟ್ ಪೀಠ ಒಪ್ಪಲಿಲ್ಲ. ʼಹಿಂದುಗಳ ವಿವಾಹ ಎಂಬ ಆಚರಣೆಯಲ್ಲಿ ತಾಳಿ ಧಾರಣೆಯೇ ಅತ್ಯಂತ ಪ್ರಮುಖ ಮತ್ತು ವಿಶೇಷ ಭಾಗ ಎಂಬುದು ಎಲ್ಲರಿಗೂ ಗೊತ್ತಿದೆ. ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ಹಿಂದುಗಳು ಈ ಸಂಪ್ರದಾಯ ಬಿಟ್ಟು ಮದುವೆ ಮಾಡಿಕೊಳ್ಳುವುದಿಲ್ಲ. ಹೀಗೆ ಒಮ್ಮೆ ತಾಳಿ ಕಟ್ಟಿಸಿಕೊಂಡ ಮಹಿಳೆ ತನ್ನ ಪತಿಯ ಆಯುರಾರೋಗ್ಯಕ್ಕಾಗಿ ಜೀವನ ಪರ್ಯಂತ ಅದನ್ನು ಕತ್ತಿನಲ್ಲಿ ಇಟ್ಟುಕೊಂಡೇ ಇರುತ್ತಾಳೆʼ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ವಿವಾಹಿತ ಹಿಂದು ಮಹಿಳೆ ಪಾಲಿಗೆ ಮಾಂಗಲ್ಯ ಎಂಬುದು ಅತ್ಯಂತ ಪವಿತ್ರವಾದ ವಸ್ತು. ಅದು ಆಕೆಯ ಕತ್ತಿನಲ್ಲಿ ಇದ್ದರೆ ಘನತೆ ಹೆಚ್ಚುತ್ತದೆ. ಪತಿಯ ನಿಧನದ ಬಳಿಕವಷ್ಟೇ ಅದನ್ನು ತೆಗೆಯಲಾಗುತ್ತದೆ. ಆದರೆ ಈಗ ಇಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿರುವವರ ಪತ್ನಿ ಯಾವುದೇ ಕಾರಣವಿಲ್ಲದಿದ್ದರೂ ತಾಳಿಯನ್ನು ತೆಗೆದಿದ್ದಾರೆ. ಇದು ಆಕೆ ತನ್ನ ಪತಿಗೆ ನೀಡಿದ ಅತ್ಯಂತ ಉನ್ನತ ಸ್ವರೂಪದ ಮಾನಸಿಕ ಹಿಂಸೆ ಎಂದು ಹೈಕೋರ್ಟ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಸೋಷಿಯಲ್ ಮೀಡಿಯಾ ಚರ್ಚೆ
ಮದ್ರಾಸ್ ಹೈಕೋರ್ಟ್‌ನ ಈ ಜಡ್ಜ್‌ಮೆಂಟ್ ಬಹಳ ಬೇಗನೇ ಜನರ ಗಮನಸೆಳೆದಿದೆ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಒಂದಷ್ಟು ಜನ ತಾಳಿ ತೆಗೆದಿದ್ದು ತಪ್ಪು ಎನ್ನುತ್ತಿದ್ದರೆ, ಇನ್ನೊಂದಷ್ಟು ಮಂದಿ ಮಂಗಳ ಸೂತ್ರ ಕಡ್ಡಾಯವಲ್ಲ ಎಂದಿದ್ದಾರೆ. ʼಮದುವೆಯಲ್ಲಿ ತಾಳಿ ಕಟ್ಟುವುದೆಂದರೆ, ಒಂದು ಹಸುವನ್ನು ಖರೀದಿ ಮಾಡಿ, ಅದರ ಕುತ್ತಿಗೆಗೆ ಹಗ್ಗ ಕಟ್ಟಿ, ಆ ಪ್ರಾಣಿಯನ್ನು ಮನೆಗೆ ಎಳೆದುಕೊಂಡು ಹೋದಂತೆʼ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಹಾಗೇ ಇನ್ನೊಬ್ಬರು, ʼಮಂಗಳ ಸೂತ್ರದಿಂದ ಮಾತ್ರ ತಮ್ಮ ಮದುವೆ ಉಳಿಯುತ್ತದೆ ಎಂಬುದನ್ನು ನಂಬಿರುವ ಪುರುಷರೆಲ್ಲ ಆ ತಾಳಿಯನ್ನು ಧರಿಸಬೇಕು. ಹಾಗೇ, ತಾಳಿ ಕಟ್ಟಿಸಿಕೊಂಡು ಮಹಿಳೆ ಮಾಡುವ ಆಚರಣೆಗಳನ್ನು, ತೆಗೆದುಕೊಳ್ಳುವ ಜವಾಬ್ದಾರಿಗಳನ್ನು ಅವರು ತೆಗೆದುಕೊಳ್ಳಬೇಕು. ಆಗ ಎಲ್ಲ ಸಮಸ್ಯೆಗೂ ಪರಿಹಾರ ಸಿಗುತ್ತದೆʼ ಎಂದಿದ್ದಾರೆ.
ಇದನ್ನೂ ಓದಿ: ಅಮೃತ್ ಪಾಲ್ ತನಿಖೆ ಸರಿಯಾಗಿ ನಡೆಯುತ್ತಿದೆ ಎಂದು ನಂಬುವುದು ಹೇಗೆ? ಸಿಐಡಿಗೆ ಹೈಕೋರ್ಟ್ ಪ್ರಶ್ನೆ