ತಿರುವನಂತಪುರಂ: ಬದಲಾದ ಕಾಲಘಟ್ಟದಲ್ಲಿ, ಬದಲಾದ ಕೌಟುಂಬಿಕ ವ್ಯವಸ್ಥೆಯಲ್ಲಿ ಗಂಡ-ಹೆಂಡತಿಯು ಕ್ಷುಲ್ಲಕ ಕಾರಣಗಳಿಗಾಗಿ ವಿಚ್ಛೇದನ (Divorce) ಪಡೆಯುತ್ತಿದ್ದಾರೆ. ಗಂಡ ಗೊರಕೆ ಹೊಡೆಯುತ್ತಾನೆ ಎಂದೋ, ಹೆಂಡತಿ ಸಣ್ಣಪುಟ್ಟದ್ದಕ್ಕೂ ಕಿರಿಕಿರಿ ಮಾಡುತ್ತಾಳೆ ಎಂದೋ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವವರು ಇದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಕೇರಳದಲ್ಲಿ ವ್ಯಕ್ತಿಯೊಬ್ಬ “ನನ್ನ ಹೆಂಡತಿ ಕೆಟ್ಟದಾಗಿ ಅಡುಗೆ ಮಾಡುತ್ತಾಳೆ. ಹಾಗಾಗಿ ನನಗೆ ವಿಚ್ಛೇದನ ನೀಡಬೇಕು” ಎಂಬುದಾಗಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾನೆ. ಅರ್ಜಿಯನ್ನು ತಿರಸ್ಕರಿಸಿದ ಕೇರಳ ಹೈಕೋರ್ಟ್ (Kerala High Court), “ಹೆಂಡತಿ ಕೆಟ್ಟದಾಗಿ ಅಡುಗೆ ಮಾಡುವುದು (Poor Cooking Skill) ಅಥವಾ ಆಕೆಗೆ ರುಚಿಯಾಗಿ ಅಡುಗೆ ಮಾಡಲು ಬರದಿರುವುದು ಕ್ರೌರ್ಯವಲ್ಲ” ಎಂದು ಸ್ಪಷ್ಟಪಡಿಸಿದೆ.
“ಹೆಂಡತಿಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ. ಆಕೆ ಮಾಡುವ ಅಡುಗೆಯನ್ನು ನಿತ್ಯವೂ ತಿನ್ನಲು ಆಗುವುದಿಲ್ಲ. ಹಾಗಾಗಿ, ನನಗೆ ಆಕೆಯಿಂದ ಮುಕ್ತಿ ಬೇಕು” ಎಂಬುದು ವ್ಯಕ್ತಿಯ ಬಯಕೆ ಎಂದು ವ್ಯಕ್ತಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆಗ ನ್ಯಾಯಾಲಯವು, “ಹೆಂಡತಿಗೆ ಅಡುಗೆ ಮಾಡಲು ಬರುವುದಿಲ್ಲ ಎಂದ ಮಾತ್ರಕ್ಕೆ ಅದನ್ನು ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದೊಂದೇ ಕಾರಣಕ್ಕೆ ವಿಚ್ಛೇದನ ನೀಡಲು ಆಗುವುದಿಲ್ಲ” ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ. ನರೇಂದ್ರನ್ ಹಾಗೂ ಸೋಫಿ ಥಾಮಸ್ ಅವರಿದ್ದ ಪೀಠ ತಿಳಿಸಿತು.
ಸಂಬಂಧಿಕರ ಎದುರು ಅವಮಾನ ಮಾಡುತ್ತಾಳೆ
ನ್ಯಾಯಾಲಯವು ಅರ್ಜಿಯನ್ನು ಪರಿಗಣಿಸಲು ಆಗಲ್ಲ ಎಂದರೂ ವ್ಯಕ್ತಿಯ ಆರೋಪಗಳು ಕಡಿಮೆ ಆಗಲಿಲ್ಲ. “ನನ್ನ ಹೆಂಡತಿಯು ನನಗೆ ಗೌರವ ಕೊಡುವುದಿಲ್ಲ. ಸಂಬಂಧಿಕರ ಎದುರೇ ನನಗೆ ಅವಮಾನ ಮಾಡುತ್ತಾಳೆ. ನನ್ನಿಂದ ಅಂತರ ಕಾಪಾಡಿಕೊಂಡಿದ್ದಾಳೆ. ಒಮ್ಮೆ ನನ್ನ ಮೇಲೆ ಉಗಿದಿದ್ದಾಳೆ. ನನಗೆ ಕೆಲಸ ಕೊಟ್ಟ ಬಾಸ್‌ಗೂ ನನ್ನ ವಿರುದ್ಧ ದೂರು ನೀಡಿದ್ದಾಳೆ. ಈಗ ನನಗೆ ಉದ್ಯೋಗ ಭದ್ರತೆಯೂ ಇಲ್ಲದಂತಾಗಿದೆ” ಎಂದು ದೂರಿದರು.
ಇದನ್ನೂ ಓದಿ: Rahul Mahajan : ಮೂರನೇ ದಾಂಪತ್ಯದಲ್ಲೂ ಬಿರುಕು! ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ರಾಹುಲ್ ಮಹಾಜನ್ ದಂಪತಿ
ಕೌಂಟರ್ ಕೊಟ್ಟ ಪತ್ನಿ
ವ್ಯಕ್ತಿಯ ಪತ್ನಿಯ ಪರ ವಕೀಲರು ಆತನ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದಾರೆ. “ನನ್ನ ಗಂಡ ವಿಕೃತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾನೆ. ಆತ ನನ್ನ ದೇಹದ ಬಗ್ಗೆ ಕೆಟ್ಟದಾಗಿ ಮಾತನಾಡಿ ಅವಮಾನಿಸುತ್ತಾನೆ. ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದ ಕಾರಣಕ್ಕಾಗಿ ಹೀಗೆ ಆಡುತ್ತಿದ್ದಾನೆ. ಇಷ್ಟಾದರೂ ನಾನು ಆತನ ಜತೆ ಸಂಸಾರ ಮಾಡುತ್ತಿದ್ದೇನೆ” ಎಂಬುದು ಮಹಿಳೆಯ ವಾದ ಎಂದು ಆಕೆಯ ಪರ ವಕೀಲರು ಕೋರ್ಟ್‌ಗೆ ತಿಳಿಸಿದರು. ಕೊನೆಗೆ ನ್ಯಾಯಾಲಯವು, ವ್ಯಕ್ತಿ ಸಲ್ಲಿಸಿದ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತು.