ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ವನ್ಯಜೀವಿ ವ್ಯಾಪಾರದ (Wildlife trade) ಮೇಲಿನ ನಿಯಮಗಳನ್ನು ಪರಿಷ್ಕರಿಸಿದೆ. ಈ ಮೂಲಕ ಭಾರತದಲ್ಲಿ ಸುಮಾರು 40 ವರ್ಷಗಳ ನಂತರ ವನ್ಯಜೀವಿ ವ್ಯಾಪಾರದ ನಿಯಮಗಳಲ್ಲಿ ಕೆಲವು ಬದಲಾವಣೆ ತರಲಾಗಿದೆ. ಆದಾಗ್ಯೂ ಪರವಾನಗಿ ನಿರ್ಬಂಧಗಳಿಂದ ಕೆಲವು ಜೀವಿಗಳನ್ನು ಹೊರಗಿಟ್ಟಿರುವುದು ಸಂರಕ್ಷಣಾವಾದಿಗಳಲ್ಲಿ ಕಳವಳವನ್ನು ಉಂಟು ಮಾಡಿದೆ. ಅವುಗಳ ಸಂರಕ್ಷಣೆ ಬಗ್ಗೆ ಆತಂಕ ಮೂಡಿದೆ.
ಕೇಂದ್ರ ಪರಿಸರ ಸಚಿವಾಲಯವು ವನ್ಯಜೀವಿ (ಸಂರಕ್ಷಣೆ) ಪರವಾನಗಿ ನಿಯಮಗಳು 2024 ಎಂಬ ಶೀರ್ಷಿಕೆಯ ಅಧಿಸೂಚನೆಯನ್ನು ಹೊರಡಿಸಿದ್ದು, ಸೆರೆಹಿಡಿದ ಪ್ರಾಣಿಗಳು, ಹಾವಿನ ವಿಷ, ವನ್ಯ ಪ್ರಾಣಿಗಳೊಂದಿಗೆ ವ್ಯವಹರಿಸುವವರಿಗೆ ಪರವಾನಗಿ ನೀಡುವ ಮೊದಲು ಪರಿಗಣಿಸಬೇಕಾದ ವಿಷಯಗಳ ಬಗ್ಗೆ ಮಾರ್ಗಸೂಚಿಗಳನ್ನು ಒದಗಿಸುತ್ತದೆ. ಪರಿಷ್ಕೃತ ಅಧಿಸೂಚನೆಯನ್ನು ಜನವರಿ 18ರಂದು ಪ್ರಕಟಿಸಲಾಗಿದೆ. 1983ರಲ್ಲಿ ಜಾರಿಗೆ ತರಲಾದ ಪರವಾನಗಿ ನಿಯಮಗಳನ್ನು ಇಲ್ಲಿಯವರೆಗೆ ಅನುಸರಿಸಲಾಗುತ್ತಿತ್ತು.
1983ರಲ್ಲಿ ಪ್ರಕಟವಾದ ನಿಯಮಗಳ ಪ್ರಕಾರ, ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಶೆಡ್ಯೂಲ್ I ಅಥವಾ ಶೆಡ್ಯೂಲ್ IIರಲ್ಲಿ ಸೂಚಿಸಿದ ಕಾಡು ಪ್ರಾಣಿಗಳ ವ್ಯಾಪಾರಕ್ಕೆ ಯಾವುದೇ ಪರವಾನಗಿಯನ್ನು ನೀಡುವಂತಿಲ್ಲ. ಆದರೆ ಹೊಸ ನಿಯಮದಲ್ಲಿ ಶೆಡ್ಯೂಲ್ IIರ ಪ್ರಭೇದಗಳಿಗಿದ್ದ ವ್ಯಾಪಾರ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಆದರೆ ಏಕೆ ತೆಗೆದು ಹಾಕಲಾಗಿದೆ ಎನ್ನುವುದನ್ನು ಉಲ್ಲೇಖಿಸಲಾಗಿಲ್ಲ. “ಶೆಡ್ಯೂಲ್ IIರಲ್ಲಿ ಹಲವು ಪ್ರಮುಖ ಜೀವಿಗಳ ಪ್ರಭೇದಗಳಿವೆ. ಪರವಾನಗಿಯ ಮೇಲಿನ ನಿರ್ಬಂಧವನ್ನು ಆ ಪ್ರಭೇದಗಳಿಗೆ ಏಕೆ ವಿಸ್ತರಿಸಲಾಗಿಲ್ಲ ಎಂಬುದನ್ನು ಪರಿಶೀಲಿಸಬೇಕಾಗಿದೆ. ಈ ತಿದ್ದುಪಡಿಯಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿದೆʼʼ ಎಂದು ಪರಿಸರ ತಜ್ಞರೊಬ್ಬರು ತಿಳಿಸಿದ್ದಾರೆ.
“ವನ್ಯಜೀವ ಸಂರಕ್ಷಣಾ ಕಾಯ್ದೆ ತಿದ್ದುಪಡಿಗೆ ಮೊದಲು, ಒಂದು ನಿರ್ದಿಷ್ಟ ಪ್ರಭೇದವು ಎಷ್ಟು ಪ್ರಮಾಣದಲ್ಲಿ ಅಳಿವಿನಂಚಿನಲ್ಲಿದೆ ಎಂಬುದರ ಆಧಾರದ ಮೇಲೆ ಪಟ್ಟಿಯನ್ನು ತಯಾರಿಸಲಾಗಿತ್ತು. ಶೆಡ್ಯೂಲ್ IIರಲ್ಲಿ ವರ್ಗೀಕರಿಸಲಾದ ಪ್ರಭೇದಗಳು ಸಂಖ್ಯೆಯಲ್ಲಿ ಹೆಚ್ಚಿವೆಯೇ ಮತ್ತು ಆ ಮಟ್ಟದ ರಕ್ಷಣೆಯ ಅಗತ್ಯವಿಲ್ಲವೇ ಎನ್ನುವುದನ್ನು ಪರಿಶೀಲಿಸಬೇಕಿದೆ” ಎಂದು ಪರಿಸರ ವಕೀಲ ರಾಹುಲ್ ಚೌಧರಿ ಹೇಳಿದ್ದಾರೆ.
ʼʼಶೆಡ್ಯೂಲ್ IIರ ಭಾಗ 2 ಅಸ್ತಿತ್ವದಲ್ಲಿಲ್ಲ. ಶೆಡ್ಯೂಲ್ IIರ ಭಾಗ 2ರಲ್ಲಿ ಪಟ್ಟಿ ಮಾಡಲಾದ ಕಾಡು ಪ್ರಾಣಿಗಳನ್ನು ತಿದ್ದುಪಡಿಯ ನಂತರ ಶೆಡ್ಯೂಲ್ Iರಲ್ಲಿ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಾಕುಪ್ರಾಣಿಗಳ ವ್ಯಾಪಾರದಲ್ಲಿ ಕಳ್ಳ ಸಾಗಣೆ ಮಾಡಲಾದ ಪ್ರಾಣಿಗಳ ನಿಖರವಾದ ಅಂಕಿ-ಅಂಶ ಲಭ್ಯವಿಲ್ಲ. ಅದಾಗ್ಯೂ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಾರ್ಷಿಕವಾಗಿ ವ್ಯಾಪಾರ ಮಾಡಲ್ಪಡುವ ಕಾಡು ಪ್ರಾಣಿಗಳ ಪ್ರಮಾಣವು ದಿಗ್ಭ್ರಮೆಗೊಳಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Forest act : ಮರ್ಡರ್ ಕೇಸ್‌ಗಿಂತಲೂ ಬಿಗಿ ವನ್ಯಜೀವಿ ಸಂರಕ್ಷಣಾ ಕಾಯಿದೆ; ಏನಿದೆ ಅದರಲ್ಲಿ?
ಇತ್ತೀಚಿನ ವರದಿಗಳ ಪ್ರಕಾರ, 70,000ಕ್ಕೂ ಹೆಚ್ಚು ಪ್ರಾಣಿಗಳನ್ನು ವಾಯು ಮಾರ್ಗಗಳ ಮೂಲಕ ಕಳ್ಳ ಸಾಗಣೆ ಮಾಡಲಾಗಿದೆ. ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ(MoEFCC)ದ ಮೂಲಕ ಕ್ಷಮಾದಾನ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿತ್ತು. 2020ರ ಜೂನ್‌ನಿಂದ ಡಿಸೆಂಬರ್‌ವರೆಗೆ ಒಟ್ಟು 32,645 ಮಂದಿ ಸ್ವಯಂಪ್ರೇರಿತವಾಗಿ ಅಪರೂಪ ಪ್ರಭೇದದ ಪ್ರಾಣಿಗಳನ್ನು ಹೊಂದಿರುವುದಾಗಿ ಘೋಷಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ