Site icon Vistara News

Ajit Pawar: ಎನ್‌ಸಿಪಿ ತೊರೆಯಲಿದ್ದಾರೆಯೇ ಅಜಿತ್ ಪವಾರ್? ನಿಜವಾಗಿಯೂ ನಡೆದಿದ್ದೇನು?

Will Ajit Pawar left NCP or is it just rumors?

ಮುಂಬೈ, ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಈ ಹಿಂದೆ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದ ಎನ್‌ಸಿಪಿ (NCP) ನಾಯಕ ಅಜಿತ್ ಪವಾರ್ (Ajit Pawar) ಮತ್ತೆ ಬಿಜೆಪಿ ಜತೆ ಹೆಜ್ಜೆ ಹಾಕಲಿದ್ದಾರೆಂಬ ಸುದ್ದಿಗಳು ಜೋರಾಗಿವೆ. ಆದರೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು ಈ ಸುದ್ದಿಗಳನ್ನು ಅಲ್ಲಗಳೆದಿದ್ದು, ಪವಾರ್ ಪಕ್ಷದ ಜತೆಗೇ ಇರಲಿದ್ದಾರೆಂದು ಹೇಳಿದೆ. ಏತನ್ಮಧ್ಯೆ, ಸ್ವತಃ ಅಜಿತ್ ಪವಾರ್ ಅವರೇ ಈ ಎಲ್ಲ ಸುದ್ದಿಗಳನ್ನು ತಳ್ಳಿ ಹಾಕಿದ್ದು, ಮಾಧ್ಯಮಗಳು ಯಾವುದೇ ಕಾರಣವಿಲ್ಲದೇ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಎನ್‌ಸಿಪಿಯ ವರಿಷ್ಠ ಶರದ್ ಪವಾರ್ ಅವರ ಅಣ್ಣನ ಮಗ ಆಗಿರುವ ಅಜಿತ್ ಪವಾರ್ ಬೆಂಬಲಕ್ಕೆ 30ಕ್ಕೂ ಹೆಚ್ಚು ಶಾಸಕರು ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿತ್ತು. ಕಳೆದ ವರ್ಷವಷ್ಟೇ, ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಮಹಾ ಆಘಾಡಿ ಕೂಟದ ಸರ್ಕಾರವನ್ನು ಪತನಗೊಳಿಸಿ, ಬಿಜೆಪಿ ಅಧಿಕಾರಕ್ಕೆ ಏರಿತ್ತು. ಇದಕ್ಕೆ, ಶಿವಸೇನೆಯ ಪಕ್ಷವನ್ನು ಇಬ್ಭಾಗ ಮಾಡಿ, ಏಕನಾಥ್ ಶಿಂಧೆ ನೇತೃತ್ವದ ಬಣವು ಬಿಜೆಪಿಯೊಂದಿಗೆ ಕೈಜೋಡಿಸಿತ್ತು. ಇದೀಗ, ಪ್ರತಿಪಕ್ಷಗಳ ಕೂಟದಲ್ಲೇ ಬಿರುಕು ಬಿಟ್ಟಿದ್ದು, ಮಹಾರಾಷ್ಟ್ರ ಮತ್ತೊಂದು ರಾಜಕೀಯ ನಾಟಕಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಆದರೆ, ಸದ್ಯದ ಮಟ್ಟಿಗೆ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.

ಸುದ್ದಿ ಅಲ್ಲಗಳೆದ ಅಜಿತ್ ಪವಾರ್

ಮಂಗಳವಾರ ಬೆಳಗಿನಿಂದಲೇ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಬಿಜೆಪಿ ಜತೆ ಕೈಜೋಡಿಸಲಿದ್ದಾರೆಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಅಜಿತ್ ಪವಾರ್ ಅವರು, ಎನ್‌ಸಿಪಿ ತೊರೆಯಲಿದ್ದೇನೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ನಾನು ಎನ್‌ಸಿಪಿ ಜತೆಗೇ ಇದ್ದೇನೆ. ಮತ್ತು ಎನ್‌ಸಿಪಿಯಲ್ಲೇ ಮುಂದುವರಿಯಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು 40 ಶಾಸಕರ ಸಹಿಗಳನ್ನು ಸಂಗ್ರಹಿಸಿಲ್ಲ. ಇವತ್ತು ಶಾಸಕರು ತಮ್ಮನ್ನು ಭೇಟಿ ಮಾಡಲು ಬಂದಿದ್ದು, ಎಂದಿನ ಪ್ರಕ್ರಿಯೆಯಾಗಿದೆ. ಇದಕ್ಕೆ ಬೇರೆ ಅರ್ಥವನ್ನು ಕಲ್ಪಿಸುವುದು ಬೇಕಾಗಿಲ್ಲ ಎಂದು ಅಜಿತ್ ಪವಾರ್ ಹೇಳಿದ್ದಾರೆ. ಈ ಎಲ್ಲ ಸುಳ್ಳು ಸದ್ದಿಗಳಿಂದಾಗಿ ಎನ್‌ಸಿಪಿ ಕಾರ್ಯಕರ್ತರಲ್ಲಿ ಗೊಂದಲವುಂಟಾಗಿದೆ. ನಾನು ಎಲ್ಲ ಕಾರ್ಯಕರ್ತರಿಗೆ ಹೇಳಲು ಬಯಸುವುದು ಏನೆಂದರೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು ಶರದ್ ಪವಾರ್ ಅವರ ನಾಯಕತ್ವದಲ್ಲಿ ಸ್ಥಾಪನೆಯಾಗಿದೆ. ನಾವು ಕೆಲವೊಮ್ಮೆ ಅಧಿಕಾರದಲ್ಲಿದ್ದೇವೆ ಮತ್ತೆ ಕೆಲವೊಮ್ಮೆ ಇಲ್ಲ ಎಂದು ಅಜಿತ್ ಪವಾರ್ ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಮುಂಬೈಗೆ ಬಂದಾಗ ಆದಿತ್ಯ ಠಾಕ್ರೆ, ಅಜಿತ್‌ ಪವಾರ್‌ಗೆ ಅವಮಾನ; ಶಿವಸೇನೆ ಆರೋಪ

ನಿರುದ್ಯೋಗ ಮತ್ತು ರೈತರ ಸಮಸ್ಯೆಗಳಂಥ ಮುಖ್ಯ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆ ದಿಕ್ಕಿನೆಡೆಗೆ ತಿರುಗಿಸಲು ಕೆಲವೊಮ್ಮೆ ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತದೆ ಎಂದು ಹೇಳಿದರು. ಈ ಮಧ್ಯೆ ಎನ್‌ಸಿಪಿ ವರಿಷ್ಠ ನಾಯಕ ಶರದ್ ಪವಾರ್ ಅವರು ಮಾತನಾಡಿ, ಈ ವರದಿಗಳಲ್ಲಿ ಸತ್ಯಾಂಶವಿಲ್ಲ. ಅಜಿತ್ ಪವಾರ್ ಯಾವುದೇ ಸಭೆಯನ್ನು ಕರೆದಿಲ್ಲ. ಅವರು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ನಿಮ್ಮ ಮನಸ್ಸಿನಲ್ಲಿದೆ ಎಂದು ಸುದ್ದಿಗಾರರಿಗೆ ಹೇಳಿದರು.

Exit mobile version