ನವ ದೆಹಲಿ: 2024ರ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗುವ ಸನ್ನಾಹದಲ್ಲಿರುವ ಬಿಹಾರ ಮುಖ್ಯಮಂತ್ರಿ(Bihar CM) ನಿತೀಶ್ ಕುಮಾರ್ ಅವರು ಉತ್ತರ ಪ್ರದೇಶದ ಫುಲ್ಪುರ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ. ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಇಂಥದೊಂದು ಆಫರ್ ನೀಡಿದ್ದು, ನಿತೀಶ್ ಕುಮಾರ್ ಅವರು ಉತ್ತಪ್ರದೇಶದಿಂದ ಸ್ಪರ್ಧಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಮತ್ತೊಂದೆಡೆ, ಫುಲ್ಪುರ್ ಕ್ಷೇತ್ರದ ಸಂಯುಕ್ತ ಜನತಾ ದಳದ ಕಾರ್ಯಕರ್ತರೂ ಸ್ಪರ್ಧಿಸುವಂತೆ ನಿತೀಶ್ ಕುಮಾರ್ ಮೇಲೆ ಒತ್ತಡ ಹಾಕುತ್ತಿದ್ದಾರೆಂದೂ ವರದಿಯಾಗಿದೆ.
ಉತ್ತರ ಪ್ರದೇಶದಿಂದಲೇ ನಿತೀಶ್ ಕುಮಾರ್ ಸ್ಪರ್ಧಿಸುವ ಬಗ್ಗೆ ಹಲವು ಸುಳಿವುಗಳು ದೊರೆಯುತ್ತಿವೆ. ಸಂಯುಕ್ತ ಜನತಾ ದಳ ರಾಷ್ಟ್ರೀಯ ಅಧ್ಯಕ್ಷ ಲಲನ್ ಸಿಂಗ್ ಅವರೂ ಭಾನುವಾರ ಈ ಬಗ್ಗೆ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ. ಫುಲ್ಪುರ್ ಕ್ಷೇತ್ರ ಮಾತ್ರವಲ್ಲ, ಬದಲಿಗೆ ಅಂಬೇಡ್ಕರ್ ನಗರ ಮತ್ತು ಮಿರ್ಜಾಪುರ ಕ್ಷೇತ್ರದಿಂದಲೂ ಸ್ಪರ್ಧಿಸುವಂತೆ ನಿತೀಶ್ ಕುಮಾರ್ ಮೇಲೆ ಒತ್ತಡವಿದೆ ಎಂಬ ಸುಳಿವು ಅವರು ನೀಡಿದ್ದಾರೆ.
ನಿತೀಶ್ ಕುಮಾರ್ ಅವರು ಉತ್ತರ ಪ್ರದೇಶದಿಂದ ಸ್ಪರ್ಧಿಸುವ ಬಗ್ಗೆ ಈಗಲೇ ಏನೂ ಹೇಳಲಾಗುವುದಿಲ್ಲ. ಅವರು ಸ್ಪರ್ಧಿಸುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು. ಆದರೆ, ಅಂಬೇಡ್ಕರ್ ನಗರ್, ಮಿರ್ಜಾಪುರ ಕ್ಷೇತ್ರಗಳಿಂದಲೂ ಸ್ಪರ್ಧಿಸಲು ನಿತೀಶ್ ಕುಮಾರ್ ಅವರಿಗೆ ಆಫರ್ ಬಂದಿದೆ. ಅವರು ಪ್ರತಿಪಕ್ಷಗಳನ್ನು ಒಗ್ಗೂಡಿಸುತ್ತಿರುವ ಪರಿಣಾಮ ಉತ್ತರ ಪ್ರದೇಶದಿಂದ ಸ್ಪರ್ಧಿಸಲು ಆಹ್ವಾನಗಳು ಬರುತ್ತಿವೆ ಎಂದು ಲಲನ್ ಸಿಂಗ್ ಅವರು ತಿಳಿಸಿದ್ದಾರೆ.
ಉತ್ತರ ಪ್ರದೇಶದಿಂದ ನಿತೀಶ್ ಕುಮಾರ್ ಏಕೆ ಸ್ಪರ್ಧಿಸುತ್ತಾರೆಂಬ ಪ್ರಶ್ನೆ ಸಹಜ. ಬಿಹಾರದ ಮುಖ್ಯಮಂತ್ರಿಯಾಗಿರುವ ಅವರು ಅದೇ ರಾಜ್ಯದಲ್ಲಿ ಸ್ಪರ್ಧಿಸಿ, ಆರಾಮವಾಗಿ ಗೆದ್ದು ಬರಬಹುದು. ಆದರೂ, ಉತ್ತರ ಪ್ರದೇಶಕ್ಕೆ ಏಕೆ ವಲಸೆ ಬರಬೇಕು? ಉತ್ತರ ಸಿಂಪಲ್. ರಾಜಕೀಯವಾಗಿ ಉತ್ತರ ಪ್ರದೇಶ ತುಂಬ ಮಹತ್ವದ ರಾಜ್ಯ. ಉತ್ತರ ಪ್ರದೇಶವು ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಹೊಂದಿದೆ. ಹಾಗಾಗಿ, ಇಲ್ಲಿಂದಲೇ ಸ್ಪರ್ಧಿಸಿದರೆ ಹೆಚ್ಚು ಪ್ರತಿಪಕ್ಷಗಳಿಗೆ ಹೆಚ್ಚು ಲಾಭವಾಗಬಹುದು ಎಂಬ ಲೆಕ್ಕಾಚಾರ ಇರಬಹುದು. ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಾರೆ.
ಇದನ್ನೂ ಓದಿ | 2024ರ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಅಲ್ಲ ಎನ್ನುತ್ತಲೇ ಬಹುದೊಡ್ಡ ಭರವಸೆಯೊಂದನ್ನು ನೀಡಿದ ನಿತೀಶ್ ಕುಮಾರ್ !