Site icon Vistara News

ನಿಮ್ಮ ನಾಲಗೆ ಕತ್ತರಿಸುತ್ತೇವೆ, ರಾಹುಲ್‌ ಗಾಂಧಿ ದೋಷಿ ಎಂದು ತೀರ್ಪು ನೀಡಿದ ಜಡ್ಜ್‌ಗೆ ಕೈ ನಾಯಕ ಬೆದರಿಕೆ

Will chop tongue off: Congress leader threatens judge who sentenced Rahul Gandhi

Will chop tongue off: Congress leader threatens judge who sentenced Rahul Gandhi

ಚೆನ್ನೈ: ಮೋದಿ ಎಂಬ ಉಪನಾಮ ಹೊಂದಿರುವ ಎಲ್ಲರೂ ಕಳ್ಳರೇ ಎಂದು ಹೇಳಿಕೆ ನೀಡಿದ ಬಳಿಕ ದಾಖಲಾದ ಮಾನಹಾನಿ ಕೇಸ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸೂರತ್‌ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿ, ಎರಡು ಶಿಕ್ಷೆ ವಿಧಿಸಿದೆ. ಹಾಗಾಗಿ, ರಾಹುಲ್ ಗಾಂಧಿ ಅವರು ಸಂಸತ್‌ನಿಂದ ಅನರ್ಹಗೊಂಡಿದ್ದಾರೆ. ಈ ವಿಚಾರವು ದೇಶಾದ್ಯಂತ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರು ದೋಷಿ ಎಂದು ತೀರ್ಪು ನೀಡಿದ ಸೂರತ್‌ ನ್ಯಾಯಾಲಯದ ನ್ಯಾಯಾಧೀಶ ಎಚ್‌. ವರ್ಮಾ ಅವರಿಗೆ ಕಾಂಗ್ರೆಸ್‌ ನಾಯಕರೊಬ್ಬರು ಬೆದರಿಕೆ ಹಾಕಿದ್ದಾರೆ. “ನಿಮ್ಮ ನಾಲಗೆಯನ್ನು ಕತ್ತರಿಸುತ್ತೇವೆ” ಎಂದು ಹೇಳಿದ್ದಾರೆ.

ಹೌದು, ತಮಿಳುನಾಡಿನ ದಿಂಡಿಗಲ್‌ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಣಿಕಂದನ್‌ ಅವರು ಸೂರತ್‌ ಕೋರ್ಟ್‌ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದಾರೆ. ರಾಹುಲ್‌ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸದ್ದನ್ನು ಖಂಡಿಸಿ ದಿಂಡಿಗಲ್‌ನಲ್ಲಿ ಕಾಂಗ್ರೆಸ್‌ನ ಎಸ್‌ಸಿ ಹಾಗೂ ಎಸ್‌ಟಿ ವಿಭಾಗದಿಂದ ಪ್ರತಿಭಟನೆ ನಡೆಸಲಾಗಿದೆ. ಇದೇ ವೇಳೆ ಮಾತನಾಡಿದ ಮಣಿಕಂದನ್‌, “ರಾಹುಲ್‌ ಗಾಂಧಿ ಅವರಿಗೆ ಸೂರತ್‌ ನ್ಯಾಯಾಲಯವು ಮಾರ್ಚ್‌ 23ರಂದು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಮೂರ್ತಿ ಎಚ್‌. ವರ್ಮಾ ಅವರೇ ಕೇಳಿ, ಕಾಂಗ್ರೆಸ್‌ ಯಾವಾಗ ಅಧಿಕಾರಕ್ಕೆ ಬರುತ್ತದೆಯೋ, ಆಗ ನಿಮ್ಮ ನಾಲಗೆಯನ್ನು ಕತ್ತರಿಸಲಾಗುತ್ತದೆ” ಎಂದಿದ್ದಾರೆ.

ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆಯ (IPC) ಮೂರು ಸೆಕ್ಷನ್‌ಗಳ ಅಡಿಯಲ್ಲಿ ದಿಂಡಿಗಲ್‌ ಪೊಲೀಸರು ಮಣಿಕಂದನ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕರ್ನಾಟಕದ ಕೋಲಾರದಲ್ಲಿ 2019ರಲ್ಲಿ ಚುನಾವಣೆ ರ‍್ಯಾಲಿ ವೇಳೆ ರಾಹುಲ್‌ ಗಾಂಧಿ ಅವರು ಮಾತನಾಡಿದ್ದರು. ಲಲಿತ್‌ ಮೋದಿ, ನೀರವ್‌ ಮೋದಿ ಅವರ ಹೆಸರನ್ನು ಉಲ್ಲೇಖಿಸಿ ಮೋದಿ ವಿರುದ್ಧ ಟೀಕಿಸಿದ್ದರು. “ಮೋದಿ ಸರ್‌ನೇಮ್‌ ಹೊಂದಿರುವ ಎಲ್ಲರೂ ಏಕೆ ಕಳ್ಳರು?” ಎಂದು ಹೇಳಿದ್ದರು.

ರಾಹುಲ್‌ ಗಾಂಧಿ ಹೇಳಿಕೆಯನ್ನು ಪ್ರಶ್ನಿಸಿ ಗುಜರಾತ್‌ ಬಿಜೆಪಿ ನಾಯಕ ಪೂರ್ಣೇಶ್‌ ಮೋದಿ ಅವರು ಸೂರತ್‌ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಮಾರ್ಚ್‌ 23ರಂದು ರಾಹುಲ್‌ ಗಾಂಧಿ ದೋಷಿ ಎಂದು ತೀರ್ಪು ನೀಡಿ, ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹಾಗಾಗಿ, ಜನಪ್ರತಿನಿಧಿ ಕಾಯ್ದೆ ಅನ್ವಯ ರಾಹುಲ್‌ ಗಾಂಧಿ ಅವರು ಲೋಕಸಭೆಯಿಂದ ಅನರ್ಹಗೊಂಡಿದ್ದಾರೆ. ಅವರ ಅನರ್ಹತೆ ಪ್ರಶ್ನಿಸಿ ಪ್ರತಿಪಕ್ಷಗಳು ಈಗಾಗಲೇ ಪ್ರತಿಭಟನೆ ನಡೆಸಿವೆ. ಸಂಸತ್‌ ಬಜೆಟ್‌ ಅಧಿವೇಶನದ ಕಲಾಪಗಳು ಕೂಡ ಇದೇ ವಿಷಯಕ್ಕೆ ಸಂಬಂಧಿಸಿದ ಪ್ರತಿಭಟನೆಗಳಿಗೆ ಬಲಿಯಾಗಿವೆ.

ಇದನ್ನೂ ಓದಿ: Rahul Gandhi: ಸರ್ಕಾರಿ ಬಂಗಲೆಯಿಂದ ಹೊರ ಬಿದ್ದಿರುವ ರಾಹುಲ್‌ ಗಾಂಧಿಗೆ ಆಶ್ರಮಕ್ಕೆ ಬನ್ನಿ ಎಂದ ಅಯೋಧ್ಯೆಯ ಶ್ರೀ

Exit mobile version