ನವದೆಹಲಿ: ಲೋಕಸಭೆಯಿಂದ ರಾಹುಲ್ ಗಾಂಧಿ (Rahul Gandhi) ಅವರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ತೀವ್ರ ಪ್ರತಿಭಟನೆಯನ್ನು ನಡೆಸುತ್ತಿದೆ. ಇದರ ಮಧ್ಯೆಯೇ, ಕಾಂಗ್ರೆಸ್ (Congress) ನಾಯಕ ಮನೀಶ್ ತಿವಾರಿ ಅವರು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಶ ನೋಟಿಸ್ ನೀಡುವ ಸಲಹೆ ನೀಡಿದ್ದಾರೆ. ಈ ಬಗ್ಗೆ ಕರುಡು ತಯಾರಿಸುವಂತೆ ಕಾಂಗ್ರೆಸ್ ತಿವಾರಿ ಅವರಿಗೆ ಸೂಚಿಸಿತ್ತು. ಆದರೆ, ಈ ಕ್ರಮಕ್ಕೆ ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ. ಒಂದೊಮ್ಮೆ ಅವಿಶ್ವಾಸ ನೋಟಿಸ್‌ಗೆ (no-confidence notice) ಮುಂದಾದರೆ, ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾಂಗ್ರೆಸ್ ನಾಯಕತ್ವವು ತಿವಾರಿಗೆ ನೋಟಿಸ್ ಕರಡು ಸಿದ್ಧಪಡಿಸಲು ಹೇಳಿತ್ತು. ಆದರೆ, ಈ ಕ್ರಮವನ್ನು ಮುಂದುವರಿಸುವ ಬಗ್ಗೆ ಪಕ್ಷವು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಸ್ಪೀಕರ್ ವಿರುದ್ಧ ಅವಿಶ್ವಾಸಕ್ಕೆ ಮುಂದಾದರೆ, ಇತರ ಪ್ರತಿಪಕ್ಷಗಳು ಕಾಂಗ್ರೆಸ್ ಜತೆ ಬರಲಿವೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೆಲವು ಪ್ರತಿಪಕ್ಷಗಳ ನಾಯಕರು ಸ್ಪೀಕರ್ ವಿರುದ್ಧ ಅವಿಶ್ವಾಸ ಮಂಡಿಸುವುದುಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ, ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಬಿರುಕು ಮೂಡಿಸುವ ಯಾವುದೇ ಕ್ರಮವನ್ನು ಕೈಗೊಳ್ಳದಿರಲು ಕಾಂಗ್ರೆಸ್ ನಾಯಕತ್ವ ನಿರ್ಧರಿಸಿದೆ ಎನ್ನಲಾಗಿದೆ.
ಲೋಕಸಭೆ ವ್ಯವಹಾರಗಳ ಕಲಾಪದ ನಿಯಮಗಳ ಪ್ರಕಾರ, ಯಾವುದೇ ಸದಸ್ಯರು ಲೋಕಸಭೆಯ ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಅವರನ್ನು ವಜಾಗೊಳಿಸಲು ಇಚ್ಛಿಸಿದರೆ, ಆ ಬಗ್ಗೆ ಲೋಕಸಭೆ ಪ್ರಧಾನ ಕಾರ್ಯದರ್ಶಿಗೆ ಲಿಖಿತವಾಗಿ ಮನವಿಯನ್ನು ಸಲ್ಲಿಸಬೇಕಾಗುತ್ತದೆ.
ಸದಸ್ಯರು ನೀಡಿದ ನೋಟಿಸ್ ಸ್ವೀಕಾರಗೊಂಡ ಬಳಿಕ, ನಿರ್ಣಯವನ್ನು ಸೇರಿಸಲು ಪ್ರಸ್ತಾಪವನ್ನು ಸಂಬಂಧಿತ ಸದಸ್ಯರ ಹೆಸರಿನಲ್ಲಿ ಕಲಾಪದ ಪಟ್ಟಿಯಲ್ಲಿ ನಮೂದಿಸಬೇಕಾಗುತ್ತದೆ. ನಿರ್ಣಯ ಸ್ವೀಕೃತಗೊಂಡ 14 ದಿನಗಳ ಒಳಗೆ ಯಾವುದೇ ದಿನದಂದು ಸ್ಪೀಕರ್ ಅವರು ಅವಿಶ್ವಾಸ ನಿರ್ಣಯಕ್ಕೆ ದಿನಾಂಕವನ್ನು ನಿಗದಿ ಮಾಡಬೇಕಾಗುತ್ತದೆ. ಆದರೆ, ಬಜೆಟ್ ಅಧಿವೇಶನವು ಈ ವಾರದಲ್ಲಿ ಮುಕ್ತಾಯವಾಗಲಿದೆ. ಹಾಗಾಗಿ, ಕಾಂಗ್ರೆಸ್ ಸ್ವೀಕರ್ ವಿರುದ್ಧ ನೀಡುವ ಅವಿಶ್ವಾಸ ನೋಟಿಸ್ ಸದ್ಯಕ್ಕೆ ಚಾಲ್ತಿಯಲ್ಲಿ ಬರುವುದು ಡೌಟು.
ಇದನ್ನೂ ಓದಿ: ಬ್ರಿಟಿಷರಿಗೆ ಸಾವರ್ಕರ್ ಕ್ಷಮೆ ಕೇಳಿದ್ದನ್ನು ಸಾಬೀತು ಮಾಡಿ: ರಾಹುಲ್ ಗಾಂಧಿಗೆ ಸಾವರ್ಕರ್ ಮೊಮ್ಮಗ ಸವಾಲು
ಇತಿಹಾಸವನ್ನು ನೋಡಿದರೆ, ಲೋಕಸಭೆ ಸ್ಪೀಕರ್ ವಿರುದ್ಧ ಈ ಹಿಂದೆ ಮೂರು ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. 1951ರಲ್ಲಿ ಜಿ ವಿ ಮಾವಳಂಕರ್, 1966ರಲ್ಲಿ ಸರ್ದಾರ್ ಹುಕಮ್ ಸಿಂಗ್ ಮತ್ತು 1987ರಲ್ಲಿ ಬಲರಾಮ್ ಜಖರ್ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಘಟನೆಗಳು ನಡೆದಿವೆ.