Site icon Vistara News

ಇಂಡಿಯಾ ಒಕ್ಕೂಟಕ್ಕೆ ಶಾಕ್;‌ ಮೈತ್ರಿ ತೊರೆದ ನ್ಯಾಷನಲ್‌ ಕಾನ್ಫರೆನ್ಸ್, ಎನ್‌ಡಿಎ ಸೇರ್ಪಡೆ?

Rahul Gandhi And Farooq Abdullah

Will contest alone, can't rule out possibilities of joining NDA: Farooq Abdullah says no to INDIA alliance

ಶ್ರೀನಗರ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟಕ್ಕೆ (India Bloc) ಬೀಳುತ್ತಿರುವ ಪೆಟ್ಟುಗಳು ದಿನೇದಿನೆ ಜಾಸ್ತಿಯಾಗುತ್ತಿವೆ. ಒಕ್ಕೂಟದಿಂದ ಟಿಎಂಸಿ, ಆರ್‌ಎಲ್‌ಡಿ ಸೇರಿ ಹಲವು ಪಕ್ಷಗಳು ಹೊರಬಂದಿರುವ ಬೆನ್ನಲ್ಲೇ ನ್ಯಾಷನಲ್‌ ಕಾನ್ಫರೆನ್ಸ್‌ ಕೂಡ ಪ್ರತಿಪಕ್ಷಗಳ ಒಕ್ಕೂಟಕ್ಕೆ ವಿದಾಯ ಹೇಳಿದೆ. ಈ ಕುರಿತು ನ್ಯಾಷನಲ್‌ ಕಾನ್ಫರೆನ್ಸ್‌ (National Conference) ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ (Farooq Abdullah) ಅವರೇ ಮಾಹಿತಿ ನೀಡಿದ್ದಾರೆ.

“ಲೋಕಸಭೆ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಯಾರ ಜತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿಯೇ ಲೋಕಸಭೆ ಚುನಾವಣೆ ಎದುರಿಸುತ್ತೇವೆ. ಇದರ ಬಗ್ಗೆ ಎರಡನೇ ಮಾತೇ ಇಲ್ಲ. ಹಾಗಂತ, ಎನ್‌ಡಿಎ ಮೈತ್ರಿ ಸೇರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ” ಎಂದು ಹೇಳಿದ್ದಾರೆ. ಆ ಮೂಲಕ ಎನ್‌ಡಿಎ ಸೇರಿದರೂ ಅಚ್ಚರಿ ಇಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಇನ್ನು, ಜಮ್ಮು-ಕಾಶ್ಮೀರದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯು ಏಕಕಾಲದಲ್ಲಿ ನಡೆಯುತ್ತದೆ ಎಂದು ಕೂಡ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ರಾಷ್ಟ್ರೀಯ ಲೋಕದಳ (RLD) ಕೂಡ ಇಂಡಿಯಾ ಒಕ್ಕೂಟಕ್ಕೆ ವಿದಾಯ ಹೇಳಿ, ಎನ್‌ಡಿಎ ಜತೆ ಕೈಜೋಡಿಸಿದೆ. ಈಗ ಇಂಡಿಯಾ ಒಕ್ಕೂಟದಿಂದ ನ್ಯಾಷನಲ್‌ ಕಾನ್ಫರೆನ್ಸ್‌ ಕೂಡ ಹೊರಬಂದಿರುವುದು ಒಕ್ಕೂಟಕ್ಕೆ ಆದ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಹಾಗೆ ನೋಡಿದರೆ, ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷವು ಇದಕ್ಕೂ ಮೊದಲು ಎನ್‌ಡಿಎ ಮಿತ್ರಕೂಟದಲ್ಲಿತ್ತು. ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ನ್ಯಾಷನಲ್‌ ಕಾನ್ಫರೆನ್ಸ್‌ ಎನ್‌ಡಿಎದಲ್ಲಿತ್ತು. 2002ರಲ್ಲಿ ಎನ್‌ಡಿಎ ಒಕ್ಕೂಟದಿಂದ ಹೊರಬಂದಿತ್ತು.

ಇದನ್ನೂ ಓದಿ: ಇಂಡಿಯಾ ಒಕ್ಕೂಟಕ್ಕೆ ಮತ್ತೊಂದು ಶಾಕ್; ಮೈತ್ರಿ ಬಿಟ್ಟು ಬಿಜೆಪಿ ಜತೆ ಸೇರಿದ ಆರ್‌ಎಲ್‌ಡಿ!

ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಧ್ಯೇಯದಿಂದ ಅಸ್ತಿತ್ವಕ್ಕೆ ಬಂದಿರುವ ಇಂಡಿಯಾ ಒಕ್ಕೂಟವು ಲೋಕಸಭೆ ಚುನಾವಣೆಯ ಮೊದಲೇ ಛಿದ್ರ ಛಿದ್ರವಾಗಿದೆ. ಟಿಎಂಸಿಯು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ಪಂಜಾಬ್‌ನಲ್ಲಿ ಆಪ್‌ ಕೂಡ ಮೈತ್ರಿ ಇಲ್ಲದೆಯೇ ಸ್ಪರ್ಧಿಸಲು ಮುಂದಾಗಿದೆ. ಇದರ ಬೆನ್ನಲ್ಲೇ, ನಿತೀಶ್‌ ಕುಮಾರ್‌ ಅವರು ಕೂಡ ಮೈತ್ರಿಕೂಟಕ್ಕೆ ವಿದಾಯ ಹೇಳಿರುವುದು ಒಕ್ಕೂಟದ ಒಗ್ಗಟ್ಟಿಗೆ ಭಾರಿ ಪೆಟ್ಟು ಬಿದ್ದಂತಾಗಿದೆ. ಅದರಲ್ಲೂ, ನಿತೀಶ್‌ ಕುಮಾರ್‌ ಅವರ ವಿದಾಯವು ಇಂಡಿಯಾ ಒಕ್ಕೂಟಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version