ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಯ (Bhartiya Janata Party – BJP) ವಿರುದ್ದ ಎಷ್ಟು ಸಾಧ್ಯವೋ ಅಷ್ಟು ಒಗ್ಗಟ್ಟಾಗಿ ಸ್ಪರ್ಧಿಸಲು ಇಂಡಿಯಾ ಕೂಟ (INDIA Bloc) ನಿರ್ಧರಿಸಿದೆ. ಈ ಕುರಿತು ನಿರ್ಣಯವನ್ನು ಕೈಗೊಂಡಿದೆ. ಕೂಟದ ಅತ್ಯುನ್ನತ ತೀರ್ಮಾನ ಕೈಗೊಳ್ಳುವ ಉನ್ನತಾಧಿಕಾರವನ್ನು ಹೊಂದಿರುವ 13 ಸದಸ್ಯರ ಸಮನ್ವಯ ಸಮಿತಿಯನ್ನು ಕುರಿತು ಇಂಡಿಯಾ ಕೂಟ ಘೋಷಣೆ ಮಾಡಿದೆ(13-member coordination committee).
ಇಂಡಿಯಾ ಕೂಟದ ಈ ಸಮನ್ವಯ ಸಮಿತಿಯಲ್ಲಿ ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್, ಎನ್‌ಸಿಪಿ ನಾಯಕ ಶರದ್ ಪವಾರ್, ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ಶಿವಸೇನೆಯ ಸಂಜಯ್ ರಾವತ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಆಪ್‌ನ ರಾಘವ್ ಛಡ್ಡಾ, ಸಮಾಜವಾದಿ ಪಕ್ಷದ ಜಾವೇದ್ ಅಲಿ ಖಾನ್, ಜೆಡಿಯುನ ಲಲ್ಲನ್ ಸಿಂಗ್, ಸಿಪಿಐ ನಾಯಕ ಡಿ. ರಾಜಾ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಮತ್ತು ಪಿಡಿಪಿ ನಾಯಕಿ ಮೆಹಬೂಬಾ ಮಫ್ತಿ ಅವರು ಸದಸ್ಯರಾಗಿದ್ದಾರೆ.
ಕೊಟ್ಟು- ತೆಗೆದುಕೊಳ್ಳುವ ನೀತಿಯ ಅನ್ವಯ ಸೀಟು ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಇಂಡಿಯಾ ಕೂಟ ಮುಂದಾಗಿದೆ. ಈ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ನಾಯಕರು ಹೇಳಿದ್ದಾರೆ. ಕೂಟದ ಎಲ್ಲ ಪಕ್ಷಗಳು ತಮ್ಮ ಸಂವಹನ, ಮಾಧ್ಯಮ ಕಾರ್ಯತಂತ್ರಗಳು ಹಾಗೂ ಅಭಿಯಾನಗಳನ್ನು ಜುಡೇಗಾ ಭಾರತ್ ಮತ್ತು ಜೀತೇಗಾ ಇಂಡಿಯಾ ಹೆಸರಿನಲ್ಲೇ ವಿವಿಧ ಭಾಷೆಗಳಲ್ಲಿ ನಡೆಸಲಿವೆ ಎಂದು ಕೂಟ ಹೇಳಿದೆ.
ಮುಂಬೈನಲ್ಲಿ ನಡೆಯುತ್ತಿರುವ ಸಭೆಯು ಇಂಡಿಯಾ ಕೂಟದ ಮೂರನೇ ಸಭೆಯಲಾಿಗದೆ. ಇದಕ್ಕೂ ಮೊದಲು ಪ್ರತಿಪಕ್ಷಗಳ ನಾಯಕರು ಪಾಟ್ನಾ ಮತ್ತು ಬೆಂಗಳೂರಲ್ಲಿ ಸಭೆ ಸೇರಿ ಚರ್ಚಿಸಿದ್ದು. ಮುಂಬೈನಲ್ಲಿ ನಡೆಯುತ್ತಿರುವ ಸಭೆಯ ಅಜೆಂಡಾ ಪ್ರಕಾರ, ಕೂಟದ ಅಧಿಕೃತ ವಕ್ತಾರರು ಮತ್ತು ಲೋಗೋ ಬಿಡುಗಡೆ ಕಾರ್ಯವು ಇನ್ನು ಬಾಕಿ ಉಳಿದಿದೆ.
ಇದೇ ವೇಳೆ, ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರತಿಪಕ್ಷಗಳ ಬಲವರ್ಧನೆಯು ಬಿಜೆಪಿಗೆ ಆತಂಕವನ್ನು ಸೃಷ್ಟಿ ಮಾಡಿದೆ. ಹಾಗಾಗಿ, ಕೂಟದ ನಾಯಕರೆಲ್ಲರೂ ಬಿಜೆಪಿಯ ದ್ವೇಷಮಯ ರಾಜಕಾರಣಕ್ಕೆ ಸಿದ್ಧರಾಗಬೇಕು. ಬಿಜೆಪಿಯ ಸರ್ಕಾರಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಿದೆ ಎಂದು ಎಚ್ಚರಿಸಿದರು.
ಈ ಸುದ್ದಿಯನ್ನೂ ಓದಿ: INDIA Bloc Meeting: ವಿಶೇಷ ಅಧಿವೇಶನ ಕರೆಗೆ ಬೆಚ್ಚಿದ ವಿಪಕ್ಷ ಒಕ್ಕೂಟ, ಮುಂಬಯಿ ಸಭೆಯಲ್ಲಿ ನಿರ್ಧಾರಗಳಿಗೆ ತರಾತುರಿ
ಅಕ್ಟೋಬರ್ 2ರೊಳಗೆ ಪ್ರಣಾಳಿಕೆ?
ಈ ಮಧ್ಯೆ, ಅಕ್ಟೋಬರ್ 2ರೊಳಗೇ ಕೂಟದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತರ ನಾಯಕರಿಗೆ ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೇ, ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಠಕ್ಕರ್ ನೀಡಲು ಸಾಮಾನ್ಯ ಅಜೆಂಡಾ ಸಿದ್ಧಪಡಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.