ರಾಯಪುರ್, ಛತ್ತೀಸ್‌ಗಢ: 85ನೇ ಕಾಂಗ್ರೆಸ್ ಮಹಾಧಿವೇಶನದಲ್ಲಿ ಭಾಗಿಯಾಗಿರುವ ರಾಹುಲ್ ಗಾಂಧಿ (Rahul Gandhi) ಅವರು, ಭಾರತ್ ಜೋಡೋ ಯಾತ್ರೆಯ ಅನುಭವ ಹಂಚಿಕೊಂಡರು. ಅಲ್ಲದೇ, ಇಂದು ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗದಳಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದರು. ಸತ್ಯ ಹೊರಗೆ ಬರುವವರಿಗೆ ಸರ್ಕಾರಕ್ಕೆ ಅದಾನಿ ಕುರಿತು ಪ್ರಶ್ನೆಗಳನ್ನು ಕೇಳಲಾಗುವುದು ಎಂದು ರಾಹುಲ್ ಗಾಂಧಿ ಅವರು ಇದೇ ವೇಳೆ ಹೇಳಿದರು(Congress Plenary Session).
ಇದೇ ವೇಳೆ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಇತ್ತೀಚಿನ ಟೀಕೆಗಳಿಗೆ ಪ್ರತ್ಯುತ್ತರ ನೀಡಿದ ರಾಹುಲ್ ಗಾಂಧಿ ಅವರು, ಅವರದ್ದು ರಾಷ್ಟ್ರೀಯತೆ ಅಲ್ಲ, ಹೇಡಿತನ ಎಂದು ಟೀಕಿಸಿದರು.
ಉದ್ಯಮಿ ಗೌತಮ ಅದಾನಿ ಅವರು ಹೇಗೆ ಜಗತ್ತಿನ ಎರಡನೇ ಅತಿ ದೊಡ್ಡ ಶ್ರೀಮಂತ ಉದ್ಯಮಿಯಾದರು ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ ಅವರು, ಯಾರಿಗೂ ಸಿಗದ ಪ್ರಯೋಜನಗಳನ್ನು ಗೌತಮ್ ಅದಾನಿ ಅವರಿಗೆ ಹೇಗೆ ದೊರೆಯಿತು. ನಾನು ಕೇವಲ ಪ್ರಧಾನಿ ಮೋದಿ ಮತ್ತು ಗೌತಮ ಅದಾನಿ ಮಧ್ಯೆ ನಂಟೇನು ಎಂದಷ್ಟೇ ಕೇಳಿದ್ದೆ. ಬಿಜೆಪಿಯ ಎಲ್ಲ ಕಾರ್ಯಕರ್ತರು ಅದಾನಿಯನ್ನು ಉಳಿಸಲು ಮುಂದಾದರು. ಅದಾನಿಯನ್ನು ಟೀಕಿಸುವವರೆಲ್ಲರೂ ದೇಶದ್ರೋಹಿಗಳೆಂಬಂತೆ ನೋಡಲಾಗುತ್ತಿದೆ ಎಂದು ಅವರು ತಿಳಿಸಿದರು. ಸಂಸತ್ತಿನಲ್ಲಿ ಯಾರೋಬ್ಬರು ಅದಾನಿ ಕುರಿತು ಪ್ರಶ್ನೆ ಕೇಳುವಂತಿಲ್ಲ. ಆದರೆ, ಸತ್ಯ ಹೊರಬರುವವರೆಗೂ ನಾವು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತವೆ ಎಂದು ಅವರು ತಿಳಿಸಿದ್ದಾರೆ.
ಇಡೀ ಸಂಪತ್ತನ್ನು ಸಂಗ್ರಹಿಸುವ ಮೂಲಕ ಅದಾನಿ ದೇಶದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಎಲ್ಲ ಸಂಪತ್ತು, ಬಂದರು ಮತ್ತಿತರವನ್ನು ತೆಗೆದುಕೊಂಡ ಕಂಪನಿಯ ವಿರುದ್ಧ ಸ್ವಾತಂತ್ರ್ಯ ಹೋರಾಟ ನಡೆಯಿತು. ಈಗ ಮತ್ತೆ ಇತಿಹಾಸ ಮರುಕಳಿಸುತ್ತಿದ್ದು, ಆ ಪರಿಸ್ಥಿತಿ ಮತ್ತೆ ನಿರ್ಮಾಣವಾದರೆ ಕಾಂಗ್ರೆಸ್ ಪಕ್ಷವು ಅದರ ವಿರುದ್ಧ ನಿಲ್ಲಲಿದೆ, ಹೋರಾಟ ಮಾಡಲಿದೆ ಎಂದು ಹೇಳಿದರು.