Site icon Vistara News

Supreme Court | ಪ್ರಧಾನಿ ವಿರುದ್ಧ ಎಲೆಕ್ಷನ್‌ ಕಮಿಷನರ್‌ ಕ್ರಮ ಕೈಗೊಳ್ಳುತ್ತಾರೆಯೇ? ಆ ಶಕ್ತಿ ಇದೆಯೇ? ಎಂದ ಸುಪ್ರೀಂ ಕೋರ್ಟ್

supreme court

supreme court

ನವದೆಹಲಿ: ಚುನಾವಣಾ ಆಯೋಗದ ಮುಖ್ಯ ಆಯುಕ್ತರ(CEC) ನೇಮಕಾತಿ ಸುಧಾರಣೆಯ ಕುರಿತಾದ ಅರ್ಜಿ ವಿಚಾರಣೆಯು ಸುಪ್ರೀಂ ಕೋರ್ಟ್‌ನ (Supreme Court) ಸಾಂವಿಧಾನಿಕ ಪೀಠದಲ್ಲಿ ನಡೆಯುತ್ತಿದ್ದು, ”ಎಲ್ಲ ಸರ್ಕಾರಗಳು ಕೇಂದ್ರ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡಿವೆ. ಪ್ರಧಾನಿಯ ವಿರುದ್ಧವೂ ಕ್ರಮಕೈಗೊಳ್ಳುವ ಅಧಿಕಾರವುಳ್ಳ ಮುಖ್ಯ ಚುನಾವಣಾ ಆಯುಕ್ತರ ಅಗತ್ಯವಿದೆ,” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಈ ನೆಲೆಯಲ್ಲೇ ಸುಪ್ರೀಂ ಕೋರ್ಟ್ ಒಂದು ”ಉಹಾತ್ಮಕ” ಪ್ರಶ್ನೆ ಕೇಳಿದೆ. ”ಚುನಾವಣಾ ಆಯುಕ್ತರೇ ಪ್ರಧಾನಿಯ ವಿರುದ್ಧ ಕ್ರಮಕೈಗೊಳ್ಳಿ ಎಂದರೆ, ನೀವು ತೆಗೆದುಕೊಳ್ಳುವಿರಾ? ಇದು ಉದಾಹರಣೆಯಷ್ಟೇ. ಆದರೆ, ನೀವು ಆ ರೀತಿಯಾಗಿ ಮಾಡಲಾರಿರಿ. ಇದು ವ್ಯವಸ್ಥೆಯ ಅಧಃಪತನವಲ್ಲವೇ,” ಎಂದು ಪ್ರಶ್ನಿಸಿದೆ. ಆ ಮೂಲಕ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದೆ.

ಚುನಾವಣಾ ಆಯುಕ್ತರ ಪೈಕಿ ಒಬ್ಬರು ಅಸಲಿಗೆ ರಾಜೀನಾಮೆಯನ್ನೇ ನೀಡಿದ್ದಾರೆ. ಆ ಆಯುಕ್ತರ ಹೆಸರು ಕೋರ್ಟ್ ಹೆಸರಿಸುವುದಿಲ್ಲ. ಆದರೆ, ನೇಮಕಾತಿಯ ವ್ಯವಸ್ಥೆಯ ಮುಖ್ಯ ಗಮನಕ್ಕಾಗಿ ಕೋರ್ಟ್ ಈ ಬಗ್ಗೆ ಚರ್ಚಿಸುತ್ತಿದೆ. ಆಯುಕ್ತರ ನೇಮಕಕ್ಕೆ ಒಕ್ಕೂಟ ಸರ್ಕಾರದ ಸಚಿವ ಸಂಪುಟ ಮಾತ್ರವಲ್ಲದೇ ವಿಸ್ತೃತ ವ್ಯವಸ್ಥೆಯ ಅಗತ್ಯವಿದೆ. ಈಗಿರುವ ವ್ಯವಸ್ಥೆಯಲ್ಲಿ ಬದಲಾವಣೆ ಈ ಕ್ಷಣದ ಅಗತ್ಯವಾಗಿದೆ ಎಂದು ಪೀಠ ಹೇಳಿತು.

ಆಯುಕ್ತ ಅರುಣ್ ಗೋಯೆಲ್ ಫೈಲ್ ತನ್ನಿ
ಮೊನ್ನೆಯಷ್ಟೇ ಚುನಾವಣಾ ಆಯೋಗಕ್ಕೆ ಆಯುಕ್ತರಾಗಿ ನೇಮಕವಾಗಿರುವ ನಿವೃತ್ತ ಅಧಿಕಾರಿ ಅರುಣ್ ಗೋಯೆಲ್ ಅವರಿಗೆ ಸಂಬಂಧಿಸಿದ ಕಡತವನ್ನು ಹಾಜರು ಪಡಿಸುವಂತೆ ಕೋರ್ಟ್ ಸರ್ಕಾರಕ್ಕೆ ತಿಳಿಸಿತು. ಇತ್ತೀಚೆಗಷ್ಟೇ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡ ವ್ಯಕ್ತಿಯನ್ನು ನೇಮಕ ಮಾಡಲಾಗಿದ್ದು, ಏನಾದರೂ ಹೆಚ್ಚು ಕಡಿಮೆ ಆಗಿದೆಯೇ ಎಂಬುದನ್ನು ಪರೀಕ್ಷಿಸುವುದು ಅಗತ್ಯವಿದೆ ಎಂದು ಪೀಠ ಹೇಳಿದೆ. ಏತನ್ಮಧ್ಯೆ, ಅರ್ಜಿದಾರರಾದ ಪ್ರಶಾಂತ್ ಭೂಷಣ್ ಅವರು ನಿರ್ದಿಷ್ಟವಾಗಿ ಈ ವಿಷಯದಲ್ಲಿ ಕೋರ್ಟ್ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಹೇಳಿದರು.

ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ವಿಸ್ತೃತ ನೆಲೆಯಲ್ಲಿ ವಿಚಾರಣೆ ನಡೆಸುತ್ತಿದ್ದು, ವ್ಯಕ್ತಿಗತವಾಗಿ ಪ್ರಕರಣವನ್ನು ಪರಿಗಣಿಸಬಾರದು ಎಂಬ ಕೇಂದ್ರ ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಲಿಲ್ಲ. ಅಲ್ಲದೇ, ಈ ವಿಷಯದ ವಿಚಾರಣೆಯನ್ನು ನ್ಯಾಯಾಲಯವು ಕಳೆದ ಗುರುವಾರದಿಂದಲೇ ಆರಂಭಿಸಿದೆ. ಆ ಬಳಿಕ ನ.19ರಂದು ಗೋಯೆಲ್ ನೇಮಕಾತಿ ನಡೆದಿದೆ. ಆದ್ದರಿಂದ ನೇಮಕಾತಿಯಲ್ಲಿ ಸರಿಯಾದ ಕ್ರಮಗಳನ್ನು ಅನುಸರಿಸಲಾಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕು ಎಂದು ಕೋರ್ಟ್ ಹೇಳಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ.

‘ಯೆಸ್ ಮ್ಯಾನ್’ ನೇಮಕವಾಗಬೇಕಷ್ಟೇ
ವಿಚಾರಣೆಯ ಹಂತದಲ್ಲಿ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅವರು, ”ಪ್ರತಿ ಸರ್ಕಾರವು ಚುನಾವಣಾ ಆಯೋಗದ ಮುಖ್ಯಸ್ಥರನ್ನಾಗಿ ತನ್ನ ಧೋರಣೆಗೆ ಸರಿ ಹೊಂದುವವರನ್ನು(ಯೆಸ್ ಮ್ಯಾನ್) ಮಾತ್ರವೇ ನೇಮಕ ಮಾಡುತ್ತ ಬಂದಿವೆ. ಈ ಕೆಲಸವನ್ನು ಅಧಿಕಾರದಲ್ಲಿರುವ ಎಲ್ಲ ಪಕ್ಷಗಳು ಮಾಡಿವೆ” ಎಂದು ಹೇಳಿದರು.

ಯಾರು ಮೋಸ ಮಾಡಲು ಸಾಧ್ಯವಿಲ್ಲ
ಏತನ್ಮಧ್ಯೆ ಸರ್ಕಾರವು, ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಈಗಿರುವ ವ್ಯವಸ್ಥೆಯು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಈ ವಿಷಯದಲ್ಲಿ ಕೋರ್ಟ್ ಮಧ್ಯ ಪ್ರವೇಶಿಸುವುದು ಅನಪೇಕ್ಷಿತವಾಗುತ್ತದೆ ಎಂದು ವಾದಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ನೇಮಕಾತಿ ವ್ಯವಸ್ಥೆ ಸರಿಯಾಗಿಲ್ಲ ಎಂದು ಹೇಳುತ್ತಿಲ್ಲ. ಆದರೆ, ಆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ಹೇಳಿತು. ಇದೇ ವೇಳೆ, ಯಾರೋ ಒಬ್ಬ ವಂಚಕನಾಗಲು ಇಲ್ಲವೇ ಠಕ್ಕನಾಗಲು ಇಡೀ ವ್ಯವಸ್ಥೆಯು ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಸಮರ್ಥಿಸಿಕೊಂಡಿತು.

ಇದನ್ನೂ ಓದಿ | Supreme Court | ಟಿ ಎನ್‌ ಶೇಷನ್‌ರಂಥ ದಿಟ್ಟ ಚುನಾವಣಾ ಆಯುಕ್ತರ ಅಗತ್ಯ ಇದೆ ಎಂದ ಸುಪ್ರೀಂ ಕೋರ್ಟ್‌

Exit mobile version