Site icon Vistara News

Robert Vadra: ಸ್ವಂತ ಬಲದಿಂದ ರಾಜಕೀಯಕ್ಕೆ ಬರುವೆ, ಗಾಂಧಿ ಹೆಸರು ಬಳಸಲ್ಲ; ರಾಬರ್ಟ್‌ ವಾದ್ರಾ ಶಪಥ!

Robert Vadra

Kejriwal 'Opportunist', Mani Shankar Aiyar 'Loud Mouth' & Digvijaya Singh 'Inexperienced', Says Robert Vadra

ನವದೆಹಲಿ: ದೇಶದ ಕುತೂಹಲ ಕೆರಳಿಸಿರುವ ಲೋಕಸಭೆ ಚುನಾವಣೆಯು (Lok Sabha Election 2024) ಕೊನೆಯ ಹಂತಕ್ಕೆ ಬಂದಿದೆ. ಈಗಾಗಲೇ ಐದು ಹಂತದ ಮತದಾನ ಮುಕ್ತಾಯಗೊಂಡಿದ್ದು, ಇನ್ನೂ ಎರಡು ಹಂತದ ಮತದಾನ ಬಾಕಿ ಇದೆ. ಜೂನ್‌ 1ರಂದು ಚುನಾವಣೆ ಮುಗಿಯಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಇದರ ಮಧ್ಯೆಯೇ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ (Priyanka Vadra) ಅವರ ಪತಿ ರಾಬರ್ಟ್‌ ವಾದ್ರಾ (Robert Vadra) ಅವರು ರಾಜಕೀಯ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, “ನನ್ನ ಹೆಸರು, ನನ್ನ ಕೆಲಸದಿಂದ ರಾಜಕೀಯ ಪ್ರವೇಶಿಸುತ್ತೇನೆ. ಗಾಂಧಿ ಕುಟುಂಬದ (Gandhi Family) ಹೆಸರು ಬಳಸಿ ರಾಜಕೀಯಕ್ಕೆ ಬರಲ್ಲ” ಎಂದಿದ್ದಾರೆ.

ಎಎನ್‌ಐ ಜತೆ ಮಾತನಾಡುವಾಗ, ನೀವು ರಾಜಕೀಯ ಪ್ರವೇಶಿಸಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. “ನಾನು ದೇಶದ ಸೇವೆ ಮಾಡುತ್ತಿದ್ದೇನೆ. ನಾನು ರಾಜಕೀಯ ಪ್ರವೇಶಿಸುವುದಿದ್ದರೆ, ನನ್ನ ಸಮಾಜ ಸೇವೆ, ನನ್ನ ಕೆಲಸ ಹಾಗೂ ನನ್ನ ಹೆಸರು ಬಳಸಿ ಪ್ರವೇಶಿಸುತ್ತೇನೆ. ಗಾಂಧಿ ಕುಟುಂಬದ ಹೆಸರು ಬಳಸಿಕೊಂಡು ನಾನು ರಾಜಕೀಯ ಪ್ರವೇಶಿಸುವುದಿಲ್ಲ. ಹೀಗೆ ಹೇಳಿದ ಮಾತ್ರಕ್ಕೆ ನಾನು ಗಾಂಧಿ ಕುಟುಂಬದ ಸದಸ್ಯ ಅಲ್ಲ ಎಂಬ ಅರ್ಥವಲ್ಲ. ಆದರೆ, ನನ್ನ ಹೆಸರು ಬಳಸಿಯೇ ನಾನು ರಾಜಕೀಯ ಪ್ರವೇಶಿಸುತ್ತೇನೆ” ಎಂದು ಹೇಳಿದರು.

“ರಾಜಕೀಯದಲ್ಲಿ ಬದಲಾವಣೆಯಾಗಬೇಕಿದೆ. ನಾನು ರೈತರು, ಬಡವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹೌದು, ಸೋನಿಯಾ ಗಾಂಧಿ ಸೇರಿ ಗಾಂಧಿ ಕುಟುಂಬದ ಹೆಸರು ಬಳಸಿದರೆ, ಅವರಿಂದ ಸಲಹೆ ಪಡೆದರೆ ನನಗೆ ಅನುಕೂಲವಾಗಬಹುದು. ಆದರೆ, ನನ್ನ ಕೆಲಸದಿಂದ ನಾನು ರಾಜಕೀಯಕ್ಕೆ ಬರಲು ಇಷ್ಟಪಡುತ್ತೇನೆ. ಹಾಗಂತ, ರಾಜಕೀಯ ಪ್ರವೇಶಿಸಲು ನಾನು ಸಮಾಜ ಸೇವೆ ಮಾಡುತ್ತಿಲ್ಲ. ಸೇವೆಯು ನನಗೆ ಖುಷಿ ಕೊಡುವ ವಿಚಾರವಾಗಿದೆ” ಎಂದು ಸಂದರ್ಶನದ ವೇಳೆ ಹೇಳಿದರು.

ಇದೇ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ಕೂಡ ರಾಬರ್ಟ್‌ ವಾದ್ರಾ ವಾಗ್ದಾಳಿ ನಡೆಸಿದರು. “ಕಳೆದ 10 ವರ್ಷಗಳಿಂದ ದೇಶದ ರಾಜಕೀಯ ವ್ಯವಸ್ಥೆಯನ್ನು ಜನ ನೋಡಿದ್ದಾರೆ. ಅಭಿವೃದ್ಧಿ ಹೊರತುಪಡಿಸಿ, ಧರ್ಮದ ಆಧಾರದ ಮೇಲೆ ರಾಜಕೀಯ ನಡೆಯುತ್ತಿದೆ. ನಾನು ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಬಿಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಇ.ಡಿ ದಾಳಿ ನಡೆಯುತ್ತದೆ. ಆದರೆ, ಇದೆಲ್ಲದರ ಮಧ್ಯೆ ನಾನು ಸೇವೆ ಮುಂದುವರಿಸಿದ್ದೇನೆ. ನಾನು ರಾಜಕೀಯಕ್ಕೆ ಬಂದ ತಕ್ಷಣ ಎಲ್ಲವೂ ಬದಲಾಗಲಿದೆ ಎಂದು ಹೇಳುವುದಿಲ್ಲ. ಸೇವೆಗಾಗಿ ನಾನು ರಾಜಕೀಯ ಪ್ರವೇಶಿಸಲು ಬಯಸುತ್ತೇನೆ” ಎಂದು ಹೇಳಿದರು. ರಾಬರ್ಟ್‌ ವಾದ್ರಾ ಅವರು ಅಮೇಥಿ ಅಥವಾ ರಾಯ್‌ಬರೇಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದನ್ನೂ ಓದಿ: Narendra Modi: ಡ್ರಮ್‌, ಜಾಗಟೆ ಬಾರಿಸಿ, ಹಾಡು ಹಾಡಿ; ಮತದಾನ ಹೆಚ್ಚಿಸಲು ಸ್ತ್ರೀಯರಿಗೆ ಕರೆ ಕೊಟ್ಟ ಮೋದಿ

Exit mobile version