ನವದೆಹಲಿ: ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳ ಮೊದಲು ತಮ್ಮದೇ ಸರ್ಕಾರದ ವಿರುದ್ಧ ಜನ ಸಂಘರ್ಷ ಯಾತ್ರೆ ನಡೆಸುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದ ಸಚಿನ್ ಪೈಲಟ್ ಅವರ ಮುನಿಸು ಶಮನಗೊಳಿಸುವ ದಿಸೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಸಭೆ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ಬಿಕ್ಕಟ್ಟನ್ನು ಕಾಂಗ್ರೆಸ್ ನಾಯಕರು ಶಮನಗೊಳಿಸಿದ್ದು, ಇಬ್ಬರೂ ಒಗ್ಗೂಡಿ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಒಪ್ಪಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಸಭೆ ನಡೆದಿದೆ. ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಜತೆ ನಡೆದ ಸಭೆಯಲ್ಲಿ ಬಿಕ್ಕಟ್ಟು ಶಮನಗೊಳಿಸಲಾಗಿದೆ. ಸಭೆ ಮುಗಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಸಿ.ವೇಣುಗೋಪಾಲ್, “ನಾವು ಒಗ್ಗೂಡಿ ಚುನಾವಣೆಯನ್ನು ಎದುರಿಸುತ್ತೇವೆ. ಗೆಹ್ಲೋಟ್ ಹಾಗೂ ಪೈಲಟ್ ಅವರು ಕೂಡ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಒಪ್ಪಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಗೆಲುವು ನಮ್ಮದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆ ಬಳಿಕ ವೇಣುಗೋಪಾಲ್ ಮಾಹಿತಿ
#WATCH | Delhi: We have decided to fight elections unitedly. Definitely, we will win the elections in Rajasthan. Both Ashok Gehlot and Sachin Pilot have unanimously agreed with the proposal, says Congress General Secretary KC Venugopal after Congress chief Kharge and Rahul… pic.twitter.com/OIS4O3bcR2
— ANI (@ANI) May 29, 2023
ಗೆಹ್ಲೋಟ್ ವರ್ಸಸ್ ಪೈಲಟ್
ರಾಜಸ್ಥಾನದಲ್ಲಿ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ಮುಗಿಯುವತನಕ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಚುನಾವಣೆ ನಡೆದು, ಕಾಂಗ್ರೆಸ್ ಗೆಲುವು ಸಾಧಿಸಿ, ಅಶೋಕ್ ಗೆಹ್ಲೋಟ್ ಅವರೇ ಸಿಎಂ ಆಗುವುದು ಎಂಬುದು ನಿಶ್ಚಿತವಾಯಿತೋ, ಆಗ ಸಚಿನ್ ಪೈಲಟ್ ಸಿಡಿದೆದ್ದರು. ರಾಜಸ್ಥಾನದಲ್ಲಿ ಚುನಾವಣೆ ನಡೆದಾಗ ಪ್ರದೇಶ ಕಾಂಗ್ರೆಸ್ ಸಮಿತಿಗೆ ಸಚಿನ್ ಪೈಲಟ್ ಅಧ್ಯಕ್ಷರಾಗಿದ್ದರು. ಅದರಲ್ಲೂ, 2013ರಲ್ಲಿ 21 ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್ ಬಲಪಡಿಸಿದ್ದೇ ನಾನು, ನಾನು ರಾಜ್ಯಾಧ್ಯಕ್ಷನಾಗಿದ್ದಾಗ ಪಕ್ಷ ಗೆದ್ದಿದೆ. ಹಾಗಾಗಿ, ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಪೈಲಟ್ ಪಟ್ಟು ಹಿಡಿದಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ, ಹಿರಿಯರು ಹಾಗೂ ಅನುಭವಿಯಾದ ಅಶೋಕ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿತು. ಸಚಿನ್ ಪೈಲಟ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆರ್‌ಪಿಸಿಸಿ ಅಧ್ಯಕ್ಷ ಸ್ಥಾನವೂ ಪೈಲಟ್ ಬಳಿಯೇ ಉಳಿಯಿತು. ಆದರೆ, ಪೈಲಟ್ ಅಸಮಾಧಾನ ಮಾತ್ರ ಶಮನವಾಗಿರಲಿಲ್ಲ.
ಇದನ್ನೂ ಓದಿ: ‘ಸಚಿನ್ ಪೈಲಟ್ರಂಥ ಸಿಎಂ ಬೇಕು’; ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಎದುರೇ ಮೊಳಗಿತು ಯುವಕರ ಘೋಷಣೆ
2020ರಲ್ಲಿ ಬಂಡಾಯವೆದ್ದ ಪೈಲಟ್
ಅಶೋಕ್ ಗೆಹ್ಲೋಟ್ ಅವರು ಸಿಎಂ ಆದಾಗಿನಿಂದಲೂ ಪೈಲಟ್ ಅವರಿಗೆ ಸಮಾಧಾನ ಇರಲಿಲ್ಲ. ಹಾಗಾಗಿ, 2020ರಲ್ಲಿ ಅವರು ಗೆಹ್ಲೋಟ್ ವಿರುದ್ಧ ಬಂಡಾಯವೆದ್ದರು. ತಮ್ಮ ಆಪ್ತ ಶಾಸಕರನ್ನು ಕರೆದುಕೊಂಡು ಹೋಗಿ ಬಿಜೆಪಿ ಆಡಳಿತದ ಹರಿಯಾಣದ ಹೋಟೆಲ್‌ನಲ್ಲಿ ಬೀಡುಬಿಟ್ಟರು. ನನ್ನ ಪರ 30 ಶಾಸಕರಿದ್ದಾರೆ ಎಂದೆಲ್ಲ ಹೇಳಿ ಸರ್ಕಾರವನ್ನು ಆತಂಕಕ್ಕೆ ದೂಡಿದರು. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿ ಮಾಡಿದ ಷಡ್ಯಂತ್ರ ಇದು ಎಂಬ ಮಾತುಗಳು ಕೂಡ ಕೇಳಿಬಂದವು. ಆದರೆ, ಗೆಹ್ಲೋಟ್ ಅವರು 15 ಶಾಸಕರನ್ನು ಕೂಡ ಸೆಳೆಯುವಲ್ಲಿ ವಿಫಲರಾದರು. ಕೊನೆಗೆ, ಪಕ್ಷವು ಪೈಲಟ್ ಅವರಿಂದ ಡಿಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನೂ ಕಸಿದುಕೊಂಡಿತು. ಇಷ್ಟಾದರೂ ಸಚಿನ್ ಪೈಲಟ್ ಬಂಡಾಯದ ಬಾವುಟ ಹಾರಿಸುವುದನ್ನು ನಿಂತಿಲ್ಲ.