Site icon Vistara News

ಮಹಾರಾಷ್ಟ್ರದ ಮೈತ್ರಿ ಸರಕಾರ: ಉರುಳುವುದೇ? ಉಳಿಯುವುದೇ?

ಏಕನಾಥ ಶಿಂಧೆ

ಮುಂಬಯಿ: ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟ ಸರಕಾರದ ಎದುರಿಸುತ್ತಿರುವ ಮಹಾ ಬಂಡಾಯದ ಅಂತಿಮ ಫಲಿತಾಂಶ ಏನಾಗಬಹುದು? ಶಿವಸೇನೆ-ಎನ್‌ಸಿಪಿ- ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಸರಕಾರವನ್ನು ಏಕನಾಥ ಶಿಂಧೆ ಮತ್ತು ಟೀಮ್‌ ಉರುಳಿಸಿಯೇ ಬಿಡುತ್ತದಾ? ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್‌ ಅವರ ಬಹುಕಾಲದ ಕನಸು ನನಸಾಗುತ್ತದಾ? ಶಿವಸೇನೆ ತನ್ನೊಳಗೆ ಹುಟ್ಟಿಕೊಂಡಿರುವ ಬೆಂಕಿಯನ್ನು ಆರಿಸಲು ಸಮರ್ಥವಾಗಬಹುದಾ? ಶಿಂಧೆ ಬಂಡಾಯದ ಹೊರತಾಗಿಯೂ ಸರಕಾರವನ್ನು ಉಳಿಸಿಕೊಳ್ಳಲು ಅಘಾಡಿ ಮೈತ್ರಿ ಕೂಟ ಯಶಸ್ವಿಯಾದೀತೇ? ಇವು ಈಗ ಎದ್ದು ನಿಂತಿರುವ ಪ್ರಮುಖ ಪ್ರಶ್ನೆಗಳು.

ಯಾವುದೇ ಸರಕಾರದ ಅಳಿವು ಉಳಿವಿನ ಪ್ರಶ್ನೆ ನಿಂತಿರುವುದು ವಿಧಾನಸಭೆಯಲ್ಲಿರುವ ಶಾಸಕರ ಸಂಖ್ಯಾ ಬಲದ ಆಧಾರದಲ್ಲಿ. ಏಕನಾಥ ಶಿಂಧೆ ಬಂಡಾಯದ ಪೂರ್ವದಲ್ಲಿ ೨೮೮ ಸದಸ್ಯ ಬಲದ ಸದನದಲ್ಲಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟದಲ್ಲಿ ೧೬೯ ಶಾಸಕರಿದ್ದರೆ, ಬಿಜೆಪಿ ನೇತೃತ್ವದ ಮೈತ್ರಿಕೂಟದಲ್ಲಿದ್ದುದು ಕೇವಲ 113 ಮಾತ್ರ. ಉಳಿದಂತೆ ಯಾವ ಕೂಟವನ್ನೂ ಸೇರದ ಐವರು ಶಾಸಕರಿದ್ದಾರೆ. ೨೮೮ ಸ್ಥಾನಗಳ ಪೈಕಿ ಒಂದು ಸ್ಥಾನ ಖಾಲಿಯಾಗಿದೆ. ಎನ್‌ಸಿಪಿಯ ಇಬ್ಬರು ಶಾಸಕರು ಜೈಲಿನಲ್ಲಿದ್ದಾರೆ. ಒಂದೊಮ್ಮೆ ಸದನದಲ್ಲಿ ಬಲಾಬಲ ಪರೀಕ್ಷೆ ನಡೆದರೆ ವಿಶ್ವಾಸಮತ ಗೆಲ್ಲಲು ೧೪೩ ಶಾಸಕರ ಬಲ ಬೇಕು.

ಶಿಂಧೆ ಜತೆ ಎಷ್ಟು ಶಾಸಕರಿದ್ದಾರೆ?
ಸೋಮವಾರ ರಾತ್ರಿ ೧.೩೦ಕ್ಕೆ ಗುಜರಾತ್‌ನ ಸೂರತ್‌ನ ರೆಸಾರ್ಟ್‌ ತಲುಪಿದ ನಗರಾಭಿವೃದ್ಧಿ ಖಾತೆ ಸಚಿವ ಏಕನಾಥ ಶಿಂಧೆ ಅವರ ತಂಡದಲ್ಲಿ ೨೬ ಮಂದಿ ಶಿವಸೇನೆ ಶಾಸಕರಿದ್ದಾರೆ ಎಂಬ ಮಾಹಿತಿ ಇದೆ. ಗುಜರಾತ್‌ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್‌. ಪಾಟೀಲ್‌ ಅವರ ನೇತೃತ್ವದಲ್ಲಿ ಅವರೆಲ್ಲರನ್ನೂ ಬಿಜೆಪಿ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ ಎಂದು ಹೇಳಲಾಗಿದೆ. ಈ ತಂಡದ ಜತೆಗೆ ಸದ್ಯ ಮೈತ್ರಿ ಕೂಟ ಸರಕಾರಕ್ಕೆ ಬೆಂಬಲ ನೀಡಿರುವ ಐವರು ಪಕ್ಷೇತರರು ಕೈಜೋಡಿಸಿದ್ದಾರೆ ಎಂಬ ಸುದ್ದಿ ಹರಡಿದೆ. ಅಂದರೆ, ಒಟ್ಟು ೩೧ ಮಂದಿ ಶಿವಸೇನೆ ಸರಕಾರದ ವಿರುದ್ಧ ಸಿಡಿದೆದ್ದಿದ್ದಾರೆ ಎಂದಾಯಿತು.

ಒಂದೊಮ್ಮೆ ಇದು ನಿಜವಾಗಿದ್ದರೆ, ಅಘಾಡಿ ಸರಕಾರ ಉರುಳುವುದು ಗ್ಯಾರಂಟಿ. ಏಕನಾಥ ಶಿಂಧೆ ಬಂಡಾಯ ಯಶಸ್ವಿಯಾದರೆ, ಪಕ್ಷೇತರರು ಬೆಂಬಲ ನೀಡಿದರೆ ಸದನದಲ್ಲಿ ಮೈತ್ರಿಕೂಟದ ಬಲ ೧೬೯ರಿಂದ ೧೩೬ಕ್ಕೆ ಇಳಿಯಲಿದೆ. ಅದೇ ಹೊತ್ತಿಗೆ ಬಿಜೆಪಿ ಬಲ ೧೪೪ಕ್ಕೇರಿಲಿದೆ. ಇದು ಮ್ಯಾಜಿಕ್‌ ಸಂಖ್ಯೆಯನ್ನು ಮೀರುತ್ತದೆ.

ಆದರೆ, ಮರು ಚುನಾವಣೆ ಅಗತ್ಯ
ಒಂದು ವೇಳೆ ಇಷ್ಟೊಂದು ಸಂಖ್ಯೆಯ ಶಾಸಕರು ಬಿಜೆಪಿ ಕಡೆಗೆ ಒಲವು ಬದಲಿಸಿದರೂ ಶಿವಸೇನೆಯಿಂದ ಬಂದವರು ಮತ್ತೆ ಚುನಾವಣೆ ಎದುರಿಸುವುದು ಅನಿವಾರ್ಯವಾಗುತ್ತದೆ. ಯಾಕೆಂದರೆ, ಅವರ ಮೇಲೆ ಪಕ್ಷಾಂತರ ನಿಷೇಧ ಕಾಯಿದೆಯನ್ನು ಅನ್ವಯಗೊಳಿಸಬಹುದು. ಹಾಗೆ ಮಾಡಿದರೆ ಅವರು ತಮ್ಮ ಶಾಸಕತ್ವ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ. ಅವರು ಆರು ತಿಂಗಳ ಒಳಗೆ ಮತ್ತೊಮ್ಮೆ ಚುನಾವಣೆ ಎದುರಿಸಿ ಗೆದ್ದು ಬರಬೇಕಾಗುತ್ತದೆ.

ಶಿವಸೇನೆ ವಿಭಜನೆ ಸಾಧ್ಯತೆ ಎಷ್ಟು?
ಈ ನಡುವೆ ಉದ್ಧವ್‌ ಠಾಕ್ರೆ ನೇತೃತ್ವದಲ್ಲಿರುವ ಶಿವಸೇನೆ ಪಕ್ಷ ನೇರವಾಗಿ ವಿಭಜನೆ ಆಗುವ ಸಾಧ್ಯತೆಯೂ ಕಂಡುಬಂದಿದೆ. ಸದ್ಯ ಏಕನಾಥ ಶಿಂಧೆ ಬಣದಲ್ಲಿ ೨೬ ಶಾಸಕರಿದ್ದಾರೆ ಎಂದು ಹೇಳಲಾಗಿದೆ. ಒಂದು ವೇಳೆ ಈ ಸಂಖ್ಯೆ ೩೬ಕ್ಕೇರಿದರೆ ಶಿವಸೇನೆ ನೇರ ವಿಭಜನೆ ಸರಾಗವಾಗುತ್ತದೆ. ಆಗ ಅದನ್ನು ಶಿವಸೇನೆಯಿಂದ ಪ್ರತ್ಯೇಕವಾದ ಬಣವೆಂದು ಗುರುತಿಸಲು ಸಾಧ್ಯವಿದೆ. ಈ ಲೆಕ್ಕಾಚಾರ ಹೇಗೆಂದರೆ, ಶಿವಸೇನೆಯಲ್ಲಿ ಈಗ ೫೬ ಶಾಸಕರಿದ್ದಾರೆ. ಅವರಲ್ಲಿ ಮೂರನೇ ಎರಡು ಪಾಲು (೩೬) ಮಂದಿ ಬೇರೆಯಾಗಲು ಬಯಸಿದರೆ ಕಾನೂನುಬದ್ಧವಾಗಿ ಪಕ್ಷ ವಿಭಜನೆ ನಡೆಯಲು ಅವಕಾಶವಿದೆ.

ಸದ್ಯದ ಬಲಾಬಲ ಹೇಗಿದೆ?
ಮಹಾರಾಷ್ಟ್ರ ವಿಕಾಸ ಅಘಾಡಿ ಮೈತ್ರಿಕೂಟ: ೧೬೯
ಶಿವಸೇನೆ-೫೬, ಎನ್‌ಸಿಪಿ- ೫೩, ಕಾಂಗ್ರೆಸ್‌-೪೪, ಬಹುಜನ ವಿಕಾಸ ಅಘಾಡಿ-೩, ಎಸ್‌ಪಿ-೨, ಪಿಜೆಪಿ-೨, ಪಿಡಬ್ಲ್ಯುಪಿಐ-೧, ಪಕ್ಷೇತರರು-೮

ಬಿಜೆಪಿ ಮಿತ್ರಕೂಟ: ೧೧೩
ಬಿಜೆಪಿ-೧೦೬, ಆರ್‌ಎಸ್ಪಿ-೧, ಜೆಎಸ್‌ಎಸ್‌-೧, ಪಕ್ಷೇತರರು-೫

ಯಾವ ಕೂಟಕ್ಕೂ ಸೇರದವರು: ೫
ಎಐಎಂಐಎಂ-೦೨, ಸಿಪಿಐಎಂ-೧, ಎಂಎನ್‌ಎಸ್‌-೧, ಎಸ್‌ಡಬ್ಲ್ಯುಪಿ-೧

ಇದನ್ನೂ ಓದಿ| ಮಹಾರಾಷ್ಟ್ರ ಮಹಾ ಅʼಗಾಡಿʼ ಸರ್ಕಾರ ಪಂಕ್ಚರ್‌?; ಶುರುವಾದಂತಿದೆ ಆಪರೇಶನ್‌ ಕಮಲ !

Exit mobile version