ಪಟನಾ: ಬಿಹಾರದಲ್ಲಿ ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು, ಆರ್‌ಜೆಡಿ ಜತೆ ಸರ್ಕಾರ ರಚಿಸಿ, ೨೦೨೪ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಮುಂದಾಗಿರುವ ನಿತೀಶ್ ಕುಮಾರ್ (Nitish Kumar) ಅವರು ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಜೋರಾಗಿವೆ. ಇದರ ಬೆನ್ನಲ್ಲೇ ನಿತೀಶ್ ಕುಮಾರ್ ಸ್ಪಷ್ಟನೆ ನೀಡಿದ್ದು, “ಇದು ಕೇವಲ ವದಂತಿ” ಎಂದಿದ್ದಾರೆ.
“೨೦೨೪ರ ಲೋಕಸಭೆ ಚುನಾವಣೆ ವೇಳೆಗೆ ಪ್ರತಿಪಕ್ಷಗಳನ್ನು ಒಗ್ಗೂಡಿಸುವುದಷ್ಟೇ ನನ್ನ ಗುರಿಯಾಗಿದೆ. ಅದರ ದಿಸೆಯಲ್ಲಿ ಮಾತ್ರ ಕೆಲಸ ಮಾಡುತ್ತಿದ್ದೇನೆ. ಉತ್ತರ ಪ್ರದೇಶದಿಂದ ಸ್ಪರ್ಧಿಸುವ ಕುರಿತು ಹರಡಿರುವುದು ಕೇವಲ ವಂದತಿಯಾಗಿದೆ. ಇಂತಹ ಸುದ್ದಿ ತಿಳಿದು ನನಗೇ ಅಚ್ಚರಿಯಾಗಿದೆ” ಎಂದು ನಿತೀಶ್ ಸ್ಪಷ್ಟಪಡಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿಯಾಗುತ್ತಾರೆ. ಹಾಗಾಗಿಯೇ ಅವರು ಪ್ರತಿಪಕ್ಷಗಳನ್ನು ಒಗ್ಗೂಡಿಸುತ್ತಿದ್ದಾರೆ. ಕೆಲ ರಾಜ್ಯಗಳ ಸ್ಥಳೀಯ ನಾಯಕರ ಮನಸೆಳೆದು ಪ್ರತಿಪಕ್ಷಗಳನ್ನು ಬಲಿಷ್ಠಗೊಳಿಸುತ್ತಿದ್ದಾರೆ. ಅಲ್ಲದೆ, ಅವರು ಉತ್ತರ ಪ್ರದೇಶದ ಫೂಲ್‌ಪುರದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ ಎಂಬೆಲ್ಲ ಮಾತುಗಳು ಕೇಳಿಬಂದಿದ್ದವು.
ಇದನ್ನೂ ಓದಿ | ಬಿ.ಎಲ್.ಸಂತೋಷ್ ಉಪಸ್ಥಿತಿಯಲ್ಲಿ ದಾದ್ರಾ, ನಗರ ಹವೇಲಿ ಜೆಡಿಯು ಬಿಜೆಪಿ ಜತೆ ವಿಲೀನ, ನಿತೀಶ್ ಕುಮಾರ್‌ಗೆ ಸಡ್ಡು