Site icon Vistara News

‘ಪುರಿ ಜಗನ್ನಾಥನೇ ಮೋದಿಯ ಭಕ್ತ’ ಹೇಳಿಕೆ; ಪ್ರಾಯಶ್ಚಿತ್ತವಾಗಿ ಸಂಬಿತ್‌ ಪಾತ್ರಾ 3 ದಿನ ಉಪವಾಸ!

Sambit Patra

Will observe fast as penance: BJP's Sambit Patra apologises for calling Lord Jagannath devotee of PM Narendra Modi

ಭುವನೇಶ್ವರ: “ಒಡಿಶಾದಲ್ಲಿರುವ ಐತಿಹಾಸಿಕ ಪುರಿ ಜಗನ್ನಾಥನೇ (Lord Jagannath) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಭಕ್ತ” ಎಂಬುದಾಗಿ ಬಿಜೆಪಿ ನಾಯಕ, ಪುರಿ ಅಭ್ಯರ್ಥಿ ಸಂಬಿತ್‌ ಪಾತ್ರಾ (Sambit Patra) ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ವಿವಾದ ಉಂಟಾದ ಬೆನ್ನಲ್ಲೇ, “ಸಂಬಿತ್‌ ಪಾತ್ರಾ ಅವರು ತಮ್ಮ ಹೇಳಿಕೆ ಕುರಿತಂತೆ ಕ್ಷಮೆ ಕೇಳಿದ್ದಾರೆ. ಹಾಗೆಯೇ, ಅಂತಹ ಹೇಳಿಕೆ ನೀಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಮೂರು ದಿನ ಉಪವಾಸ ಕೂಡ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

ವಿವಾದಾತ್ಮಕ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎನ್‌ಐ ಸುದ್ದಿ ಸಂಸ್ಥೆ ಜತೆ ಮಾತನಾಡಿರುವ ಹಾಗೂ ವಿಡಿಯೊ ಹೇಳಿಕೆ ಕೂಡ ಬಿಡುಗಡೆ ಮಾಡಿರುವ ಸಂಬಿತ್‌ ಪಾತ್ರಾ ಅವರು, ಮೊದಲು ಕ್ಷಮೆಯಾಚಿಸಿದ್ದಾರೆ. “ದೇವರೇ ಮನುಷ್ಯನಿಗೆ ಭಕ್ತನಾಗಲು ಸಾಧ್ಯವಿಲ್ಲ. ನಾನು ಸುದ್ದಿ ವಾಹಿನಿ ಜತೆ ಮಾತನಾಡುವಾಗ ಬಾಯ್ತಪ್ಪಿನಿಂದಾಗಿ ಜಗನ್ನಾಥನೇ ಮೋದಿ ಅವರ ಭಕ್ತ ಎಂಬುದಾಗಿ ಹೇಳಿದೆ. ನಿಜವಾಗಿಯೂ, ಭಕ್ತರ ಭಾವನೆಗಳಿಗೆ ಧಕ್ಕೆ ತರುವುದು ನನ್ನ ಉದ್ದೇಶ ಆಗಿರಲಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾದರೆ ಕ್ಷಮೆ ಕೇಳುತ್ತೇನೆ. ಅಲ್ಲದೆ, ಪ್ರಾಯಶ್ಚಿತ್ತವಾಗಿ ನಾನು ಮೂರು ದಿನ ಉಪವಾಸ ಕೈಗೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.

ಸಂಬಿತ್‌ ಪಾತ್ರಾ ಹೇಳಿದ್ದೇನು?

“ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಲು ಲಕ್ಷಾಂತರ ಜನ ಸೇರಿದ್ದಾರೆ. ಜಗನ್ನಾಥನೇ ನರೇಂದ್ರ ಮೋದಿ ಅವರ ಭಕ್ತನಾಗಿದ್ದಾನೆ. ನಾವೆಲ್ಲರೂ ಮೋದಿ ಅವರ ಕುಟುಂಬಸ್ಥರು. ನಾನು ನನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಇದು ಒಡಿಶಾದ ಎಲ್ಲ ಜನರಿಗೂ ಐತಿಹಾಸಿಕ ದಿನವಾಗಿದೆ” ಎಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಸಂಬಿತ್‌ ಪಾತ್ರ ಹೇಳಿದ್ದರು. ನರೇಂದ್ರ ಮೋದಿ ಅವರು ಪುರಿ ಜಗನ್ನಾಥ ದೇವಾಲಯಕ್ಕೆ ತೆರಳಿ, ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಂಬಿತ್‌ ಪಾತ್ರಾ ಇಂತಹ ಹೇಳಿಕೆ ನೀಡಿದ್ದರು. ವಿವಾದದ ಬಳಿಕ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದು, ಇದು ಬಾಯ್ತಪ್ಪಿನಿಂದ ನೀಡಿದ ಹೇಳಿಕೆ ಎಂದು ಸ್ಪಷ್ಟನೆ ನೀಡಿದ್ದರು

ಸಂಬಿತ್‌ ಪಾತ್ರ ಹೇಳಿಕೆಗೆ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ತಿರುಗೇಟು ನೀಡಿದ್ದರು. “ಭಗವಾನ್‌ ಶ್ರೀ ಜಗನ್ನಾಥನು ಇಡೀ ಸೃಷ್ಟಿಗೆ ದೇವರಾಗಿದ್ದಾನೆ. ದೇವರನ್ನೇ ಮನುಷ್ಯನ ಭಕ್ತ ಎಂದು ಕರೆದಿರುವುದು ಅಪಸವ್ಯ ಹಾಗೂ ದೇವರಿಗೆ ಮಾಡಿದ ಅವಮಾನವಾಗಿದೆ. ಇದು ಒಡಿಶಾ ಹಾಗೂ ಜಗತ್ತಿನಾದ್ಯಂತ ಇರುವ ಜಗನ್ನಾಥನ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಯಾಗಿದೆ” ಎಂದು ಟೀಕಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಸಂಬಿತ್‌ ಪಾತ್ರಾ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಪ್ರತಿಪಕ್ಷಗಳ ನಾಯಕರಂತೂ ಸಂಬಿತ್‌ ಪಾತ್ರಾ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ: Prashant Kishor: ಮೋದಿ ಮೇಲೆ ಜನರಿಗೆ ಎಳ್ಳಷ್ಟೂ ಸಿಟ್ಟಿಲ್ಲ ಎಂದ ಪ್ರಶಾಂತ್‌ ಕಿಶೋರ್;‌ ಕೊಟ್ಟ ಕಾರಣ ಹೀಗಿದೆ

Exit mobile version