ಚೆನ್ನೈ: ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂ, ಕೊರೊನಾಗೆ ಹೋಲಿಸಿ ದೇಶಾದ್ಯಂತ ಭಾರಿ ವಿವಾದಕ್ಕೆ ಗುರಿಯಾಗಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಈಗ ಮತ್ತೆ ಸನಾತನ ಧರ್ಮದ (Sanatana Dharma) ಕುರಿತು ಮಾತನಾಡಿದ್ದಾರೆ. “ನಾನು ಎಂದಿಗೂ ಸನಾತನ ಧರ್ಮವನ್ನು ವಿರೋಧಿಸುತ್ತೇನೆ” ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್ ಹಾಗೂ ಪಿ.ಕೆ. ಶೇಖರ್ ಬಾಬು ಅವರ ವಿರುದ್ಧ ಕ್ರಮ ತೆಗೆದುಕೊಳ್ಳದ ಕಾರಣ ಪೊಲೀಸರ ವಿರುದ್ಧ ಮದ್ರಾಸ್ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಉದಯನಿಧಿ ಸ್ಟಾಲಿನ್ ಹೀಗೆ ಹೇಳಿದ್ದಾರೆ. “ಸನಾತನ ಧರ್ಮದ ವಿಷಯದ ಕುರಿತು ಹಲವು ವರ್ಷಗಳಿಂದ ಚರ್ಚೆಯಾಗುತ್ತಿದೆ. ನಾವು ಕೂಡ ಹಲವು ಬಾರಿ ಮಾತನಾಡಿವೆ. ನೀಟ್ ವಿಷಯವು ಆರು ವರ್ಷಗಳಿಂದ ಮಾತ್ರ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ನಾನು ಯಾವಾಗಲೂ ಸನಾತನ ಧರ್ಮವನ್ನು ವಿರೋಧಿಸುತ್ತೇನೆ” ಎಂದು ತಿಳಿಸಿದ್ದಾರೆ.
“ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ, ಯಾವ ತಪ್ಪನ್ನೂ ಮಾಡಿಲ್ಲ. ನಾನು ಸರಿಯಾದದ್ದನ್ನೇ ಹೇಳಿದ್ದೇನೆ ಹಾಗೂ ಕಾನೂನು ಹೋರಾಟ ಮಾಡುತ್ತೇನೆ. ನಾನು ನನ್ನ ಹೇಳಿಕೆಯನ್ನು ವಾಪಸ್ ಪಡೆಯುವುದಿಲ್ಲ. ಅಂಬೇಡ್ಕರ್, ಪೆರಿಯಾರ್ ಅಥವಾ ತಿರುಮಾವಳವನ್ ಅವರಿಗಿಂತ ಜಾಸ್ತಿ ಏನೂ ಹೇಳಿಲ್ಲ. ನಾನು ಶಾಸಕ ಆಗಿರಬಹುದು, ಸಚಿವ ಅಥವಾ ಯುವ ಘಟಕದ ಕಾರ್ಯದರ್ಶಿ ಆಗಿರಬಹುದು ಹಾಗೂ ಮುಂದೆ ಯಾವ ಹುದ್ದೆಯೂ ಉಳಿಯದಿರಬಹುದು. ಆದರೆ, ಮನುಷ್ಯನಾಗಿರುವುದು ತುಂಬ ಮುಖ್ಯ” ಎಂದಿದ್ದಾರೆ.
"Nobody has right to eradicate any ideology": Madras High Court refuses to allow meet for eradication of Dravidian ideology, also laments inaction by TN govt against Sanatana Dharma eradication meet
— Bar & Bench (@barandbench) November 6, 2023
Read story here: https://t.co/APvvMwM2kc pic.twitter.com/Aaei7GGVF8
ಮದ್ರಾಸ್ ಹೈಕೋರ್ಟ್ ಹೇಳಿದ್ದೇನು?
ದ್ರಾವಿಡ ಸಿದ್ಧಾಂತದ ನಿರ್ಮೂಲನೆ ಕುರಿತು ಸಂವಾದ ಏರ್ಪಡಿಸಲು ಅನುಮತಿ ನೀಡಬೇಕು ಎಂದು ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, “ಯಾವುದೇ ಸಿದ್ಧಾಂತವನ್ನು ನಿರ್ಮೂಲನೆ ಮಾಡಲು ಆಗುವುದಿಲ್ಲ. ರಾಜಕಾರಣಿಗಳೂ ಅಷ್ಟೇ, ಅಧಿಕಾರದಲ್ಲಿದ್ದೇವೆ ಎಂದು ವಿಚ್ಛಿದ್ರಕಾರಿ ಹೇಳಿಕೆ ನೀಡಬಾರದು” ಎಂದು ಸೂಚಿಸಿತು. ಹಾಗೆಯೇ, ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಮ ತೆಗೆದುಕೊಳ್ಳದ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ಇದನ್ನೂ ಓದಿ: Udhayanidhi Stalin: ಸನಾತನ ಧರ್ಮ; ಉದಯನಿಧಿ ಸ್ಟಾಲಿನ್‌ಗೆ ಸುಪ್ರೀಂ ನೋಟಿಸ್, ಎದುರಾಯ್ತು ಸಂಕಷ್ಟ
ಮೊದಲು ಏನು ಹೇಳಿದ್ದರು ಉದಯನಿಧಿ ಸ್ಟಾಲಿನ್?
ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಕೆಲ ತಿಂಗಳ ಹಿಂದೆ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಉಲ್ಲೇಖ ಮಾಡಿದ್ದರು. “ ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ