ನವ ದೆಹಲಿ: ಪ್ರಸಕ್ತ ವರ್ಷದ ಶಾಂಘೈ ಸಹಕಾರ ಸಂಘಟನೆ (SCO-shanghai cooperation organisation) ಶೃಂಗದ ಆತಿಥ್ಯವನ್ನು ಭಾರತ ವಹಿಸಿಕೊಂಡಿದೆ. 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಉಜ್ಬೇಕಿಸ್ತಾನದ ಸಮರಖಂಡದಲ್ಲಿ ಶಾಂಘೈ ಸಹಕಾರ ಶೃಂಗಸಭೆ ನಡೆದಿತ್ತು. 2023ರಲ್ಲಿ ಈ ಸಭೆಯ ಆತಿಥ್ಯ ವಹಿಸುವ ದೇಶ ಭಾರತ ಎಂದು ಅಲ್ಲೇ ಘೋಷಿಸಲಾಗಿತ್ತು. ಅಂತೆಯೇ ಈ ಸಲ ಭಾರತ ಶಾಂಘೈ ಸಹಕಾರ ಶೃಂಗದ ಅಧ್ಯಕ್ಷತೆ ವಹಿಸಲಿದೆ.
ಎಸ್ಸಿಒ ಶೃಂಗಸಭೆ ನಿಮಿತ್ತ ಗೋವಾದಲ್ಲಿ ಮೇ 4 ಮತ್ತು 5ರಂದು ವಿದೇಶಾಂಗ ಸಚಿವರ ಸಭೆ ಆಯೋಜಿಸಲಾಗಿದೆ. ಶಾಂಘೈ ಸಹಕಾರ ಸಂಘಟನೆಯ ವ್ಯಾಪ್ತಿಯಲ್ಲಿ ಬರುವ ಎಂಟು ದೇಶಗಳಾದ ಭಾರತ ಚೀನಾ, ತಜಿಕಿಸ್ತಾನ್, ರಷ್ಯಾ, ಉಜ್ಬೇಕಿಸ್ತಾನ್, ಕಜಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನಗಳ ವಿದೇಶಾಂಗ ಸಚಿವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೇ, ಅಧ್ಯಕ್ಷತೆ ವಹಿಸಿರುವ ಭಾರತ ಈಗಾಗಲೇ ಚೀನಾ, ಪಾಕಿಸ್ತಾನ ಸೇರಿ ಈ ಎಲ್ಲ ದೇಶಗಳ ವಿದೇಶಾಂಗ ಸಚಿವರಿಗೆ ಔಪಚಾರಿಕವಾಗಿ ಆಮಂತ್ರಣ ನೀಡಿದೆ ಎಂದು ಹೇಳಲಾಗಿದೆ.
ಭಾರತ-ಪಾಕಿಸ್ತಾನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದ್ದು ಜಗಜ್ಜಾಹೀರು. ಹಾಗಂತ ಶಾಂಘೈ ಶೃಂಗದ ಆತಿಥ್ಯ ವಹಿಸಿರುವ ಭಾರತ, ಈ ಒಕ್ಕೂಟದ ರಾಷ್ಟ್ರಗಳಲ್ಲಿ ಒಂದಾಗಿರುವ ಪಾಕಿಸ್ತಾನಕ್ಕೆ ಆಹ್ವಾನ ನೀಡದೆ ಇರಲು ಸಾಧ್ಯವಿಲ್ಲ. ಆದರೂ ಈ ಸಂದರ್ಭ ಅತ್ಯಂತ ಮಹತ್ವ ಪಡೆದಿದೆ. ಕಾರಣ ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ಅರೇಬಿಯನ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತ, ‘ಪಾಕಿಸ್ತಾನಕ್ಕೆ ಭಾರತದೊಂದಿಗೆ ಯುದ್ಧ ಬೇಕಾಗಿಲ್ಲ. ಮೂರು ಯುದ್ಧಗಳಿಂದ ನಾವು ಪಾಠ ಕಲಿತಿದ್ದೇವೆ. ಭಾರತದೊಂದಿಗೆ ಶಾಂತಿ-ಸೌಹಾರ್ದತೆಯಿಂದ ಇರಲು ಬಯಸುತ್ತೇವೆ’ ಎಂದು ಹೇಳಿದ್ದರು. ಹಾಗೇ, ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆಯನ್ನು ನಿಯಂತ್ರಿಸಬೇಕು ಎಂದು ಪ್ರಧಾನಿ ಮೋದಿಗೆ ಮನವಿ ಕೂಡ ಮಾಡಿದ್ದರು.
ಇದನ್ನೂ ಓದಿ: Modi Birthday | ಶಾಂಘೈ ಶೃಂಗಸಭೆಯಲ್ಲಿ ಎದುರು ಸಿಕ್ಕರೂ ಮೋದಿಗೆ ಬರ್ತ್ ಡೇ ವಿಶ್ ಮಾಡಲಿಲ್ಲ ಪುಟಿನ್; ಯಾಕೆ?
ಪಾಕಿಸ್ತಾನ ಈಗಾಗಲೇ ಭಾರತದೊಂದಿಗೆ ಶಾಂತಿ ಮಂತ್ರ ಜಪಿಸಿದೆ. ಅದರ ಬೆನ್ನಲ್ಲೇ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ಪೂರ್ವಭಾವಿಯಾಗಿ ಆಯೋಜಿಸಲಾದ ವಿದೇಶಾಂಗ ಸಚಿವರ ಸಭೆಗೆ ಭಾರತದಿಂದ ಪಾಕಿಸ್ತಾನಕ್ಕೂ ಆಮಂತ್ರಣವಂತೂ ಹೋಗಿದೆ. ಆದರೆ ಪಾಕಿಸ್ತಾನ ಸರ್ಕಾರ ಆಹ್ವಾನವನ್ನು ಒಪ್ಪಿಕೊಳ್ಳುತ್ತದೆಯಾ? ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಹಾಗೊಮ್ಮೆ ಆಹ್ವಾನವನ್ನು ಪಾಕಿಸ್ತಾನ ಒಪ್ಪಿ, ಆ ದೇಶದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಗೋವಾಕ್ಕೆ ಆಗಮಿಸಿದ್ದೇ ಆದಲ್ಲಿ, 12 ವರ್ಷಗಳ ನಂತರ ಪಾಕಿಸ್ತಾನದ ವಿದೇಶಾಂಗ ಸಚಿವರೊಬ್ಬರು ಭಾರತಕ್ಕೆ ಆಗಮಿಸಿದಂತೆ ಆಗುತ್ತದೆ. 2011ರ ಜುಲೈನಲ್ಲಿ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದ ಹಿನಾ ರಬ್ಬಾನಿ ಖರ್ ಅವರು ಭಾರತಕ್ಕೆ ಬಂದು ಹೋದ ಬಳಿಕ, ಇನ್ಯಾರೂ ಬಂದಿರಲಿಲ್ಲ. ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಭಾರತದೊಂದಿಗೆ ರಾಜಿ ಮಾತನಾಡಿದ್ದರೂ, ಈ ಸಭೆಗೆ ಸಚಿವರನ್ನು ಕಳಿಸುವ ಬಗ್ಗೆ ಅವರ ನಿಲುವೇನು ಎಂಬುದು ಸ್ಪಷ್ಟವಾಗಿಲ್ಲ.