Site icon Vistara News

ಇನ್ನು ಐದು ವರ್ಷದಲ್ಲಿ ದೇಶದಲ್ಲಿ ಪೆಟ್ರೋಲ್‌ ಬ್ಯಾನ್‌ ಆಗುತ್ತಾ? ನಿತಿನ್‌ ಗಡ್ಕರಿ ಹೇಳಿದ್ದೇನು?

nitin Gadkari

ನವ ದೆಹಲಿ: ಇನ್ನು ಐದು ವರ್ಷಗಳ ಬಳಿಕ ದೇಶದಲ್ಲಿ ಪೆಟ್ರೋಲ್‌ ಬಳಕೆ ಇರುವುದಿಲ್ಲ: ಹೀಗೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ ಎಂದು ವರದಿಯಾಗಿದೆ. ಹಾಗಿದ್ದರೆ, ಐದು ವರ್ಷಗಳ ಬಳಿಕ ದೇಶದಲ್ಲಿ ಪೆಟ್ರೋಲ್‌ ವಾಹನಗಳೇ ಇರುವುದಿಲ್ಲವೇ? ಪೆಟ್ರೋಲ್‌ ಬಳಕೆ ನಿಷೇಧ ಮಾಡಲಾಗುತ್ತದೆಯೇ ಎಂಬ ಚರ್ಚೆಗಳು ಶುರುವಾಗಿವೆ.

೨೦೩೦ರ ಹೊತ್ತಿಗೆ ದೇಶದ ಎಲ್ಲ ವಾಹನಗಳು ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತನೆಯಾಗಬೇಕು ಎಂದು ಗಡ್ಕರಿ ಬಹು ಹಿಂದಿನಿಂದಲೇ ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ದೊಡ್ಡ ಮಟ್ಟದ ಪ್ರೋತ್ಸಾಹವೂ ಸಿಗುತ್ತಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಗಡ್ಕರಿ ಅವರು ಇನ್ನು ಮುಂದೆ ಪೆಟ್ರೋಲ್‌ ಸಿಗದು ಎಂದು ಹೇಳಿರಬಹುದು ಎಂಬ ಅಭಿಪ್ರಾಯವಿದೆ.

ನಿತಿನ್‌ ಗಡ್ಕರಿ ಅವರು ಈ ಹೇಳಿಕೆಯನ್ನು ನೀಡಿದ್ದು ಮಹಾರಾಷ್ಟ್ರದ ವಿದರ್ಭದಲ್ಲಿ. ಇಲ್ಲಿನ ಡಾ. ಪಂಜಾಬ್‌ ರಾವ್‌ ದೇಶ್‌ಮುಖ್‌ ಕೃಷಿ ವಿದ್ಯಾಪೀಠವು ಗೌರವಪೂರ್ವಕವಾಗಿ ಡಿಎಸ್ಸಿ ಪದವಿಯನ್ನು ನೀಡಿದೆ. ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ, ಮಾಜಿ ಕುಲಪತಿ ಡಾ. ಮೋತಿಲಾಲ್‌ ಮದನ್‌, ಕುಲಪತಿ ಡಾ. ವಿಲಾಸ್‌ ಭಾಲೆ ಮತ್ತು ಇತರರು ಭಾಗವಹಿಸಿದ್ದರು.

ಹಾಗಿದ್ದರೆ ಗಡ್ಕರಿ ಹೇಳಿದ್ದೇನು?
ʻʻಮಹಾರಾಷ್ಟ್ರದ ವಿದರ್ಭ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿರುವ ಜೈವಿಕ ಎಥನಾಲ್‌ನ್ನು ವಾಹನಗಳಲ್ಲಿ ಬಳಸಲಾಗುತ್ತಿದೆ. ಆಳವಾಗಿ ಕೊರೆದ ಬಾವಿಗಳಿಂದ ಪಡೆಯಲಾಗುವ ನೀರನ್ನು ಎಲೆಕ್ಟ್ರಾಲಿಸಿಸ್‌ ಮೂಲಕ ವಿಭಜಿಸಿ ಗ್ರೀನ್‌ ಹೈಡ್ರೋಜನನ್ನು ಪಡೆಯಬಹುದು. ಇದನ್ನು ಒಂದು ಕೆಜಿಗೆ ೭೦ ರೂ.ಗಳಿಗೆ ಮಾರಾಟ ಮಾಡಬಹುದುʼʼ ಎಂದು ಗಡ್ಕರಿ ಹೇಳಿದ್ದಾರೆ. ಪೆಟ್ರೋಲ್‌ನಂಥ ಪಳೆಯುಳಿಕೆ ಇಂಧನಗಳು ಇನ್ನು ಐದು ವರ್ಷದಲ್ಲಿ ಖಾಲಿಯಾಗಬಹುದು ಎನ್ನುತ್ತಾ, ಪರ್ಯಾಯದ ಬಗ್ಗೆ ಯೋಚಿಸಬೇಕಾಗಿದೆ ಎಂದರು.

ಇಷ್ಟೇ ಅಲ್ಲ, ʻʻರೈತರು ಕೇವಲ ಆಹಾರವನ್ನು ಕೊಡುವವರಾದರೆ ಸಾಲದು. ಇಂಧನವನ್ನೂ ಕೊಡುವವರಾಗಬೇಕು. ಕೇವಲ ಗೋಧಿ, ಅಕ್ಕಿ, ಜೋಳ ಬೆಳೆದುಕೊಂಡಿದ್ದರೆ ಯಾವ ರೈತರ ಬದುಕೂ ಬದಲಾಗುವುದಿಲ್ಲʼʼ ಎಂದು ಗಡ್ಕರಿ ಹೇಳಿದರು.

ಇದನ್ನೂ ಓದಿ| NH17 : ಗೋವಾ- ಕರ್ನಾಟಕ ಹೆದ್ದಾರಿ ಸೊಬಗಿಗೆ ಮನಸೋತ ಕೇಂದ್ರ ಸಚಿವ ಗಡ್ಕರಿ

Exit mobile version