Site icon Vistara News

Rahul Gandhi: ಲೋಕಸಭೆಯಿಂದ ರಾಹುಲ್‌ ಗಾಂಧಿ ಅನರ್ಹ ನಿಶ್ಚಿತ? ಏನು ಹೇಳುತ್ತದೆ ಕಾನೂನು?

Will Rahul Gandhi Be Disqualified As MP After Court Sentence

ರಾಹುಲ್‌ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದಾಖಲಾದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರಿಗೆ ಸೂರತ್‌ ಜಿಲ್ಲಾ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸದ್ಯ ರಾಹುಲ್‌ ಗಾಂಧಿ ಅವರಿಗೆ ಜಾಮೀನು ದೊರೆತಿದ್ದು, ಅವರು ಲೋಕಸಭೆಯ ಸದಸ್ಯತ್ವವನ್ನೇ ಕಳೆದುಕೊಳ್ಳುತ್ತಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಹಾಗಾದರೆ, ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಕಾರಣ ರಾಹುಲ್‌ ಗಾಂಧಿ ಅವರು ಸಂಸದ ಸ್ಥಾನ ಕಳೆದುಕೊಳ್ಳಲಿದ್ದಾರಾ? ಕಾನೂನು ಏನು ಹೇಳುತ್ತದೆ? ಅವರ ಮುಂದಿನ ಆಯ್ಕೆಗಳು ಯಾವವು? ಜೈಲು ಶಿಕ್ಷೆಯಿಂದ ಅವರು ಪಾರಾಗಲು ಸಾಧ್ಯವೇ ಇಲ್ಲವೇ ಎಂಬ ಪ್ರಶ್ನೆಗಳು ಮೂಡಿವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಂಕ್ಷಿಪ್ತ ಮಾಹಿತಿ ಹೀಗಿದೆ.

ರಾಹುಲ್‌ ಗಾಂಧಿ ಮುಂದಿನ ಆಯ್ಕೆಗಳೇನು?

ಸೂರತ್‌ ಜಿಲ್ಲಾ ನ್ಯಾಯಾಲಯು ರಾಹುಲ್‌ ಗಾಂಧಿ ಅವರಿಗೆ 30 ದಿನಗಳ ಜಾಮೀನು ನೀಡಿದೆ. ಇಷ್ಟು ಅವಧಿಯಲ್ಲಿ ರಾಹುಲ್‌ ಗಾಂಧಿ ಹೊರತಾಗಿ ಬೇರೆಯವರು ಮೇಲ್ಮನವಿ ಸಲ್ಲಿಸಬೇಕು. ಆಗ, ಉನ್ನತ ನ್ಯಾಯಾಲಯವು ರಾಹುಲ್‌ ಗಾಂಧಿ ಅವರಿಗೆ ನೀಡಿದ ಶಿಕ್ಷೆಯನ್ನು ರದ್ದುಗೊಳಿಸಿದರೆ ಅಥವಾ ಸೂರತ್‌ ಕೋರ್ಟ್‌ ತೀರ್ಪಿಗೆ ತಡೆಯಾಜ್ಞೆ ನೀಡಿದರೆ ಮಾತ್ರ ರಾಹುಲ್‌ ಗಾಂಧಿ ಜೈಲು ಶಿಕ್ಷೆಯಿಂದ ಬಚಾವಾಗುತ್ತಾರೆ.

ಜನಪ್ರತಿನಿಧಿ ಕಾಯ್ದೆ ಏನು ಹೇಳುತ್ತದೆ?

ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಎರಡು ಪ್ರಕರಣಗಳಲ್ಲಿ ಲೋಕಸಭೆ ಸದಸ್ಯತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ. ಸೆಕ್ಷನ್‌ 153 ಎ ಅಡಿಯಲ್ಲಿ (ಧರ್ಮ, ಜಾತಿ, ವಾಸಸ್ಥಳ, ಹುಟ್ಟಿದ ಸ್ಥಳ, ಭಾಷೆ ಸೇರಿ ಹಲವು ಆಧಾರಗಳ ಮೇಲೆ ಬೇರೆ ಗುಂಪುಗಳ ಮಧ್ಯೆ ದ್ವೇಷ ಹರಡುವ, ಅಪರಾಧಕ್ಕೆ ಎಡೆಮಾಡಿಕೊಡುವುದು), ಸೆಕ್ಷನ್‌ 171 ಇ ಅಡಿಯಲ್ಲಿ (ಲಂಚ) ಹಾಗೂ ಸೆಕ್ಷನ್‌ 171 ಎಫ್‌ (ಚುನಾವಣೆಯಲ್ಲಿ ಪ್ರಭಾವ ಬೀರುವುದು) ಅಡಿಯಲ್ಲಿ ಅಪರಾಧಿ ಎಂದು ಸಾಬೀತಾದರೆ ಸಂಸತ್‌ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ರಾಹುಲ್ ಗಾಂಧಿಗೆ ಜೈಲು ಶಿಕ್ಷೆ: ಬೇಕಾಬಿಟ್ಟಿ ಹೇಳಿಕೆ ನೀಡುವ ರಾಜಕಾರಣಿಗಳಿಗೆ ಎಚ್ಚರಿಕೆಯ ಪಾಠ

ಹಾಗೆಯೇ, ಯಾವುದೇ ಸಂಸದ, ಶಾಸಕ ಅಥವಾ ವಿಧಾನ ಪರಿಷತ್‌ ಸದಸ್ಯನ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿ, ಅವರಿಗೆ ನ್ಯಾಯಾಲಯವು ಕನಿಷ್ಠ ಎರಡು ವರ್ಷ ಅಥವಾ ಅಧಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆ ವಿಧಿಸಿದರೆ ಅವರು ಕೂಡ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಹಾಗಾಗಿ, ಮಾನಹಾನಿ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ರಾಹುಲ್‌ ಗಾಂಧಿ ಕೂಡ ಅನರ್ಹರಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Exit mobile version