Site icon Vistara News

Somnath Bharti: ಮೋದಿ 3ನೇ ಸಲ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುವೆ ಎಂದ ಆಪ್‌ ನಾಯಕ!

Somnath Bharti

Will Shave My Head If Narendra Modi Becomes PM Again: AAP's Somnath Bharti On Exit Poll 2024

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ತೆರೆ ಬಿದ್ದಿದ್ದು, ಮತಗಟ್ಟೆ ಸಮೀಕ್ಷೆಗಳು ಕೂಡ ಬಹಿರಂಗವಾಗಿವೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹೇಳಿದಂತೆ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸದಿದ್ದರೂ, ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ತಿಳಿಸಿವೆ. ಆದರೆ, ಆಪ್‌ ನಾಯಕ, ನವದೆಹಲಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಸೋಮನಾಥ್‌ ಭಾರ್ತಿ (Somnath Bharti) ಅವರು ಮತಗಟ್ಟೆ ಸಮೀಕ್ಷೆಯನ್ನು ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲ, “ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾದರೆ ನನ್ನ ತಲೆ ಬೋಳಿಸಿಕೊಳ್ಳುತ್ತೇನೆ” ಎಂದಿದ್ದಾರೆ.

“ಜೂನ್‌ 4ರಂದು ಎಲ್ಲ ಮತಗಟ್ಟೆ ಸಮೀಕ್ಷೆಗಳು ತಪ್ಪು ಎಂಬುದು ಸಾಬೀತಾಗಲಿದೆ. ಖಂಡಿತವಾಗಿಯೂ, ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದಿಲ್ಲ. ದೆಹಲಿಯ ಎಲ್ಲ 7 ಲೋಕಸಭೆ ಕ್ಷೇತ್ರಗಳಲ್ಲೂ ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಇನ್ನು, ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾದರೆ, ನಾನು ನನ್ನ ತಲೆಯನ್ನು ಬೋಳಿಸಿಕೊಳ್ಳುತ್ತೇನೆ” ಎಂಬುದಾಗಿ ಮತಗಟ್ಟೆ ಸಮೀಕ್ಷೆಗಳ ವರದಿಗಳ ಬಳಿಕ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ ಈಗ ವೈರಲ್‌ ಆಗಿದ್ದು, ಜೂನ್‌ 4ರಂದು ತಲೆ ಬೋಳಿಸಿಕೊಳ್ಳಲು ಸಜ್ಜಾಗಿ ಎಂಬುದಾಗಿ ಜನ ಪ್ರತಿಕ್ರಿಯಿಸಿದ್ದಾರೆ.

ಮತಗಟ್ಟೆ ಸಮೀಕ್ಷೆಯ ಸಾರವೇನು?

ಎಲ್ಲ ಸಮೀಕ್ಷಾ ವರದಿಗಳನ್ನು ವಿಶ್ಲೇಷಿಸಿದಾಗ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಒಟ್ಟು 543 ಕ್ಷೇತ್ರಗಳ ಪೈಕಿ 355-380 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ 2019ರ ಲೋಕಸಭೆ ಚುನಾವಣೆ ಫಲಿತಾಂಶವೇ ಮರುಕಳಿಸಲಿದೆ ಎಂದು ಹೇಳಲಾಗುತ್ತಿದೆ. 2019ರಲ್ಲಿ ಎನ್‌ಡಿಎ ಮೈತ್ರಿಕೂಟವು 353 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿಯೊಂದೇ 303 ಕ್ಷೇತ್ರಗಳಲ್ಲಿ ಜಯ ಕಂಡಿತ್ತು.

ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟವು ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ 125-165 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದು ಮತಗಟ್ಟೆ ಸಮೀಕ್ಷೆಗಳ ಒಟ್ಟು ಸಾರವಾಗಿದೆ. ಇದರೊಂದಿಗೆ ಇಂಡಿಯಾ ಒಕ್ಕೂಟವು ಮ್ಯಾಜಿಕ್‌ ನಂಬರ್‌ (272) ಬಿಡಿ, 200 ಕ್ಷೇತ್ರಗಳನ್ನೂ ತಲುಪುವುದಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಇದರೊಂದಿಗೆ ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳಿಗೆ ಸತತ ಮೂರನೇ ಬಾರಿಯೂ ಹಿನ್ನಡೆಯಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ದಕ್ಷಿಣದಲ್ಲಿ ಬಿಜೆಪಿಗೆ ಮುನ್ನಡೆ

ದಕ್ಷಿಣ ಭಾರತದಲ್ಲಿ, ಅದರಲ್ಲೂ ಕೇರಳ ಹಾಗೂ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಬಹುತೇಕ ಸಮೀಕ್ಷೆಗಳು ತಮಿಳುನಾಡಿನಲ್ಲಿ ಬಿಜೆಪಿ 1-3 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಅಂದಾಜಿಸಿವೆ. ಕಾಂಗ್ರೆಸ್ 8-11, ಬಿಜೆಪಿ 36-39 ಮತ್ತು ಇತರರು 0-2 ಸ್ಥಾನಗಳನ್ನು ಪಡೆಯಲಿವೆ. ಬಹು ಕಟ್ಟರ್ ಪ್ರಾಂತೀಯವಾದಿ ಮತದಾರರು ಇರುವ ತಮಿಳುನಾಡಿನಲ್ಲಿ ಖಾತೆ ತೆರೆಯುವುದು ಬಿಜೆಪಿಗೆ ಸುಲಭ ಮಾತಲ್ಲ. ಹೀಗಾಗಿ ಈ ಸಲ ಗೆದ್ದರೆ ಅದೊಂದು ಐತಿಹಾಸಿಕ ಸಾಧನೆಯಾಗಲಿದೆ. ಎನ್​ಡಿಎ ಕೇರಳದಲ್ಲಿ ಒಂದರಿಂದ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಖಾತೆಯನ್ನು ತೆರೆಯಲು ಸಜ್ಜಾಗಿದೆ ಎಂಬುದಾಗಿ ಸಮೀಕ್ಷೆಗಳು ಅಂದಾಜಿಸಿವೆ.

ಇದನ್ನೂ ಓದಿ: Poll Of Polls: ಎನ್‌ಡಿಎಗೆ 350+ ಸೀಟು, ದಕ್ಷಿಣದಲ್ಲೂ ಬಿಜೆಪಿಗೆ ಸ್ವೀಟು, ಇಂಡಿಯಾ ‌ಕೂಟಕ್ಕೆ ಹಿನ್ನಡೆಯ ಏಟು!

Exit mobile version