ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ, ಮಾಜಿ ಮುಖ್ಯಸ್ಥ ಲಲಿತ್ ಮೋದಿ (Lalit Modi) ಈಗ ಕಾಂಗ್ರೆಸ್ ನಾಯಕ, ಅನರ್ಹ ಸಂಸದ ರಾಹುಲ್ ಗಾಂಧಿ (Rahul Gandhi) ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಅಷ್ಟಲ್ಲದೆ, ಯುಕೆ ಕೋರ್ಟ್ನಲ್ಲಿ ರಾಹುಲ್ ಗಾಂಧಿ ವಿರುದ್ಧ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಹುಲ್ ಗಾಂಧಿಯವರು ಮೋದಿ ಉಪನಾಮಕ್ಕೆ ಮಾಡಿದ ಅಪಮಾನದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ನ ಇತರ ನಾಯಕರು ತಮ್ಮನ್ನು ದೇಶಭ್ರಷ್ಟ ಎಂದು ಹೀಗಳೆಯುತ್ತಿರುವುದರ ವಿರುದ್ಧ ಅವರು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿಯವರು 2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ಮಾತನಾಡಿ ‘ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದೇ ಇರುತ್ತದೆ ಎಂಬ ಬಗ್ಗೆ ನನಗೆ ಅಚ್ಚರಿಯಾಗುತ್ತದೆ’ ಎಂದು ಹೇಳಿದ್ದರು. ಈ ಅಕ್ರಮ ಹಣಕಾಸು ವರ್ಗಾವಣೆ, ತೆರಿಗೆ ವಂಚನೆ ಮಾಡಿ ದೇಶದಿಂದ ಪರಾರಿಯಾಗಿರುವ ಲಲಿತ್ ಮೋದಿ, ನೀರವ್ ಮೋದಿಯನ್ನು ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಮೋದಿ ಎಂಬ ಉಪನಾಮಕ್ಕೆ ಅಪಮಾನ ಮಾಡಿದ ಆರೋಪದಡಿ ಅವರ ವಿರುದ್ಧ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಕೇಸ್ನ ತೀರ್ಪನ್ನು ಮಾರ್ಚ್ 23ರಂದು ಸೂರತ್ ಕೋರ್ಟ್ ನೀಡಿದ್ದು, ರಾಹುಲ್ ಗಾಂಧಿ ದೋಷಿ ಎಂದು ಹೇಳಿದೆ. 2 ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಿದೆ. ಅದರ ಬೆನ್ನಲ್ಲೇ ಲೋಕಸಭೆ ಸದಸ್ಯತ್ವ ಸ್ಥಾನದಿಂದ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಲಾಗಿದೆ.
ಲಲಿತ್ ಮೋದಿ 2010ರಿಂದಲೂ ಯುಕೆಯಲ್ಲಿ ವಾಸವಾಗಿದ್ದು, ಅವರ ಆರೋಗ್ಯವೂ ಸರಿಯಾಗಿಲ್ಲ. ಈಗ ಟ್ವೀಟ್ ಮೂಲಕ ರಾಹುಲ್ ಗಾಂಧಿಗೆ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಮೂರು ಟ್ವೀಟ್ ಮಾಡಿರುವ ಅವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಇರುವ ಗಾಂಧಿ ಮತ್ತು ಅವರ ಸಹಚರರು, ಹಾಗೇ, ಸಾಮಾನ್ಯ ಜನರೂ ಕೂಡ ನಾನೊಬ್ಬ ದೇಶಭ್ರಷ್ಟ ಪಲಾಯನವಾದಿ ಎನ್ನುತ್ತಿದ್ದಾರೆ. ಅದು ಹೇಗೆ? ಮತ್ತು ಯಾಕೆ? ಎಂದು ನನಗೆ ಅರ್ಥವಾಗುತ್ತಿಲ್ಲ. ಈ ವಿಚಾರದಲ್ಲಿ ನಾನು ಯಾವಾಗ ದೋಷಿ ಎಂದು ಘೋಷಿಸಲ್ಪಟ್ಟಿದ್ದೇನೆ. ರಾಹುಲ್ ಗಾಂಧಿ (ಪಪ್ಪು)ಯಂತೆ ನಾನು ಯಾವ ಪ್ರಕರಣದಲ್ಲಿ ದೋಷಿಯಾಗಿದ್ದೇನೆ? ಅಂದ ಮೇಲೆ ನನ್ನನ್ನು ಯಾಕೆ ದೇಶಭ್ರಷ್ಟ ಎನ್ನಬೇಕು. ಭಾರತದಲ್ಲಿ ಪ್ರತಿಪಕ್ಷಗಳ ನಾಯಕರಿಗೆ ಮಾಡಲು ಏನೂ ಕೆಲಸವಿಲ್ಲ ಎಂದು ತೋರುತ್ತದೆ. ಒಂದೋ ಅವರಿಗೆ ನನ್ನ ವಿಷಯದಲ್ಲಿ ಸರಿಯಾಗಿ ಮಾಹಿತಿ ಇಲ್ಲ ಅಥವಾ ಮನಸಲ್ಲಿರುವ ದ್ವೇಷವನ್ನು ಹೀಗೆ ತೋರಿಸಿಕೊಳ್ಳುತ್ತಿರಬೇಕು. ರಾಹುಲ್ ಗಾಂಧಿಯನ್ನಂತೂ ಖಂಡಿತವಾಗಿಯೂ ಯುಕೆ ಕೋರ್ಟ್ಗೆ ಎಳೆಯಬೇಕು, ಅವರ ವಿರುದ್ಧ ಇಲ್ಲಿಯೇ ಮೊಕದ್ದಮೆ ಹೂಡಬೇಕು ಎಂದು ನಿರ್ಧರಿಸಿಬಿಟ್ಟಿದ್ದೇನೆ. ರಾಹುಲ್ ಗಾಂಧಿ ಕೋರ್ಟ್ಗೆ ಬರಬೇಕು ಎಂದರೆ, ನಿಖರ ಸಾಕ್ಷಿಯೊಂದಿಗೇ ಬರಬೇಕು. ಅರ್ಧಂಬರ್ಧ ಮೂರ್ಖನಂತಾಗಿರುವ ರಾಹುಲ್ ಗಾಂಧಿ, ಕೋರ್ಟ್ಗೆ ಬಂದು ನಿಂತು ತನ್ನನ್ನು ತಾನು ಸಂಪೂರ್ಣವಾಗಿ ಮೂರ್ಖನನ್ನಾಗಿಸಿಕೊಳ್ಳುವುದನ್ನು ನಾನು ನೋಡಬೇಕು’ ಎಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ.
ನಾನು ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮಾಡಿದ್ದೇನೆ ಎಂದು ಹೇಳಲಾಗುತ್ತಿದೆ. ಆದರೆ ಕಳೆದ 15ವರ್ಷಗಳಲ್ಲಿ ಒಂದು ರೂಪಾಯಿ ನಾನು ತೆಗೆದುಕೊಂಡಿದ್ದನ್ನೂ ಸಾಕ್ಷೀಕರಿಸಲು ಸಾಧ್ಯವಾಗಲಿಲ್ಲ. ತನಿಖೆ ನಡೆಯುತ್ತಿದೆ. ನಾನು ಹುಟ್ಟುಹಾಕಿದ ಮಹತ್ವದ ಕ್ರೀಡೆ ಐಪಿಎಲ್ ಈಗ ಜಗತ್ತಿನಾದ್ಯಂತ ಮಹತ್ವ ಪಡೆದಿದೆ. 100 ಬಿಲಿಯನ್ ಡಾಲರ್ಗೂ ಹೆಚ್ಚು ಆದಾಯ ತರುತ್ತಿದೆ. ಹೀಗೆಲ್ಲ ಇರುವಾಗ ಗಾಂಧಿ ಕುಟುಂಬದ ಆ ವ್ಯಕ್ತಿಗೆ ಮಾತ್ರ ಯಾವುದೂ ಅರ್ಥವಾಗುತ್ತಿಲ್ಲ. ಹಗರಣವಾಯಿತು ಎಂದು ಗಾಂಧಿ ಕುಟುಂಬ ಬೊಗಳುತ್ತಲೇ ಇರಲಿ ಎಂದಿದ್ದಾರೆ. ಹಾಗೇ, ನಿಮ್ಮ ಭಾಷಣ ಕೇಳಿ, ಒಂದಷ್ಟು ಫೋಟೋಗಳನ್ನು ತೋರಿಸಿದಾಕ್ಷಣ ಭಾರತದ ಜನರು ನಂಬುವುದಿಲ್ಲ ಎಂದು ಹೇಳಿದ ಲಲಿತ್ ಮೋದಿ, ‘ನೀವು ಭಾರತದಲ್ಲಿ ಒಂದು ಬಾಧ್ಯವಾದ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ ದಿನ ನಾನು ವಾಪಸ್ ಬರುತ್ತೇನೆ’ ಎಂದೂ ಹೇಳಿಕೊಂಡಿದ್ದಾರೆ.
ಈ ಹಿಂದೆ 2019ರಲ್ಲಿ ರಾಹುಲ್ ಗಾಂಧಿಯವರು ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದೇ ಇರುತ್ತದೆ ಎಂದು ಹೇಳಿದ್ದಾಗಲೂ ಲಲಿತ್ ಮೋದಿ ವಿರೋಧಿಸಿದ್ದರು. ಟ್ವೀಟ್ ಮಾಡಿದ್ದ ಅವರು ಆಗಲೂ ಸಹ ಯುಕೆ ಕೋರ್ಟ್ನಲ್ಲಿ ಮೊಕದ್ದಮೆ ಹಾಕುವುದಾಗಿ ತಿಳಿಸಿದ್ದರು. ಕಳ್ಳರು ಯಾರು? ಮೋದಿ ಉಪನಾಮ ಹೊಂದಿರುವವರೆಲ್ಲ ಕಳ್ಳರು ಎನ್ನುತ್ತೀರಲ್ಲ, ಐದು ದಶಕಗಳ ಕಾಲ ಭಾರತ ದೇಶವನ್ನು ಕೊಳ್ಳೆ ಹೊಡೆದವರು ಯಾರು ಎಂಬುದು ವಿಶ್ವಕ್ಕೇ ಗೊತ್ತಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ/ಗಾಂಧಿ ಕುಟುಂಬದ ವಿರುದ್ಧ ಕಿಡಿಕಾರಿದ್ದರು.